ನವದೆಹಲಿ: ಕೊಲೆಯ ನಂತರ ತನಿಖಾ ಸಂಸ್ಥೆಗಳ ಮುಂದೆ ಹೇಗೆ ವರ್ತಿಸಬೇಕು ಎಂದು ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಇಂಟರ್ನೆಟ್ ಸಹಾಯದಿಂದ ಗ್ರಹಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಪೊಲೀಸರು ಅಫ್ತಾಬ್‌ನ ಇಂಟರ್ನೆಟ್ ಹಿಸ್ಟರಿಯನ್ನು ಸರ್ಚ್ ಮಾಡಿದ್ದಾರೆ. ಆರೋಪಿ ಕೊಲೆಯ ನಂತರ ಕುಖ್ಯಾತ ಕೊಲೆ ಪ್ರಕರಣಗಳ ಬಗ್ಗೆ ಹಾಗೂ ಈ ಸಮಯದಲ್ಲಿ ಆರೋಪಕ್ಕೆ ಗುರಿಯಾಗಿರುವ ಸೆಲೆಬ್ರೆಟಿಗಳು ಹೇಗೆ ವರ್ತಿಸುತ್ತಾರೆ ಎನ್ನುವುದರ ಬಗ್ಗೆ ಅಧ್ಯಯನ ನಡೆಸಿದ್ದ.
ವಿಷೇಷವಾಗಿ ಒಬ್ಬರ ವರ್ತನೆ ತನಿಖೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಅರಿಯಲು ಹಾಲಿವುಡ್ ಸೆಲೆಬ್ರೆಟಿಗಳಾದ ಜಾನಿ ಡೆಪ್ ಮತ್ತು ಅಂಬರ್ ಹರ್ಡ್ ದಂಪತಿಯ ವಿಚ್ಛೇದನ ಪ್ರಕರಣವನ್ನು ಕೂಲಂಕಷವಾಗಿ ಅಧ್ಯಯನ ನಡೆಸಿದ್ದ. ಜತೆಗೆ ಯಾವುದೇ ಒತ್ತಡದ ಪರಿಸ್ಥಿತಿಯಲ್ಲೂ ಶಾಂತವಾಗಿ ಇರುವುದು ಹೇಗೆ ಎಂಬುದನ್ನು ಇಂಟರ್ನೆಟ್ ಮೂಲಕ ತಿಳಿದಿದ್ದ.
ಶಾಂತ ರೀತಿಯ ವರ್ತನೆ:
Related Articles
ವಿಚಾರಣೆಯ ಸಮಯದಲ್ಲೂ ಅಫ್ತಾಬ್ ತುಂಬ ಶಾಂತವಾಗಿ ಇರುತ್ತಿದ್ದ. ಅವನ ಮುಖದಲ್ಲಿ ಚಿಂತೆಯ ಲವಲೇಷವೂ ಇರಲಿಲ್ಲ. ಅಲ್ಲದೇ ಜೈಲಿನಲ್ಲಿ ಯಾವುದೇ ಅತಿರೇಕದ ವರ್ತನೆ ತೋರದೆ ತನ್ನ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳುತ್ತಾನೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ನಾರ್ಕೊ ಪರೀಕ್ಷೆ ಪೂರ್ಣ:
ನವದೆಹಲಿಯ ರೋಹಿಣಿ ಪ್ರದೇಶದ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಆರೋಪಿ ಅಫ್ತಾಬ್ ಪೂನಾವಾಲನನ್ನು ಗುರುವಾರ ನಾರ್ಕೊ ಪರೀಕ್ಷೆಗೆ ಒಳಪಡಿಸಲಾಯಿತು. ಎರಡು ಗಂಟೆಗಳಲ್ಲಿ ಪರೀಕ್ಷೆ ಪೂರ್ಣಗೊಂಡಿತು. ಈ ವೇಳೆ ಆತ ಶ್ರದ್ಧಾಳನ್ನು ಕೊಲೆ ಮಾಡಿದ್ದು, ಹರಿತವಾದ ವಿವಿಧ ಚಾಕು ಬಳಸಿ ದೇಹವನ್ನು ತುಂಡು ತುಂಡು ಮಾಡಿದ್ದು, ಆಕೆಯ ಬಟ್ಟೆಗಳನ್ನು ಎಸೆದಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.