Advertisement

ಮೊದಲ ಶ್ರಾವಣ ಸೋಮವಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಜನಸಾಗರ

05:58 PM Aug 01, 2022 | Team Udayavani |

ಮಹಾಲಿಂಗಪುರ: ಹಿಂದೂಗಳ ಪವಿತ್ರ ಮಾಸ ಶ್ರಾವಣ ತಿಂಗಳ ಮೊದಲ ಸೋಮವಾರದ ನಿಮಿತ್ಯ ಪಟ್ಟಣದ ಐತಿಹಾಸಿಕ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅಪಾರ ಭಕ್ತ ಸಾಗರವೇ ಹರಿದು ಬಂತು.

Advertisement

ಕೋವಿಡ್ ಕಾರಣ ಕಳೆದ ಎರಡು ವರ್ಷಗಳ ಕಾಲ ಶ್ರಾವಣ ತಿಂಗಳ ಜಟೋತ್ಸವಕ್ಕೆ ಸೀಮಿತ ಭಕ್ತರು ಮಾತ್ರ ಆಗಮಿಸುತ್ತಿದ್ದರು.

ಈ ವರ್ಷ ಕೋವಿಡ್ ಗದ್ದಲದಿಂದ ಜನತೆಯು ಹೊರ ಬಂದಿರುವ ಕಾರಣ ಈ ವರ್ಷದ ಶ್ರಾವಣ ಮಾಸದಲ್ಲಿ ಎಂದಿನಂತೆ ಭಕ್ತ ಸಾಗರವೇ ಹರಿದು ಬರುತ್ತಿದೆ.

ತಿಂಗಳಿಡೀ ಜಟೋತ್ಸವ: ಪವಾಡ ಪುರುಷ ಮಹಾಲಿಂಗೇಶ್ವರರ ಜಟೆಗಳು ವಿಜ್ಞಾನಕ್ಕೆ ಸವಾಲು ಎಂಬಂತೆ ಪ್ರತಿವರ್ಷ ಒಂದು ಗೋಧಿ ಕಾಳಿನಷ್ಟು ಬೆಳೆಯುತ್ತವೆ. ಇಂತಹ ಪವಾಡ ಸದೃಶ್ಯ ಜಟೆಗಳನ್ನು ನೋಡುವದೇ ಭಕ್ತರ ಸೌಭಾಗ್ಯ.

ಇಂತಹ ವೈಶಿಷ್ಟ್ಯ ಪೂರ್ಣ ಜಟೆಗಳ ಅಭಿಷೇಕ (ಜಟೋತ್ಸವ)ವು ಶ್ರಾವಣ ಮಾಸದ ಶನಿವಾರ ಮತ್ತು ಮೂರನೇ ಶ್ರಾವಣ ಸೋಮವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಜಟೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಸಾವಿರಾರು ಭಕ್ತರಿಗೆ ಅನ್ನಪ್ರಸಾದ ಸೇವೆಯೊಂದಿಗೆ ಹರಕೆ ಸಲ್ಲಿಸುತ್ತಾರೆ.

Advertisement

 ಮೂರು ಹೊತ್ತು ಪೂಜೆ: ಶ್ರಾವಣ ಮಾಸದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಸುಕಿನ ಜಾವ 5 ಗಂಟೆ, ಮಧ್ಯಾಹ್ನ 12 ಕ್ಕೆ, ರಾತ್ರಿ 9 ಕ್ಕೆ ಮೂರು ವೇಳೆ ವಿಶೇಷ ಪೂಜೆ ನಡೆಯುತ್ತದೆ. ಅದರಲ್ಲೂ ನಸುಕಿನ ಜಾವ ಮತ್ತು ಮಧ್ಯಾಹ್ನ ಜಟೋತ್ಸವ ವೇಳೆ ಅಪಾರ ಪ್ರಮಾಣದಲ್ಲಿ ಭಕ್ತರು ಭಾಗವಹಿಸಿ ಮಹಾಲಿಂಗೇಶ್ವರ ದರ್ಶನ ಪಡೆಯುತ್ತಾರೆ.

ಶ್ರಾವಣ ಮೊದಲ ಸೋಮವಾರ ನಿಮಿತ್ಯ ಪೀಠಾಧಿಪತಿ ಜಗದ್ಗುರು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮಿಜಿಯವರು ಜಟೋತ್ಸವ ನೇರವೇರಿಸಿದರು. ಮಹಾಲಿಂಗೇಶ್ವರ ಗದ್ದುಗೆಗೆ ಹೂವಿನ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ಹರಕೆ ಹೊತ್ತ ಭಕ್ತರು ಮಹಾಲಿಂಗೇಶ್ವರರ ಬೆಳ್ಳಿಯ ರಥೋತ್ಸವ ಸೇವೆಯನ್ನು ಸಲ್ಲಿಸಿ ಕೃತಾರ್ಥರಾಗುತ್ತಾರೆ. ಜಟೋತ್ಸವ ಮತ್ತು ಪೂಜೆಯ ವೇಳೆ ಕರಡಿ ಮನೆತನದ ಕಲಾವಿದರು ಕರಡಿವಾದನದ ಸೇವೆ ಸಲ್ಲಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next