ಸೇಡಂ: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ವೈದ್ಯರ ಕೊರತೆಯನ್ನು ಶೀಘ್ರವೇ ನಿವಾರಿಸಲಾಗುವುದು ಎಂದು ಶಾಸಕ ರಾಜಕುಮಾರ ತೇಲ್ಕೂರ ಹೇಳಿದರು. ಪಟ್ಟಣದ ಸರ್ಕಾರಿ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಅನೇಕ ವರ್ಷಗಳಿಂದ ವೈದ್ಯರ ಕೊರತೆ ಇರುವುದು ಗಮನಕ್ಕೆ ಬಂದಿದೆ. ಶೀಘ್ರವೇ ಈ ಕುರಿತು ಸರ್ಕಾರದೊಂದಿಗೆ ಚರ್ಚೆ ನಡೆಸಿ ವೈದ್ಯರ ನೇಮಕಾತಿ ಬಗ್ಗೆ ಗಮನಹರಿಸಲಾಗುವುದು ಎಂದು ತಿಳಿಸಿದರು.
ಜನರ ಕಲ್ಯಾಣಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅನೇಕ ಸೌಲಭ್ಯ ಕಲ್ಪಿಸಲಾಗಿದೆ. ಅವುಗಳ ಸದುಪಯೋಗವಾಗಬೇಕಾದರೆ ಸಾರ್ವಜನಿಕರು ಉತ್ಸುಕತೆ ತೋರಬೇಕು. ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ
ಯೋಜನೆಯಲ್ಲಿ ಒಂದಾದ ಆಯುಷ್ಮಾನ ಭಾರತ್ ಸಮಾಜದ ಕಟ್ಟ ಕಡೆಯ ವ್ಯಕ್ತಿ ವರೆಗೂ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಇದೇ ವೇಳೆ ರೋಗಿಗಳ ಆರೋಗ್ಯ ಮತ್ತು ಆಸ್ಪತ್ರೆ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಶಾಸಕ ತೇಲ್ಕೂರ ಕುಂದು ಕೊರತೆ ನಿವಾರಿಸುವ ನಿಟ್ಟಿನಲ್ಲಿ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಶೀಘ್ರದಲ್ಲೇ ಎಲ್ಲ ಸಮಸ್ಯೆ ಪರಿಹರಿಸುವುದು ಅಸಾಧ್ಯ. ಹಂತ ಹಂತವಾಗಿ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ರೂಪಿಸಲಾಗುವುದು.
ವೈದ್ಯಕೀಯ ಸೌಲಭ್ಯದಲ್ಲಿ ಏರುಪೇರಾದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಹೇಳಿದರು. ತಾಲೂಕು ಆರೋಗ್ಯಾಧಿಕಾರಿ ಡಾ| ವಿವೇಕಾನಂದರೆಡ್ಡಿ ಪಾಟೀಲ, ಆಡಳಿತ ವೈದ್ಯಾಧಿಕಾರಿ ಡಾ| ಗೀತಾ ಪಾಟೀಲ, ಉಪ ತಹಶೀಲ್ದಾರ್ ನಾಗನಾಥ ತರಗೆ, ಡಾ| ಸದಾಶಿವ ದೇವಪ್ಪ, ಮುಖಂಡರಾದ ಬಸವರಾಜ ರೇವಗೊಂಡ, ವಿಜಯಕುಮಾರ ಶರ್ಮಾ, ಶ್ರೀಕಾಂತ ಬೆಡಸೂರ, ಬನ್ನಪ್ಪ ಕುಂಬಾರ, ಅನೀಲ ಐನಾಪುರ ಇದ್ದರು.