ದಾವಣಗೆರೆ: ಬದುಕಿನ ಆಚೆಗೂ ಇರುವಂತಹದ್ದನ್ನು ತೋರಿಸಿಕೊಡುವಂತಹ ದಿವ್ಯ ಶಕ್ತಿ ಸಂಗೀತಕ್ಕೆ ಇದೆ ಎಂದು ಲೇಖಕ ಚಂದ್ರಶೇಖರ ತಾಳ್ಯ ತಿಳಿಸಿದರು. ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸುಶ್ರಾವ್ಯ ಸಂಗೀತ ವಿದ್ಯಾಲಯ ಹಮ್ಮಿಕೊಂಡಿದ್ದ ಗೀತ ಗಾಯನ ತರಬೇತಿ ಶಿಬಿರ ನಿನಾದ-5 ಸಮಾರೋಪದಲ್ಲಿ ಮಾತನಾಡಿದರು.
ಸಾಹಿತ್ಯಕ್ಕಿಂತಲೂ ಸಂಗೀತ ಅಪರೂಪದ ಮಾಧ್ಯಮ. ಸತತ ಅಭ್ಯಾಸ, ಸಾಧನೆಯ ಮೂಲಕ ಸಂಗೀತ ಕಲಿಯಬೇಕು ಎಂದರು. ಸಂಗೀತದ ಪ್ರಾರಂಭವಾಗಿದ್ದು ಯಾವಾಗ ಎಂಬುದಕ್ಕೆ ಯಾವುದೇ ರೀತಿಯ ಸಾಕ್ಷಿ, ದಾಖಲೆ ಇಲ್ಲ. ಪ್ರಾಚೀನ ಧ್ವನಿಯನ್ನು ಕೇಳಿಸುವಂತದ್ದು ಅಸಾಧ್ಯ. ಹಾಗಾಗಿ ಸಂಗೀತ ಅನಾದಿ ಕಾಲದಿಂದಲೂ ಪ್ರಚಲಿತದಲ್ಲಿ ಇದೆ ಎಂಬುದನ್ನು ಒಪ್ಪಬೇಕಾಗುತ್ತದೆ.
ಎಂತಹ ಕಲ್ಲು ಹೃದಯದವರನ್ನೂ ತಲೆದೂಗಿಸುವಂತಹ ದಿವ್ಯ ಶಕ್ತಿ ಸಂಗೀತ ಹೊಂದಿದೆ ಎಂದು ತಿಳಿಸಿದರು. ಸಂಗೀತ ಎಂಬುದು ಜಾತಿ, ಧರ್ಮ, ಗಡಿ ಎಲ್ಲವನ್ನೂ ಮೀರಿದ್ದು. ಸಂಗೀತಕ್ಕೆ ಯಾವುದೇ ಜಾತಿ, ಧರ್ಮ, ಗಡಿಯ ಮಿತಿ ಇಲ್ಲ ಎನ್ನುವುದಕ್ಕೆ ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಷಿ, ಕುಮಾರ ಗಂಧರ್ವ ಅನೇಕರು ಕಾಣ ಸಿಗುತ್ತಾರೆ ಎಂದು ತಿಳಿಸಿದರು.
ಸಂಗೀತ ಕ್ಷೇತ್ರದಲ್ಲಿ ಅತ್ಯಂತ ಅಪರೂಪವಾಗಿರುವುದು ಗುರು-ಪರಂಪರೆ ಸಂಸ್ಕೃತಿ. ಒಬ್ಬ ಗುರುವಿನ ಬಳಿ ಸಂಗೀತ ಕಲಿತವರು ಮುಂದೆ ಎಷ್ಟೇ ಉನ್ನತ ಸ್ಥಾನದಲ್ಲೇ ಇರಲಿ ಗುರುವಿಗೆ ತಲೆಬಾಗಿ, ಕಾಲು ಮುಟ್ಟಿ ನಮಸ್ಕರಿಸುವುದನ್ನು ಬೇರೆ ಎಲ್ಲಿಯೂ ಕಾಣ ಸಿಗುವುದೇ ಇಲ್ಲ. ಸಾಹಿತ್ಯದಲ್ಲಿ ಅಂತದ್ದನ್ನು ಕಂಡು ಬರುವುದು ಅಪರೂಪ ಎಂದು ತಿಳಿಸಿದರು.
ಸಂಗೀತದ ಮೂಲಕ ಶಿಸ್ತು ಅತೀ ಮುಖ್ಯ. ಸಂಗೀತ ಅಸ್ತವ್ಯಸ್ತ ಧ್ವನಿಯನ್ನು ಹಿಡಿತಕ್ಕೆ ಒಳಪಡಿಸುವ ಬಹು ದೊಡ್ಡ ಮಾಧ್ಯಮ. ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಅತಿ ಪ್ರಮುಖ ಪ್ರಾಕಾರಗಳು. ಮಕ್ಕಳಿಗೆ ಸಂಗೀತ ಕಲಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ರಿಯಾಲಿಟಿ ಶೋಗೆ ಮಾತ್ರವೇ ಸಂಗೀತ ಕಲಿಸಲಿಕ್ಕೆ ಹೋಗಬೇಡಿ. ಮಕ್ಕಳು ತಾವಾಗಿಯೇ ಹೋದಲ್ಲಿ ಪ್ರೋತ್ಸಾಹ ಕೊಡಿ. ಆದರೆ, ಯಾವುದೇ ರೀತಿಯ ಒತ್ತಡ ಹೇರಬಾರದು ಎಂದು ಮನವಿ ಮಾಡಿದರು. ಕ
ನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಮಾತನಾಡಿ, ಸಂಗೀತಕ್ಕೆ ದಿವ್ಯ ಶಕ್ತಿ ಇದೆ. ಇಲಾಖೆಯಿಂದ ಹಲವಾರು ತರಬೇತಿ ಶಿಬಿರ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ್‌ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಸುಶ್ರಾವ್ಯ ಸಂಗೀತ ವಿದ್ಯಾಲಯದ ಯಶಾ ದಿನೇಶ್ ಇತರರು ಇದ್ದರು. ರಂಜನಿ ಸ್ವಾಗತಿಸಿದರು.