ಬೆಂಗಳೂರು: ತಾಯಿ ಎದೆ ಹಾಲಿನ ಕೊರತೆಯಿಂದ ಬಳಲುತ್ತಿರುವ ನವಜಾತ ಶಿಶುಗಳ ರಕ್ಷಣೆಗಾಗಿ ರಾಜ್ಯದಲ್ಲಿ ಹೊಸದಾಗಿ ನಾಲ್ಕು “ಅಮೃತಧಾರೆ’ (ಹ್ಯೂಮನ್ ಮಿಲ್ಕ್ ಬ್ಯಾಂಕ್) ಕೇಂದ್ರಗಳ ಸ್ಥಾಪನೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಈ ಕೇಂದ್ರಗಳು
ಮುಂದಿನ ಎರಡು ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲಿವೆ.
ಅಕಾಲಿಕವಾಗಿ ಹಾಗೂ ತೂಕವಿಲ್ಲದೇ ಜನಿಸಿದ, ಎದೆ ಹಾಲು ಉತ್ಪಾದಿಸದ ತಾಯಂದಿರ ಹಾಗೂ ಹಲವು ಕಾರಣಗಳಿಂದ ತಾಯಂದಿರಿಂದ ದೂರ ಉಳಿದಿರುವ ಶೇ.68ರಷ್ಟು ಶಿಶುಗಳಿಗೆ ಎದೆ ಹಾಲಿನ ಕೊರತೆಯಿದೆ. ಇದನ್ನು ಸರಿಪಡಿಸಲು ಆರೋಗ್ಯ
ಇಲಾಖೆ ಮೈಸೂರು, ಬೆಳಗಾವಿ, ಬೆಂಗಳೂರು, ಕಲಬುರಗಿಯಲ್ಲಿ ತಲಾ ಒಂದು ಹ್ಯೂಮನ್ ಮಿಲ್ಕ್ ಬ್ಯಾಂಕ್ ತೆರೆಯಲಿದ್ದು, ಪ್ರಸ್ತುತ ಅಗತ್ಯದ ಐಸ್ ಲೈನ್ ಶಿಥಿಲೀಕರಣ ಯಂತ್ರ, ಮಿಕ್ಸಿಂಗ್ ಯಂತ್ರ, ಡ್ರೈಯರ್, ಪಾಶ್ಚರೀಕರಿಸುವ ಯಂತ್ರ, ಬ್ರೈಸ್ಟ್ ಪಂಪ್ ಖರೀದಿ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.
ಎರಡು ವಿಭಾಗದಲ್ಲಿ ಸಂಗ್ರಹ: ಇಲ್ಲಿ ಸ್ವತಃ ತಾಯಿಯಿಂದ ಮಗುವಿಗೆ ಹಾಗೂ ದಾನಿ ತಾಯಿಯ ಹಾಲನ್ನು ಇತರೆ ಮಗುವಿಗೆ ನೀಡಲು ಅವಕಾಶ ನೀಡಲಾಗಿದೆ. ಸಂಗ್ರಹಿಸುವ ಹಾಲು ಪ್ರಾರಂಭಿಕ ಹಂತದಲ್ಲಿ ಸ್ಕ್ರೀನಿಂಗ್ ಹಾಗೂ ಪಾಶ್ಚರೀಕರಿಸಿ ರೋಗಾಣು ನಾಶ ಮಾಡಲಾಗುತ್ತದೆ.
ಅನಂತರ ಬಾಟಲಿಯಲ್ಲಿ ಭದ್ರಗೊಳಿಸಿ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಗರಿಷ್ಠ 6 ತಿಂಗಳ ಕಾಲ ಸಂಗ್ರಹಿಸಿ ಇಡಬಹುದಾಗಿದೆ. ಖಾಸಗಿ ಕೇಂದ್ರದಲ್ಲಿ ಪಾಶ್ಚರೀಕರಿಸಿದ 150 ಎಂ.ಎಲ್. ಹಾಲಿಗೆ 3000 ರಿಂದ 4000 ರೂ. ಪಾವತಿಸಬೇಕು. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯವಿರುವ ಶಿಶುಗಳಿಗೆ ಉಚಿತವಾಗಿ ಒದಗಿಸಲಾಗುತ್ತದೆ.
Related Articles
ಯಾರು ಅರ್ಹರು?: ಅಗತ್ಯಕ್ಕಿಂತ ಹೆಚ್ಚು ಎದೆಹಾಲು ಹೊಂದಿರುವ ಎಲ್ಲ ಆರೋಗ್ಯವಂತ ತಾಯಂದಿರು ದಾನ ಮಾಡಬಹುದಾಗಿದೆ. ದಾನಿ ತಾಯಿಯನ್ನು ಮೊದಲಿಗೆ ಎಚ್ಐವಿ, ಹೆಪಟೈಟೀಸ್ ಬಿ ಹಾಗೂ ಸಿ, ವಿಡಿಆರ್ಎಲ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರು ಮಾತ್ರ ಎದೆ ಹಾಲು ದಾನ ಮಾಡಬಹುದಾಗಿದೆ.
ಉಚಿತ ವಿತರಣೆ
ಕಳೆದೊಂದು ವರ್ಷದಿಂದ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಸರ್ಕಾರಿ ಹಾಗೂ ಮಂಗಳೂರಿನ ಲೇಡಿಘೋಷ್ ಆಸ್ಪತ್ರೆಯಲ್ಲಿ ಖಾಸಗಿ ಸಾರ್ವಜನಿಕ ಸಹಬಾಗಿತ್ವದಲ್ಲಿ ತಲಾ ಒಂದು ಹ್ಯೂಮನ್ ಮಿಲ್ಕ್ ಬ್ಯಾಂಕ್ ಸ್ಥಾಪಿಸಲಾಗಿದೆ.
ಇದುವರೆಗೆ ಎರಡು ಕೇಂದ್ರದಲ್ಲಿ ಸುಮಾರು 300 ಲೀಟರ್ ಹಾಲು ಪಾಶ್ಚರೀಕರಿಸಿ 1000ಕ್ಕೂ ಅಧಿಕ ನವಜಾತ ಶಿಶುಗಳಿಗೆ ಉಚಿತವಾಗಿ ವಿತರಿಸಲಾಗಿದೆ. ಎರಡು ಕೇಂದ್ರದಲ್ಲಿ ಒಟ್ಟು ಪ್ರತಿ ದಿನ ಸರಾಸರಿ 120ಕ್ಕೂ ಅಧಿಕ ಮಂದಿ ದಾನಿಗಳು ಎದೆ ಹಾಲು ದಾನ ಮಾಡುತ್ತಾರೆ.
*ತೃಪ್ತಿ ಕುಮ್ರಗೋಡು