Advertisement

ಬ್ಯಾಂಕ್‌ನ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿದ್ದ  ಮಹಾನ್‌ ಚೇತನ: ಡಿ. ಡಿ. ಕರ್ಕೇರ

12:25 PM Nov 16, 2021 | Team Udayavani |

ಮುಂಬಯಿ: ಕಳೆದ ಆರು ವರ್ಷಗಳಿಂದ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾಗಿ ಸದಾನಂದ ಕೋಟ್ಯಾನ್‌ ಅವರು ಬ್ಯಾಂಕ್‌ನ ಪ್ರಗತಿಗೆ ಉತ್ತಮ ರೀತಿಯ ಕಾರ್ಯಯೋಜನೆಗಳನ್ನು ಮಾಡಿ, ಎಲ್ಲರನ್ನೂ ಸಂಘಟಿಸಿ ಎಲ್ಲರೊಂದಿಗೆ ಆತ್ಮೀಯರಾಗಿದ್ದರು. ಎಲ್ಲ ಸಮಾಜ ಬಾಂಧವರ ಪ್ರೀತಿ-ವಿಶ್ವಾಸ ಗಳಿಸಿ ಬ್ಯಾಂಕ್‌ನ ಯಶಸ್ಸಿಗಾಗಿ ಹಗಲಿರುಳು ಶ್ರಮಿಸುತ್ತಿದ್ದ ಅವರು ನಮ್ಮನ್ನಗಲಿರುವುದು ನಮಗೆಲ್ಲರಿಗೂ ಅಪಾರ ದುಃಖವನ್ನುಂಟು ಮಾಡಿದೆ. ಬ್ಯಾಂಕ್‌ನ ಮುಖ್ಯ ಕಾರ್ಯಾಲಯವನ್ನು ಫೋರ್ಟ್‌ ಪರಿಸರದಿಂದ ಅಂಧೇರಿ ಮೊಗವೀರ ಭವನಕ್ಕೆ ಸ್ಥಳಾಂತರಿಸುವಲ್ಲೂ ಅವರ ಪಾತ್ರ ಪ್ರಮುಖವಾಗಿತ್ತು. ಸಮಾಜಕ್ಕೂ ಸಂಘಟನೆಗಳಿಗೂ ಬೆನ್ನೆಲುಬಾಗಿ ನಿಂತು ಕೆಲಸ ಮಾಡುತ್ತಿದ್ದ ಮಹಾನ್‌ ಚೇತನ ಅವರಾಗಿದ್ದರು ಎಂದು ಮೊಗವೀರ ಕೋ-ಆಪರೇಟಿವ್‌ ಬ್ಯಾಂಕ್‌ನ ನೂತನ ಕಾರ್ಯಾಧ್ಯಕ್ಷ ದಾಮೋದರ್‌ ಡಿ. ಕರ್ಕೇರ ತಿಳಿಸಿದರು.

Advertisement

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ವತಿಯಿಂದ ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ  ನ. 13ರಂದು ಆಯೋಜಿಸಲಾಗಿದ್ದ ಇತ್ತೀಚೆಗೆ ನಿಧನ ಹೊಂದಿದ ಮೊಗವೀರ ಸಮಾಜದ ಹಿರಿಯ ಮುಖಂಡ, ಮೊಗವೀರ ಯುವಕ ಸಂಘದ ಮಾಜಿ ಅಧ್ಯಕ್ಷ ಹಾಗೂ ಮೊಗವೀರ ಕೋ-ಆಪರೇಟಿವ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ  ಅವರು ನುಡಿನಮನ ಸಲ್ಲಿಸಿದರು.

ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ. ಎಲ್‌. ಬಂಗೇರ ಅವರ ಅಧ್ಯಕ್ಷತೆಯಲ್ಲಿ  ನಡೆದ ಕಾರ್ಯಕ್ರಮದಲ್ಲಿ  ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮಾಜಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್‌ ಮಾತನಾಡಿ, ಎಲ್ಲರನ್ನು ಗೌರವದಿಂದ ಕಾಣುವಂತಹ ಮನೋಭಾವದ ಸದಾನಂದ ಕೋಟ್ಯಾನ್‌ ಅವರು ಮೊಗವೀರ ಸಮಾಜದ ರಾತ್ರಿ ಶಾಲೆಯಲ್ಲಿ ಕಲಿತು ಅದೇ ಸಮಾಜದ ಬ್ಯಾಂಕ್‌ನಲ್ಲಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು ಅವರ ವ್ಯಕ್ತಿತ್ವ ಹಾಗೂ ಸಮಾಜದ ಬಗೆಗಿನ ಕಾಳಜಿಯನ್ನು ಸೂಚಿಸುತ್ತದೆ ಎಂದರು.

ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್‌ ಕುಲಾಲ್‌ ಮಾತನಾಡಿ, ಸದಾ ನಂದ ಕೋಟ್ಯಾನ್‌ ಅವರೊಂದಿಗೆ ನನ್ನದು ಸುದೀರ್ಘ‌ ಕಾಲದ ಆತ್ಮೀಯ ಸಂಬಂಧ. ಎಲ್ಲರೊಂದಿಗೂ ಸದಾ ನಗು ಮುಖ ದಿಂದ ವ್ಯವಹರಿಸುತ್ತಿದ್ದರು. ಮೊಗ ವೀರ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾಗಿ ಅದರ ಪ್ರಗತಿ ಗಾಗಿ ಸದಾ ಶ್ರಮಿಸುತ್ತಿದ್ದರು ಎಂದರು.

ವಿಶ್ವಕರ್ಮ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ಜಿ. ಟಿ. ಆಚಾರ್ಯ ಮಾತನಾಡಿ, ಸದಾನಂದ ಕೋಟ್ಯಾನ್‌ ಜೀವನ ಮತ್ತು ಅವರು ನಡೆದು ಬಂದ ದಾರಿ ನಮಗೆಲ್ಲರಿಗೂ ಪ್ರೇರಣೆಯಾಗಬೇಕು. ಮನುಷ್ಯ ಮನುಷ್ಯತ್ವದ ಒಳಗೆ ಬದುಕಬೇಕು ಎಂಬುವುದನ್ನು ಅವರು ಬದುಕಿನ ಹಾದಿಯಲ್ಲಿ ತೋರಿಸಿಕೊಟ್ಟಿದ್ದಾರೆ ಎಂದರು.

Advertisement

ಸಭೆಯಲ್ಲಿ ಉಪಸ್ಥಿತರಿದ್ದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ರಮೇಶ್‌ ಬಂಗೇರ, ಶ್ರೀ ಮದ್ಭಾರತ ಮಂಡಳಿಯ ಅಧ್ಯಕ್ಷ ಜಗನ್ನಾಥ್‌ ಪುತ್ರನ್‌, ಕಣ್ಣಂಗಾರ್‌ ಮೊಗವೀರ ಸಭಾ ಮುಂಬಯಿ ಸಮಿತಿ ಅಧ್ಯಕ್ಷ ಡಿ. ಬಿ. ಪುತ್ರನ್‌, ಚರಂತಿಪೇಟೆ ಮೊಗವೀರ ಸಭಾದ ಅಧ್ಯಕ್ಷ ಕೃಷ್ಣ ಕೆ. ಕೋಟ್ಯಾನ್‌, ಪೊಲಿಪು ಮೊಗವೀರ ಸಭಾ ಮುಂಬಯಿ ಸಮಿತಿ ದಿವಾಕರ್‌ ಸಾಲ್ಯಾನ್‌, ಕದಿಕೆ ಮೊಗವೀರ ಸಭಾ ಸಮಿತಿ ಮುಂಬಯಿ ಅಧ್ಯಕ್ಷ ಚಂದ್ರಕಾಂತ್‌ ಪುತ್ರನ್‌, ಮೊಗವೀರ ಬ್ಯಾಂಕ್‌ ಎಂಪ್ಲಾಯೀಸ್‌ ಅಸೋಸಿಯೇಶನ್‌ ಅಧ್ಯಕ್ಷ ಯದುವೀರ ಪುತ್ರನ್‌, ಹೆಜಮಾಡಿ ಕೋಡಿ ವಿದ್ಯಾಪ್ರಸಾರಕ ಸಂಘದ ರಾಜೇಂದ್ರ ಪುತ್ರನ್‌, ಮೊಗವೀರ ಬ್ಯಾಂಕ್‌ನ ನಿರ್ದೇಶಕ ಜನಾರ್ದನ ಮೂಲ್ಕಿ ಮೊದಲಾದವರು ನುಡಿನಮನ ಸಲ್ಲಿಸಿದರು.

ಪ್ರಾರಂಭದಲ್ಲಿ ಸದಾನಂದ ಕೋಟ್ಯಾನ್‌ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಗಣ್ಯರು ಪುಷ್ಪಾಂಜಲಿ ಅರ್ಪಿಸಿದರು. ಶ್ರದ್ಧಾಂಜಲಿ ಸಭೆಯನ್ನು ನಿರ್ವಹಿಸಿದ ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ್‌ ಸುವರ್ಣ ಅವರು ಸದಾನಂದ ಕೋಟ್ಯಾನ್‌ ಅವರ ಸಾಧನೆಗಳ ಬಗ್ಗೆ ವಿವರಿಸಿದರು. ಮೊಗವೀರ ಯುವಕ ಸಂಘದ ಕಾರ್ಯದರ್ಶಿ ದಿಲೀಪ್‌ ಮೂಲ್ಕಿ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಮುಂಬಯಿ ಸಮಿತಿಯ ಕಾರ್ಯದರ್ಶಿ ಲಕ್ಷ್ಮಣ್‌ ಶ್ರೀಯಾನ್‌, ಯುಎಇ ಮೊಗವೀರ ಸಂಘದ ರವಿ ಸಾಲ್ಯಾನ್‌, ಗುರುವಪ್ಪ ಕೋಟ್ಯಾನ್‌, ಸಂಜೀತ್‌ ಸದಾನಂದ ಕೋಟ್ಯಾನ್‌, ನೈನ್‌ ಹ್ಯಾಂಡ್ಸ್‌ ಫೌಂಡೇಶನ್‌ನ ಟ್ರಸ್ಟಿ ಹರೀಶ್‌ ಶ್ರೀಯಾನ್‌, ಸದಾನಂದ ಕೋಟ್ಯಾನ್‌ ಅವರ ಪತ್ನಿ ಗೀತಾ ಕೋಟ್ಯಾನ್‌, ಪುತ್ರಿ ಡಾ| ಸಂಗೀತಾ ಗಣೇಶ್‌ ಮೂಲ್ಕಿ, ಸೊಸೆ ಮೆಹೆಕ್‌ ಸಂಜೀತ್‌ ಕೋಟ್ಯಾನ್‌, ಅಳಿಯ ಗಣೇಶ್‌ ಮೂಲ್ಕಿ ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು.

ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಜ್ಯೋತಿ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌, ಮೊಗವೀರ ಬ್ಯಾಂಕ್‌ನ ನಿರ್ದೇಶಕರಾದ ವಸಂತ್‌ ಕುಂದರ್‌, ಶೀಲಾ ಅಮೀನ್‌, ಮುಕೇಶ್‌ ಬಂಗೇರ, ಜಯಶೀಲ್‌ ತಿಂಗಳಾಯ, ಬ್ಯಾಂಕ್‌ನ ಉನ್ನತಾಧಿಕಾರಿ ಶಿಲ್ಪಾ ಹಾಗೂ ಬ್ಯಾಂಕ್‌ನ ಅಧಿಕಾರಿಗಳು, ಪ್ರಬಂಧಕರು, ಸಿಬಂದಿ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಭಾಸ್ಕರ್‌ ಸಾಲ್ಯಾನ್‌, ಸಂಜೀವ್‌ ಕೆ. ಸಾಲ್ಯಾನ್‌, ರವಿದಾಸ್‌ ಸಾಲ್ಯಾನ್‌, ಪ್ರೇಮಲತಾ ಪುತ್ರನ್‌, ಗಣೇಶ್‌ ಕಾಂಚನ್‌, ದಯಾನಂದ್‌ ಬಂಗೇರ, ನಾಗೇಶ್‌ ಮೆಂಡನ್‌, ಟ್ರಸ್ಟಿಗಳಾದ ಹರೀಶ್‌ ಪುತ್ರನ್‌ ಮತ್ತು ದೇವರಾಜ್‌ ಬಂಗೇರ, ಉದ್ಯಮಿ ಶ್ರೀನಿವಾಸ ಕಾಂಚನ್‌, ಮೊಗವೀರ ಗ್ರಾಮ ಸಭಾ ಮತ್ತು ಮೂಲಸ್ಥಾನ ಸಭಾಗಳ ಪದಾಧಿಕಾರಿಗಳು ಹಾಗೂ ಸದಾನಂದ ಕೋಟ್ಯಾನ್‌ ಅವರ ಅಭಿಮಾನಿಗಳು, ಬಂಧು-ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಉಪಸ್ಥಿತರಿದ್ದ ಸದಾನಂದ ಕೋಟ್ಯಾನ್‌ ಅವರ ಪುತ್ರ ಸಂಜೀತ್‌ ಕೋಟ್ಯಾನ್‌ ಮತ್ತು ಅಳಿಯ ಗಣೇಶ್‌ ಮೂಲ್ಕಿ ಅವರು ಸಭೆಯನ್ನು ಆಯೋಜಿಸಿದ ಮೊಗವೀರ ಬ್ಯಾಂಕ್‌, ಮೊಗವೀರ ಮಂಡಳಿ, ಮುಂಬಯಿಯ ಗ್ರಾಮ ಸಭಾಗಳು, ಮೂಲಸ್ಥಾನ ಸಭಾಗಳ ಪದಾಧಿಕಾರಿಗಳು, ಇತರ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿದರು.

ಮೊಗವೀರ ಸಮಾಜದ ಒಬ್ಬ ಆಧಾರ ಸ್ತಂಭದಂತಿದ್ದ ಸದಾನಂದ ಕೋಟ್ಯಾನ್‌ ಅವರ ಅಗಲಿಕೆ ನಮಗೂ ಹಾಗೂ ನಮ್ಮ ಸಂಸ್ಥೆಗಳಿಗೆ ಬಹಳ ನಷ್ಟವನ್ನುಂಟುಮಾಡಿದೆ. ಅವರ ಸಮಾಜ ಸೇವೆಯ ಯೋಚನೆ-ಯೋಜನೆಗಳು ನಮಗೆಲ್ಲರಿಗೂ ಮಾದರಿಯಾಗಿದೆ. ಅವರ ಹಲವಾರು ಕನಸುಗಳು ನನಸಾಗುವಂತೆ ನಾವೆಲ್ಲರೂ ನೋಡಿಕೊಳ್ಳಬೇಕು.-ವೇದಪ್ರಕಾಶ್‌ ಶ್ರೀಯಾನ್‌, ಆಡಳಿತ ನಿರ್ದೇಶಕರು, ದಿವ್ಯಾ ಶಿಪ್ಪಿಂಗ್‌ ಕಂಪೆನಿ

ಸಮಾಜ ಬಾಂಧವರೊಂದಿಗೆ ಆತ್ಮೀಯವಾಗಿದ್ದು, ಸಮಸ್ಯೆಗಳನ್ನು ಬಗೆಹರಿಸಿ ಎಲ್ಲರ ಹಿತವನ್ನೇ ಬಯಸುತ್ತಾ ಸದಾ ಸಮಾಜದ ಬಗ್ಗೆ ಚಿಂತಿಸುತ್ತಾ ಇದ್ದವರು. ಅವರು ಬ್ಯಾಂಕ್‌ನ ಕಾರ್ಯಾಧ್ಯಕ್ಷರಾಗಿ ಬ್ಯಾಂಕ್‌ನ ಪ್ರಗತಿಗಾಗಿ ಹಗಲಿರುಳು ಕೆಲಸ ಮಾಡುತ್ತಿದ್ದರು. ಅವರ ಕನಸನ್ನು ನನಸು ಮಾಡುವಲ್ಲಿ ನಾವೆಲ್ಲರೂ ಶ್ರಮಿಸಬೇಕು. ಇದೇ ಅವರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ.-ಸುರೇಶ್‌ ಕಾಂಚನ್‌, ನಿರ್ದೇಶಕರು, ಮೊಗವೀರ ಕೋ-ಆಪರೇಟಿವ್‌ ಬ್ಯಾಂಕ್‌

ಸದಾನಂದ ಕೋಟ್ಯಾನ್‌ ಅವರ ಸಮಾಜ ಸೇವೆ ನಮಗೆಲ್ಲರಿಗೂ ಪ್ರೇರಣೆಯಾಗಿದೆ. ಮೊಗವೀರ ಮಂಡಳಿ ಹಾಗೂ ಮೊಗವೀರ ಬ್ಯಾಂಕನ್ನು ಪ್ರಗತಿ ಪಥದತ್ತ ಕೊಂಡೊಯ್ಯುವಲ್ಲಿ ಅವರ ಕಾರ್ಯ ಮೆಚ್ಚುವಂತದ್ದಾಗಿದೆ. ಅವರು ಸದಾ ನಮ್ಮೊಂದಿಗಿದ್ದು, ಕ್ರಿಯಾಶೀಲರಾಗಿದ್ದ ಒಬ್ಬ ನಿಷ್ಕಲ್ಮಶ, ಪ್ರಾಮಾಣಿಕ ವ್ಯಕ್ತಿಯಾಗಿದ್ದರು.-ಅಜಿತ್‌ ಜಿ. ಸುವರ್ಣ, ಟ್ರಸ್ಟಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ

ಸಮಾಜ ಸೇವಕ ಸದಾನಂದ ಕೋಟ್ಯಾನ್‌ ಅವರ ಅಗಲುವಿಕೆ ಮೊಗವೀರ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಸಮಾಜದ ಸಮಸ್ಯೆಗಳನ್ನು ನಿವಾರಿಸುವಂತಹ ವ್ಯಕ್ತಿತ್ವ ಹೊಂದಿದ್ದರು. ಧಾರ್ಮಿಕ, ಶೈಕ್ಷಣಿಕ, ಬ್ಯಾಂಕಿಂಗ್‌ ಕ್ಷೇತ್ರ ಸಹಿತ ವಿವಿಧ ಕ್ಷೇತ್ರಗಳಲ್ಲಿ ಅವರ ಸೇವೆ ಅನನ್ಯವಾಗಿದೆ.-ಕೆ. ಎಲ್‌. ಬಂಗೇರ, ಅಧ್ಯಕ್ಷರು, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ

 

-ಚಿತ್ರ-ವರದಿ: ಸುಭಾಷ್‌ ಶಿರಿಯ

Advertisement

Udayavani is now on Telegram. Click here to join our channel and stay updated with the latest news.

Next