ಯೂ ಟರ್ನ್ ನಂತರವೇ ಶ್ರದ್ಧಾ ಶ್ರೀನಾಥ್ ಕನ್ನಡ ಚಿತ್ರರಂಗದ ಬೇಡಿಕೆಯ ನಟರಾಗಿದ್ದರು. 2016ರ ಹೊತ್ತಿಗೆ ಬೇಡಿಕೆಯ ಪಟ್ಟಿಯಲ್ಲಿದ್ದ ಶ್ರದ್ಧಾಗೆ, ಒಂದು ವರ್ಷ ಮುಗಿಯುವ ಹೊತ್ತಿಗೆ ಬೇಡಿಕೆ ಕಡಿಮೆಯಾಗಿದೆ ಎಂದೆನಿಸಿದರೆ ಆಶ್ಚರ್ಯವಿಲ್ಲ. ಅದಕ್ಕೆ ಕಾರಣ, ವರ್ಷದ ಕೊನೆಗೆ ಶ್ರದ್ಧಾ ಅಕೌಂಟಿನಲ್ಲಿ ಗೋದ್ರಾ ಚಿತ್ರವನ್ನು ಹೊರತುಪಡಿಸಿದರೆ, ಬೇರೆ ಯಾವ ಚಿತ್ರವೂ ಕಾಣಸಿಗುವುದಿಲ್ಲ. ಮುಂದೇನು ಎಂಬ ಪ್ರಶ್ನೆ ಶ್ರದ್ಧಾಗಿರುವಂತೆಯೇ, ಅವರೇನು ಮಾಡಬಹುದು ಎಂಬ ಪ್ರಶ್ನೆ ಪ್ರೇಕ್ಷಕರ ವಲಯದಲ್ಲಿ ಇದ್ದೇ ಇತ್ತು.
ಇದೀಗ ಶ್ರದ್ಧಾ ಶ್ರೀನಾಥ್ ಬಾಲಿವುಡ್ ಅಂಗಳಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಸಾಹಿಬ್ ಬೀವಿ ಔರ್ ಗ್ಯಾಂಗ್‌ಸ್ಟರ್, ಪಾನ್ ಸಿಂಗ್ ತೋಮರ್ ಮುಂತಾದ ಚಿತ್ರಗಳ ನಿರ್ದೇಶಕ ತಿಗ್ಮಾಂಶು ಧುಲಿಯಾ ನಿರ್ದೇಶನದ ಹೊಸ ಚಿತ್ರ ಮಿಲನ್ ಟಾಕೀಸ್‌ನಲ್ಲಿ ನಟಿಸುವ ಮೂಲಕ ಬಾಲಿವುಡ್‌ಗೆ ಹಾರಿದ್ದಾರೆ. ಇದಕ್ಕೂ ಮುನ್ನ ಕನ್ನಡ, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಶ್ರದ್ಧಾ, ಈಗ ಮೊದಲ ಬಾರಿಗೆ ಬಾಲಿವುಡ್‌ಗೆ ಹೊರಟು ನಿಂತಿದ್ದಾರೆ. ಈ ಚಿತ್ರದ ಚಿತ್ರೀಕರಣ ಲಕ್ನೋ, ಮಥುರಾ ಮತ್ತು ಇತರೆಡೆ ನಡೆಯಲಿದೆ. ಉತ್ತರಪ್ರದೇಶದ ಹಿನ್ನೆಲೆಯಲ್ಲಿ ನಡೆಯುವ ಈ ಚಿತ್ರದಲ್ಲಿ ಅಲಿಫಜಲ್ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯಿಸುತ್ತಿದ್ದಾರೆ.
ಹಾಗೆ ನೋಡಿದರೆ, ಕಳೆದ ವರ್ಷದ ಅತ್ಯಂತ ಬಿಝಿಯ ನಟಿಯಾಗಿದ್ದವರೆಂದರೆ ಅದು ಶ್ರದ್ಧಾ ಎಂದರೆ ತಪ್ಪಿಲ್ಲ. 2017ರಲ್ಲಿ ಶ್ರದ್ಧಾ ಅಭಿನಯದ ಆರು ಚಿತ್ರಗಳು ಬಿಡುಗಡೆಯಾದವು. ಆ ನಾಲ್ಕರ ಪೈಕಿ ಎರಡು ಕನ್ನಡದದ್ದಾದರೆ, ಇನ್ನೆರೆಡು ತಮಿಳಿನ ಚಿತ್ರಗಳಾಗಿದ್ದವು. ಕನ್ನಡದ ಬಗ್ಗೆ ಹೇಳುವುದಾದರೆ, ಊರ್ವಿ ಮತ್ತು ಆಪರೇಷನ್ ಅಲಮೇಲಮ್ಮ ಚಿತ್ರಗಳೆರಡೂ ಆ್ಯವರೇಜ್ ಎಂತಂದನಿಸಿಕೊಂಡವು. ಇನ್ನು ತಮಿಳಿನಲ್ಲಿ ವಿಕ್ರಂ ವೇದ ಸೂಪರ್ ಹಿಟ್ ಆದರೂ, ಅದರ ಯಶಸ್ಸು ಮಾಧವನ್ ಮತ್ತು ವಿಜಯ್ ಸೇತುಪತಿ ಅವರಿಗೆ ಹೋಯಿತು. ರಿಚ್ಚಿ ಚಿತ್ರದಲ್ಲಿ ಶ್ರದ್ಧಾ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೂ ಹೆಚ್ಚು ಸುದ್ದಿಯಾಗಲಿಲ್ಲ. ಅದೇ ತರಹ, ಇವನ್ ತಂತಿರನ್ ಎಂಬ ಚಿತ್ರವೂ ಆಯಿತು. ಕಾಟ್ರಾ ವಿಳೆಯಾಡೈ ಚಿತ್ರದಲ್ಲಿ ಮಣಿರತ್ನಂರಂತಹ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದು ಬಿಟ್ಟರೆ, ಆ ಚಿತ್ರ ಶ್ರದ್ಧಾ ಚಿತ್ರಜೀವನಕ್ಕೆ ಹೆಚ್ಚು ಪ್ಲಸ್ ಆಗಲಿಲ್ಲ. ಹೀಗೆ ಒಂದರ ಹಿಂದೊಂದು ಶ್ರದ್ಧಾ ಒಪ್ಪಿಕೊಂಡಿದ್ದ ಆರು ಚಿತ್ರಗಳು ಬಿಡುಗಡೆಯಾದವು.
ಈ ಮಧ್ಯೆ ಶ್ರದ್ಧಾ 2017ರಲ್ಲಿ ದುನಿಯಾ ವಿಜಯ್ ಅಭಿನಯದ ಜಾನಿ ಜಾನಿ ಎಸ್ ಪಾಪ್ಪ ಮತ್ತು ಪೊಗರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಯಿತು. ಈಗ ನೋಡಿದರೆ, ಬೇರೆ ಎರಡೂ ಚಿತ್ರಗಳಲ್ಲಿ ಬೇರೆ ನಾಯಕಿಯರು ಕಾಣಿಸುತ್ತಿದ್ದಾರೆ. ಶಾದಿ ಭಾಗ್ಯ ಎಂಬ ಚಿತ್ರ ಸೆಟ್ಟೇರಿತು. ಶುರುವಾದ ಕೆಲವೇ ದಿನಗಳಲ್ಲಿ ಅದು ನಿಂತೂ ಹೋಯಿತು. ಇನ್ನು ಶ್ರದ್ಧಾ ಅಕೌಂಟಿನಲ್ಲಿ ರುವುದು ಗೋದ್ರಾ ಎಂಬ ಒಂದೇ ಒಂದು ಚಿತ್ರ. ಸತೀಶ್ ನೀನಾಸಂ ಈ ಚಿತ್ರದಲ್ಲಿ ನಟಿಸಿದ್ದು, ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಹೀಗಿರುವಾಗಲೇ ಶ್ರದ್ಧಾ ಅವರನ್ನು ಬಾಲಿವುಡ್ ಕೈಬೀಸಿ ಕರೆಯುತ್ತಿದೆ ಮತ್ತು ಶ್ರದ್ಧಾ ಸಹ ತಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಬಾಲಿವುಡ್‌ಗೆ ಹೊರಟಿದ್ದಾರೆ.
ಹಾಗೆ ಬಾಲಿವುಡ್‌ಗೆ ಹೊರಟಿರುವ ಶ್ರದ್ಧಾ, ಬಾಲಿವುಡ್‌ನಲ್ಲೇ ನೆಲೆಯೂರುತ್ತಾರಾ ಅಥವಾ ಕನ್ನಡದಲ್ಲಿ ನಟನೆಯನ್ನು ಮುಂದುವರೆಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.