ಹೊಸದಿಲ್ಲಿ : “ದ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಅದು ವೈರಲ್ ಆಗಿರುವ ನಡುವೆಯೇ, ಮಹಾರಾಷ್ಟ್ರದ ಯೂತ್ ಕಾಂಗ್ರೆಸ್, ‘ಈ ಚಿತ್ರ ಬಿಡುಗಡೆಗೊಳ್ಳುವ ಮುನ್ನ ತನಗೆ ಅದನ್ನು ತೋರಿಸಬೇಕು ಮತ್ತು ಕೆಲ ದೃಶ್ಯಗಳು ಅಸತ್ಯವೆಂದು ತೋರಿಬಂದಲ್ಲಿ ಅಂತಹವುಗಳನ್ನು ಕಿತ್ತು ಹಾಕಬೇಕು’ ಎಂದು ಚಿತ್ರ ನಿರ್ಮಾಪಕರನ್ನು ಆಗ್ರಹಿಸಿದೆ.
‘ತನ್ನ ಬೇಡಿಕೆಗೆ ಮಣಿಯದಿದ್ದರೆ ದೇಶದಲ್ಲಿ ಎಲ್ಲಿಯೂ ಈ ಚಿತ್ರದ ಪ್ರದರ್ಶನಕ್ಕೆ ತಾನು ಅವಕಾಶ ನೀಡುವುದಿಲ್ಲ’ ಎಂದು ಅದು ಬೆದರಿಕೆ ಹಾಕಿದೆ.
ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರದ ಮುಖ್ಯ ಪಾತ್ರದಲ್ಲಿ ಅನುಪಮ್ ಖೇರ್ ನಟಿಸಿದ್ದಾರೆ. ಇಂದು ಈ ಚಿತ್ರದ ಟ್ರೇಲರ್ ಅನ್ನು ಅನಾವರಣಗೊಳಿಸಲಾಯಿತು.
ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರ 2019ರ ಜನವರಿ 11ರಂದು ತೆರೆ ಕಾಣಲಿದೆ. ಈ ಚಿತ್ರವು ಸಂಜಯ್ ಬರು ವಿರಚಿತ ಅದೇ ಶೀರ್ಷಿಕೆಯ ಪುಸ್ತಕವನ್ನು ಆಧರಿಸಿದೆ.
ಯುಪಿಎ ಆಡಳಿತದಲ್ಲಿ 2004ರಿಂದ 2014ರ ವರೆಗಿನ ಅವಧಿಯಲ್ಲಿ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರನ್ನು ಮುಖ್ಯ ಪಾತ್ರದಲ್ಲಿ ಕಾಣಿಸುವ ಈ ಚಿತ್ರವು ತನ್ನ ವಿವಾದಾತ್ಮಕ ಹೂರಣದಿಂದಾಗಿ ಚಿತ್ರಪ್ರೇಮಿಗಳಲ್ಲಿ ಈಗಾಗಲೇ ತೀವ್ರವಾದ ಆಸಕ್ತಿಯನ್ನು ಕುದುರಿಸಿದೆ.