Advertisement

ಮುಚ್ಚಾರು ಹಿ. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ

09:38 PM Sep 17, 2021 | Team Udayavani |

ಬಜಪೆ: ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣ ದೀಪವಾಗಿ, ಗ್ರಾಮಗಳ ಕೇಂದ್ರವಾಗಿ ಸ್ಥಾಪನೆಗೊಂಡು ಶತಮಾನೋತ್ಸವ ಆಚರಣೆ ಸಮೀಪದಲ್ಲಿರುವ ಮುಚ್ಚಾರಿನ ದ.ಕ. ಜಿ.ಪಂ. ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಶಿಕ್ಷಕರ ಕೊರತೆ ಕಾಡುತ್ತಿದೆ. ಜತೆಗೆ ಮೂಲಸೌಕರ್ಯವನ್ನು ಒದಗಿಸುವ ಅಗತ್ಯವಿದೆ. ನಿಡ್ಡೋಡಿ, ಎಡಪದವು, ಪಡುಪೆರಾರ, ಎಕ್ಕಾರು ನೀರುಡೆ ಪ್ರದೇಶದ ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಿದ್ದಾರೆ.

Advertisement

1928ರಲ್ಲಿ ಸ್ಥಾಪನೆಗೊಂಡ ಮುಚ್ಚಾರಿನ ಈ ಸರಕಾರಿ ಪ್ರಾ.ಹಿ. ಶಾಲೆಯು ಪ್ರಸ್ತುತ ದ.ಕ.ಜಿ.ಪಂ. ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದೆ. ಈಗ ಇಲ್ಲಿ 1ರಿಂದ 8ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. 2019ರಲ್ಲಿ 219 ವಿದ್ಯಾರ್ಥಿಗಳಿದ್ದು, 2020ರಲ್ಲಿ 272, ಪ್ರಸ್ತುತ 2021ರಲ್ಲಿ 300 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಆಂಗ್ಲ ಮಾಧ್ಯಮವು 2019ರಿಂದ 1ನೇ ತರಗತಿಗಳು ಆರಂಭವಾಗಿದೆ. ಈ ಸಾಲಿನಲ್ಲಿ ಆಂಗ್ಲ ಮಾಧ್ಯಮಕ್ಕೆ 33, ಕನ್ನಡ ಮಾಧ್ಯಮಕ್ಕೆ 11 ಮಂದಿ ಮಕ್ಕಳು 1ನೇ ತರಗತಿಗೆ ದಾಖಲಾಗಿದ್ದಾರೆ. ಈ ಸಾಲಿನಲ್ಲಿ ಇತರ ತರಗತಿಗೆ 25 ಮಂದಿ ಬೇರೆ ಶಾಲೆಯಿಂದ ದಾಖಲಾಗಿದ್ದಾರೆ. ಇದರಲ್ಲಿ 11 ಹುಡುಗರು, 14 ಹುಡುಗಿಯರು. ಕುಡುಬಿ ಜನಾಂಗದ ಅತೀ ಹೆಚ್ಚು ವಿದ್ಯಾರ್ಥಿಗಳಿದ್ದು ಅವರು 172 ವಿದ್ಯಾರ್ಥಿಗಳು, 32 ಪ. ಜಾತಿ, 30 ಪ. ಪಂಗಡ ಹಾಗೂ ಇತರ 66 ವಿದ್ಯಾರ್ಥಿಗಳಿದ್ದಾರೆ.

ಕನ್ನಡ ಮಾಧ್ಯಮ ಶಿಕ್ಷಕರಿಗೆ ಹೊರೆ
ಈ ಶಾಲೆಗೆ ಮಂಜೂರಾದ ಹುದ್ದೆಗಳ ಸಂಖ್ಯೆ 10 ಆದರೆ ಈಗ 8 ಮಂದಿ ಶಿಕ್ಷಕರಿದ್ದಾರೆ. ಮುಖ್ಯ ಶಿಕ್ಷಕ ಹಾಗೂ ವಿಜ್ಞಾನ ಶಿಕ್ಷಕರ ಹುದ್ದೆ ಖಾಲಿ ಇವೆ. ಪ್ರಸ್ತುತ ಆಂಗ್ಲ ಮಾಧ್ಯಮ ತರಗತಿಗಳನ್ನು ಕನ್ನಡ ಮಾಧ್ಯಮ ಶಿಕ್ಷಕರು ತರಬೇತಿ ತೆಗೆದುಕೊಂಡು ಪಾಠ ಮಾಡುತ್ತಿದ್ದಾರೆ. ಕನ್ನಡ ಮಾಧ್ಯಮ ಶಿಕ್ಷಕರಿಗೆ ಈಗ ಹೊರೆಯಾಗುತ್ತಿದ್ದು, ಇದರಿಂದ ಶಿಕ್ಷಕರ ಕೊರತೆ ಎದುರಾಗಿದೆ. ಈಗ 3ನೇ ತರಗತಿಯವರೆಗೆ ಮಾತ್ರ ಆಂಗ್ಲ ಮಾಧ್ಯಮ ತರಗತಿಗಳು ನಡೆಯುತ್ತಿವೆ. ಮುಂದೆ ಇದು ಹೆಚ್ಚಾಗುತ್ತಾ 8ನೇ ತರಗತಿಯವರೆಗೆ ಮುಂದುವರಿಯಲಿದೆ.

ಇದನ್ನೂ ಓದಿ:ಮೂರನೇ ಅಲೆ ಭೀತಿ : ಮುಂಬೈನಲ್ಲಿ ಅನಧಿಕೃತ “3ನೇ ಡೋಸ್‌’ ದರ್ಬಾರ್‌

ಕೊಠಡಿಗಳ ಕೊರತೆ
2018-19ರಲ್ಲಿ ಎಂಆರ್‌ಪಿಎಲ್‌ (ಸಿ.ಎಸ್‌.ಆರ್‌.ನಿಧಿ)ಯಿಂದ 75 ಲಕ್ಷ ರೂ. ಅನುದಾನದಿಂದ ನೂತನ ಕಟ್ಟಡ ನಿರ್ಮಾಣಗೊಂಡಿದ್ದು, ಇದು 2021ರಲ್ಲಿ ಉದ್ಘಾಟನೆಗೊಂಡಿದೆ.

Advertisement

ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮಗಳ ತರಗತಿಗಳು ನಡೆಯುತ್ತಿರುವ ಕಾರಣ ಹಳೆ, ನೂತನ ಕಟ್ಟಡಗಳಲ್ಲಿರುವ ತರಗತಿಗಳು ಸಾಕಾ ಗುತ್ತಿಲ್ಲ. ಕೊಠಡಿಗಳ ಕೊರತೆ ಕಾಡುತ್ತಿದೆ.

ಕುಡಿಯುವ ನೀರಿನ ಸಮಸ್ಯೆ
ಪಂ. ಕುಡಿಯುವ ನೀರು ಸರಬರಾಜು ಯೋಜನೆಯಿಂದ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಅದರೂ ನೀರಿನ ಕೊರತೆ ಇದೆ. ಕೊಳವೆ ಬಾವಿ ಹಾಳಾಗಿದೆ. ಶಾಲಾ ಆವರಣ ಗೋಡೆ, ಗ್ರಂಥಾಲಯ, ಪೀಠೊ ಪಕರಣಗಳ ಕೊರತೆ, ಕ್ರೀಡಾ ಸಾಮಗ್ರಿಗಳ ದಾಸ್ತಾನು ಕೊಠಡಿ, ಆಟದ ಮೈದಾನ, ಪ್ರಯೋಗಾಲಯ, ಸಭಾಂಗಣ, ಶಾಲಾ ದಾಖಲೆಗಳ ನಿರ್ವಹಣೆಗೆ ಗುಮಾಸ್ತರ ಅಗತ್ಯ ಇದೆ. ಎಲ್‌ಕೆಜಿ, ಯುಕೆಜಿ ತರಗತಿ ಗಳು ಇಲ್ಲಿ ನಡೆಯಬೇಕಾಗಿವೆ. ಈಗ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿಗಳು ನಡೆಯುತ್ತಿವೆ.

ಮೂಲಸೌಲಭ್ಯಗಳನ್ನು ಹೆಚ್ಚಿಸಿ
ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಆದರೆ ಶಾಲೆಗೆ 30 ಪಠ್ಯಪುಸ್ತಕಗಳು ಬರುವ ಕಾರಣ ಮುಂದೆ ಅವರು ಶೂ, ಸೈಕಲ್‌, ಸಮವಸ್ತ್ರ ಮುಂತಾದವುಗಳ ಸರಕಾರಿ ಸೌಲಭ್ಯಗಳ ವಂಚಿತರಾಗುವ ಸಾಧ್ಯತೆಯಿಂದಾಗಿ ಹೆಚ್ಚು ವಿದ್ಯಾರ್ಥಿಗಳ ಸೇರ್ಪಡೆ ಸಾಧ್ಯವಾಗಿಲ್ಲ. ಸರಕಾರಿ ಸೌಲಭ್ಯಗಳನ್ನು ಹೆಚ್ಚಿಸಬೇಕು, ಖಾಲಿ ಹುದ್ದೆ ಶಿಕ್ಷಕರ ನೇಮಕಾತಿ, ಆಂಗ್ಲ ಮಾಧ್ಯಮ ಶಿಕ್ಷಕರ ನೇಮಕಾತಿ, ದಾಖಲೆ ನಿರ್ವಹಣೆಗೆ ಗುಮಾಸ್ತರ ನೇಮಕಾತಿ ಮಾಡಿದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ.
-ಪುಷ್ಪಾವತಿ ಕೆ. ಮುಖ್ಯೋಪಾಧ್ಯಾಯಿನಿ (ಪ್ರಭಾರ)
ದ.ಕ.ಜಿ.ಪಂ.ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆ, ಮುಚ್ಚಾರು

– ಸುಬ್ರಾಯ ನಾಯಕ್‌ ಎಕ್ಕಾರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next