ಬೆಳಗಾವಿ: ಮೈತ್ರಿ ಪಕ್ಷದ ನಾಯಕರ ವೈಮನಸ್ಸಿನಿಂದ ಶೀಘ್ರದಲ್ಲೇ ರಾಜ್ಯ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗಲಿದೆ. ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುವುದು ಶತಸಿದ್ಧ ಎಂದು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ನಾಯಕರ ಕಚ್ಚಾಟದಿಂದಲೇ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಚುನಾವಣೆಯಲ್ಲಿ ರಾಜ್ಯದ ಜನತೆ ತಿರಸ್ಕರಿಸಿದ್ದರೂ ಅಧಿಕಾರದ ಆಸೆಯಿಂದ ಮುಂದುವರಿಯುವುದು ಸರಿಯಲ್ಲ. ಸೋಲಿನ ಹೊಣೆ ಹೊತ್ತು ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ವಿಧಾನಸಭೆ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲೂ ರಾಜ್ಯದ ಜನರು ದೋಸ್ತಿ ಸರ್ಕಾರವನ್ನು ತಿರಸ್ಕರಿಸಿ, 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬಾರದೆನ್ನುವ ದುರುದ್ದೇಶದಿಂದ ಮೈತ್ರಿ ಸರ್ಕಾರವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಕಾಲಕ್ಕೂ ರಾಜ್ಯವನ್ನು ಒಡೆಯಲು ಅವಕಾಶ ಕೊಡಲ್ಲ. ಅನೇಕ ಹಿರಿಯರು ಹೋರಾಟ ಮಾಡಿ ಅಖಂಡ ಕರ್ನಾಟಕ ರಚಿಸಿದ್ದಾರೆ. ರಾಜ್ಯ ಒಡೆಯುವ ಬಗ್ಗೆ ಎಲ್ಲಿಯೂ ಅಪಸ್ವರ ಬರಬಾರದು. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸುವರ್ಣ ವಿಧಾನಸೌಧಕ್ಕೆ ಶಕ್ತಿ ತುಂಬುವ ಕೆಲಸ ಆಗುತ್ತದೆ. ನಮ್ಮ ಸರ್ಕಾರ ಬಂದರೆ ಬೆಳಗಾವಿಯಲ್ಲೇ ಒಂದು ತಿಂಗಳ ಕಾಲ ಅಧಿವೇಶನ ನಡೆಯುವಂತೆ ನಾವು ಮಾಡುತ್ತೇವೆ ಎಂದರು.
ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಕೆಲಸ ಮಾಡುವುದೇ ಒಂದು ದೊಡ್ಡ ಸಾಧನೆ ಹಾಗೂ ಅದೃಷ್ಟ. ಕೆಲಸ ಮಾಡಲು ಯಾವ ಖಾತೆಯಾದರೇನು?. ನನಗೆ ಬಹಳ ಮಹತ್ವದ ಖಾತೆಯನ್ನೇ ನೀಡಿದ್ದಾರೆ. ಇದರಲ್ಲೇ ಉತ್ತಮ ಕೆಲಸ ಮಾಡಿ ತೋರಿಸುತ್ತೇನೆ.
-ಸುರೇಶ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ