Advertisement

ತ್ಯಾಗಮೂರ್ತಿಗೆ ಭಕ್ತಿಯ ಧಾರೆ

06:00 AM Feb 18, 2018 | |

ಶ್ರವಣಬೆಳಗೊಳ: ಜಿನ ಗಣ ಮನದ ಅಧಿನಾಯಕನ ಆರಾಧನೆಯಿಂದ ತಂಪಾಗಿತ್ತು ಇಂದ್ರಗಿರಿಯ ನೆತ್ತಿ. ಮುಗಿಲವೀರ ಬಾಹುಬಲಿಯ ಕಣ್ಣ ಮಿಂಚಲ್ಲಿ ಭಕ್ತಿಯ ವರ್ಣರಂಜಿತ ಹೊನಲನ್ನು ಹುಡುಕುತಾ, ನೆತ್ತಿಯಿಂದ ಪಾದದ ವರೆಗೆ ಪುಟ್ಟ ಮಗುವಿನಂತೆ ಮೀಯುವ ಅವನ ಮುಗ್ಧತೆಯನ್ನು ನೋಡುತಾ, 88ನೇ ಮಹಾಮಸ್ತಕಾಭಿಷೇಕದ ಪುಳಕಕ್ಕೆ ಸಾಕ್ಷಿ ಆಯಿತು ಜೈನಕಾಶಿ. ಯಾವ ಶೃಂಗಾರ ಇಲ್ಲದಿದ್ದರೂ ಸರ್ವಸುಂದರನಾಗಿದ್ದ, ಯಾವ ಕಲೆಯೂ ಇಲ್ಲದಿದ್ದರೂ ಅಸಾಮಾನ್ಯ ಕಲೆಯಾಗಿದ್ದ ಬಾಹುಬಲಿ, ರೂಪ ರೂಪಗಳನು ದಾಟಿ, ಮೂಡಿಸಿದ ಬೆರಗಿಗೆ ಬಾಹುಬಲಿಯೇ ಸಾಟಿ.


ಮೈಸುಡುವ ಆ ಘೋರ ಬಿಸಿಲು ಭರತನಂತೆ ಆರ್ಭಟಿಸಿದರೂ, ಅಲ್ಲಿ ತಣ್ಣಗೆ ಮೀಯುತ್ತಾ, ಭಕ್ತರ ಅಂತರಂಗಕ್ಕೂ ತಂಪೆರೆಯುತ್ತಾ, ಮಲ್ಲಯುದ್ಧ- ಜಲಯುದ್ಧ- ದೃಷ್ಟಿಯುದ್ಧಗಳ ಬಳಿಕ ನಾಲ್ಕನೇ ಯುದ್ಧದಲ್ಲಿ ಗೆದ್ದ ವೀರನಂತೆ ಕಾಣಿಸುವ ವಿರಾಗಿ ಮಂದಸ್ಮಿತನಾಗಿದ್ದ. ಪ್ರಖರ ಸೂರ್ಯ ಭಕ್ತರನ್ನು ಬಸವಳಿಸಲು ಸೋತು, ಧರ್ಮಜ್ಯೋತಿ ಬೆಳಗಿಸಿ ಅಸ್ತಂಗತನಾದ. ದರ್ಪಣದಂತೆ ನಿರ್ಮಲವಾದ ಶರೀರ, ಜಲದಂತೆ ಸ್ವತ್ಛವಾಗಿದ್ದ ಕಪೋಲ, ಭುಜ ಮುಟ್ಟುವಂತಿದ್ದ ಕಿವಿ, ಗಜರಾಜನ ಸೊಂಡಿಲಿನಂತೆ ಗತ್ತಿನಲ್ಲಿ ಇಳಿಬಿದ್ದ ಆಜಾನುಬಾಹುವನ್ನು ಸಂಪೂರ್ಣವಾಗಿ ಮೀಯಿಸಲು ನಾನಾ ಅಭಿಷೇಕಗಳು ಸಾಹಸಪಟ್ಟವು.

Advertisement

ಕಂಗೊಳಿಸಿದ ಬಾಹುಬಲಿ:
ಆರಂಭದ 13ನೇ ನಿಮಿಷದಲ್ಲಿ ಕಣ್ಣಂಚು ಪೂರ್ತಿಯಾಗಿ, 42ನೇ ನಿಮಿಷದಲ್ಲಿ ಕಿವಿಯು, 57ನೇ ನಿಮಿಷದಲ್ಲಿ ಹಾಲ್ಗಲ್ಲವು ಒದ್ದೆಯಾದಾಗ ಗೊಮ್ಮಟ ಒಮ್ಮೆಲೆ, ಗುಳ್ಳಕಾಯಜ್ಜಿಯನ್ನು ನೆನೆಸಿಕೊಂಡು ನಕ್ಕ. ನಂತರವೆಲ್ಲ ನಡೆದಿದ್ದು ಬಾಹುಬಲಿಯ ರಂಗಿನೋಕುಳಿ.


ಒಂದೊಂದು ಅಭಿಷೇಕ, ಒಂದೊಂದು ರೂಪದಲ್ಲಿ ಬಾಹುಬಲಿಯನ್ನು ಚಿತ್ರಿಸಿತ್ತು. ಅರಿಶಿನಕ್ಕೆ ಬಂಗಾರವಾಗಿ, ಎಳನೀರಿಗೆ ತಿಳಿಮೂರ್ತಿಯಾಗಿ, ಶ್ವೇತ ಕಲ್ಕಚೂರ್ಣಕ್ಕೆ ನಿಂತಲ್ಲೇ ಹಬೆಯೆಬ್ಬಿಸಿದ ಹಾಗೆ, ಶ್ರೀಗಂಧಕ್ಕೆ ಘಮ್ಮೆನ್ನುವ ಕೊರಡಾಗಿ, ಕೇಸರಿಗೆ ಕೆಂಪುಧೀರನಾಗಿ, ಗಿಡಮೂಲಿಕೆ ಕಷಾಯ ಮೈಮೇಲೆ ಬಿದ್ದಾಗ ಕಗ್ಗಲ್ಲ ಮೂರ್ತಿಯಂತೆ, ಅಷ್ಟಗಂಧ ಲೇಪಿಸಿಕೊಂಡಾಗ ಕಡುಗೆಂಪಾಗಿ ಕಂಡ ಬಾಹುಬಲಿಗೆ ನಾನಾ ಉದ್ಗಾರಗಳು ಸ್ವರಾಭಿಷೇಕವಾದವು. ಪುಷ್ಪಗಳು ನೆತ್ತಿ ಮೇಲೆ ಮಳೆಗರೆದಾಗ, ಬಾಹುಬಲಿಯೇ ಹೂವಿನಂತೆ ಕಂಗೊಳಿಸಿದರು. ಇವನ್ನೆಲ್ಲ ದೇವಗಣ, ಮನುಷ್ಯಗಣ, ಭಕ್ತಿಗಣಗಳು ಪರಮಾಶ್ಚರ್ಯದಲ್ಲಿ ಕಣ್ತುಂಬಿಕೊಂಡವು.

ಮಹಾಸಂಭ್ರಮದ ಕ್ಷಣ:
ಕಾಲಾತೀತ ಏಕಶಿಲೆಯನ್ನು ಕಟೆದು ನಿಲ್ಲಿಸಿದ ಅರಿಷ್ಟನೇಮಿ, ಚಾವುಂಡರಾಯರು ಅಲ್ಲೇ ಎಲ್ಲೋ ಅಗೋಚರವಾಗಿ ನಿಂತಂತೆ; ಭಗವಂತನ ಇಕ್ಕೆಲಗಳಲ್ಲಿ ಸ್ವರ್ಗ ಸೃಷ್ಟಿಸಿಕೊಂಡ ದೇವೇಂದ್ರನೂ ನಾಚಿದಂತೆ; ಮುಗಿಲ ಮೂರ್ತಿಯನ್ನು ಹಾಡಿಹೊಗಳಿದ ಕವಿ ಬೊಪ್ಪಣ, ಆದಿಕವಿ ಪಂಪ, ಎಂ. ಗೋವಿಂದ ಪೈ, ಕುವೆಂಪು, ಜಿ.ಪಿ. ರಾಜರತ್ನಂ, ಸುರಂ ಎಕ್ಕುಂಡಿ, ಜಿಎಸ್ಸೆಸ್‌ ಅವರೆಲ್ಲ ಕವಿಗೋಷ್ಠಿ ಮೂಲಕ ಉಘೇ ಎನ್ನುತ್ತಿದ್ದಂತೆ ಭಾಸವಾಗಿತ್ತು. ಮಹಾಮೂರ್ತಿಯನ್ನು ಸಂಗೀತದ ಮೂಲಕ ಹೊಗಳುತ್ತಿದ್ದ ಹೆಂಗಳೆಯರ ಕಂಠವೂ, ಗಂಧರ್ವ ಲೋಕವನ್ನು ಧರೆಗಿಳಿಸಿತ್ತು. ರಂಗಮಾ ರಂಗಮಾ…, ಕೇಸರಿಯಾ ಕೇಸರಿಯಾ… ಹಾಡುಗಳು ಬೆಟ್ಟವಿಳಿದ ಮೇಲೂ ಕಿವಿಯೊಳಗೆ ನಾದಲೀಲೆ ಸೃಷ್ಟಿಸಿದ್ದವು.


ಸಹಸ್ರಾರು ಜನರನ್ನು ತಲೆಮೇಲೆ ಹೊತ್ತಿದ್ದ ಅಟ್ಟಣಿಗೆಯ ಮೇಲೆ ಕೆಂಪು, ಕೇಸರಿ, ಬಿಳಿ, ಹಸಿರು, ನೀಲಿ ಬೆರೆತ ಜೈನ ಬಾವುಟಗಳು, ಬಾಹುಬಲಿಯ ಸಮೇತವಾಗಿ ಇಂದ್ರಗಿರಿಯನ್ನು ಆಗಸದಲ್ಲಿ ತೇಲಿಸುತ್ತಿದ್ದವು. ಅದೊಂದು ಪುಷ್ಪಕ ವಿಮಾನದಲ್ಲಿ ಕಂಡ ಮಹಾಸಂಭ್ರಮದಂತೆ ಜನ ಸಂಭ್ರಮಿಸಿದರು.

ಕಡಲ ಗಾಂಭೀರ್ಯದ ನಿಲುವು, ಗಗನದೌದಾರ್ಯದ ಬಾಹುಬಲಿಗೆ ಇಷ್ಟೆಲ್ಲ ವೈಭವದ ಆರಾಧನೆ ನಡೆದಿದ್ದು, ಮಧ್ಯಪ್ರದೇಶದ ವರ್ಧಮಾನ ಸಾಗರ ಮಹಾರಾಜರ ನೇತೃತ್ವದಲ್ಲಿ. ದಿಗಂಬರ ಮುನಿಗಳು, ಜೈನ ಆಚಾರ್ಯರು ಮೊದಲು ಕಲಶದ ಅಭಿಷೇಕದಿಂದ ಬಾಹುಬಲಿಯ ನೆತ್ತಿ ತಂಪು ಮಾಡಿದ ಬಳಿಕ, ಶ್ರವಣಬೆಳಗೊಳ ಜೈನಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಷೇಕ ಪೂರೈಸಿದರು. ನಂತರ ಹರಾಜಿನಲ್ಲಿ ಕಲಶ ಕೊಂಡವರು ತಮ್ಮ ನೆಚ್ಚಿನ ಸ್ವಾಮಿಗೆ ಮಂಡೆಸ್ನಾನ ಮಾಡಿದರು.

ಬಾಹುಬಲಿಯ ಮಂಡೆ ಮೇಲೆ ನಡೆದದ್ದು:
ಜಲಾಭಿಷೇಕ, ಎಳನೀರು, ಕಬ್ಬಿನರಸ, ಕ್ಷೀರ, ಶ್ವೇತ ಕಲ್ಕ ಚೂರ್ಣ, ಅರಿಶಿನ, ಗಿಡಮೂಲಿಕೆ ಕಷಾಯ, ಪ್ರಥಮ ಕೋನ ಕಳಶ, ದ್ವಿತೀಯ ಕೋನ ಕಳಶ, ತೃತೀಯ ಕೋನ ಕಳಶ, ಚತುರ್ಥ ಕೋನ ಕಳಶ, ಶ್ರೀಗಂಧ, ಚಂದನ, ಅಷ್ಟಗಂಧ, ಕೇಸರ ವೃಷ್ಟಿ, ರಜತ ವೃಷ್ಟಿ, ಸುವರ್ಣ ವೃಷ್ಟಿ, ಪುಷ್ಪವೃಷ್ಟಿ, ಪೂರ್ಣಕುಂಭ, ಇಂದ್ರ- ಅಷ್ಟದ್ರವ್ಯ ಪೂಜೆ, ಮಹಾಮಂಗಳಾರತಿ.

Advertisement

ಕಲಶಗಳ ವರ್ಗೀಕರಣ ಹೀಗೆ:
ಪ್ರಥಮ ಕಲಶ, ಸುವರ್ಣ ಕಲಶ, ಕಾಂಸ್ಯ ಕಳಶ, ಶತಾಬ್ಧಿ ಕಲಶ, ದಿವ್ಯ ಕಲಶ, ಶುಭ ಮಂಗಳ ಕಲಶ, ರತ್ನ ಕಲಶ, ತಾಮ್ರ ಕಲಶ, ಗುಳಕಾಯಜ್ಜಿ ಕಲಶ.

ದಾಖಲೆ ಬರೆದ ಮೊದಲ ಕಲಶ
ರಾಜಸ್ಥಾನ ಮೂಲದ ಆರ್‌.ಕೆ.ಮಾರ್ಬಲ್ಸ್‌ ನ ಅಶೋಕ್‌ ಪಾಟ್ನಿ ಕುಟುಂಬದವರು ಈ ಬಾರಿ 11.61 ಕೋಟಿ ರೂ. ಮೊತ್ತಕ್ಕೆ ಪ್ರಥಮ ಕಲಶವನ್ನು ಖರೀದಿಸಿ, ದಾಖಲೆ ಬರೆದರು. 2006ರಲ್ಲೂ ಇದೇ ಕುಟುಂಬ 1.8 ಲಕ್ಷ ಮೊತ್ತಕ್ಕೆ ಮೊದಲ ಕಲಶ ಪಡೆದು, ಪ್ರಥಮಾಭಿಷೇಕದ ಪುಳಕಕ್ಕೆ ಪಾತ್ರವಾಗಿತ್ತು. ಶನಿವಾರ ಮೊದಲ ದಿನ 108 ಕಲಶಗಳ‌ ಅಭಿಷೇಕಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.


– ಭಗವಾನ್‌ ಬಾಹುಬಲಿಗಿದು 88ನೇ ಮಹಾಮಸ್ತಕಾಭಿಷೇಕ
– 12 ವರ್ಷಕ್ಕೊಮ್ಮೆ ನಡೆಯಲಿದೆ ಬೆಳಗೊಳದ ತ್ಯಾಗಮೂರ್ತಿ ಮಹಾಮಜ್ಜನ
– 58 ಅಡಿ ಎತ್ತರದ ಏಕಶಿಲೆಯ ತ್ಯಾಗಮೂರ್ತಿ
– ಮಧ್ಯಾಹ್ನ2.30ಕ್ಕೆ ಜಲಾಭಿಷೇಕದ ಮೂಲಕ ಚಾಲನೆ
– ಜಲಾಭಿಷೇಕದ ಮೊದಲ ಕಳಶಕೊಂಡಿದ್ದು ಮುಂಬೈ ಮೂಲದ ರಾಜೀವ್‌ ದೋಷಿ, ಮನೀಷಾ ದಂಪತಿ
– ಡೋಲಿಗೆ ಬದಲಾಗಿ ನಡೆದೇ ಬೆಟ್ಟ ಏರಿದ ದೋಷಿ ದಂಪತಿ
– ಕಾಲು ನಡಿಗೆಯಲ್ಲೇ ಬೆಟ್ಟವೇರಿದ ಡಾ. ವೀರೇಂದ್ರ ಹೆಗ್ಗಡೆ

– ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next