Advertisement

ನೂತನ ಸಂಸದರ ಕಿರು ಪರಿಚಯ

10:37 PM May 24, 2019 | Lakshmi GovindaRaj |

ವೈ. ದೇವೇಂದ್ರಪ್ಪ: ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ವೈ.ದೇವೇಂದ್ರಪ್ಪ ಅವರು ಇದೇ ಮೊದಲ ಬಾರಿಗೆ ಸಂಸತ್‌ ಪ್ರವೇಶ ಮಾಡಲಿದ್ದಾರೆ. ಹಾಲಿ ಸಂಸದ ಉಗ್ರಪ್ಪ ಅವರನ್ನು 60 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ, ಬಳ್ಳಾರಿ ಕ್ಷೇತ್ರವನ್ನು ಪುನ: ಬಿಜೆಪಿ ತೆಕ್ಕೆಗೆ ತರುವಲ್ಲಿ ಸಫ‌ಲರಾಗಿದ್ದಾರೆ. ಮಾಜಿ ಸಚಿವ ಹಾಗೂ ಶಾಸಕ ರಮೇಶ್‌ ಜಾರಕಿಹೊಳಿಯವರ ಸಂಬಂಧಿಯಾಗಿರುವ ದೇವೇಂದ್ರಪ್ಪ, ಕಳೆದ ವಿಧಾನಸಭೆ ಚುನಾವಣೆಗೂ ಮೊದಲೆ ಬಿಜೆಪಿ ಸೇರಿದ್ದರು. ಅವರ ಪತ್ನಿ ಕಾಂಗ್ರೆಸ್‌ನಿಂದ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿದ್ದರು. ದೇವೇಂದ್ರಪ್ಪ ಅವರು ರಾಜಕೀಯ ಪ್ರವೇಶಕ್ಕೂ ಮೊದಲು ಸರ್ಕಾರಿ ಸೇವೆಯಲ್ಲಿದ್ದರು.

Advertisement

ಡಾ.ಉಮೇಶ್‌ ಜಾದವ್‌: ಲಂಬಾಣಿ ಸಮುದಾಯದ ಪ್ರಭಾವಿ ನಾಯಕರಾಗಿರುವ ಡಾ.ಉಮೇಶ್‌ ಜಾದವ್‌ ಈಗ ಬಿಜೆಪಿಯ ಕಲಬುರಗಿ ಸಂಸದ. ಕಾಂಗ್ರೆಸ್‌ ಪಕ್ಷದ ಶಾಸಕರಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ್ದ ಇವರು, ಮೈತ್ರಿ ಸರ್ಕಾರ ರಚನೆಯಾದ ನಂತರ ಕೆಲವು ಕಾರಣಗಳಿಗಾಗಿ ಪಕ್ಷ ತೊರೆದಿದ್ದರು. ಲೋಕಸಭಾ ಚುನಾವಣೆಗೂ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಹಾಗೆಯೇ ತಮ್ಮ ಸ್ವಕ್ಷೇತ್ರವಾದ ಚಿಂಚೋಳಿಯನ್ನು ಮಗನಿಗೆ ಬಿಟ್ಟು ಕೊಟ್ಟು, ಮಗನನ್ನು ಅಲ್ಲಿ ಶಾಸಕನನ್ನಾಗಿ ಮಾಡುವಲ್ಲಿ ಸಫ‌ಲರಾಗಿದ್ದಾರೆ. ಒಂದೇ ಅವಧಿಗೆ ಅಪ್ಪ ಸಂಸದ ಹಾಗೂ ಮಗ ಶಾಸಕರಾಗಿರುವುದು ವಿಶೇಷ.

ಸುಮಲತಾ ಅಂಬರೀಶ್‌: ಪಂಚಭಾಷಾ ಖ್ಯಾತಿಯ ನಟಿ, ಸುಮಲತಾ ಅಂಬರೀಶ್‌ ಇದೇ ಮೊದಲ ಬಾರಿಗೆ ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ, ದಾಖಲೆ ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷದಿಂದ ಸ್ಪರ್ಧೆ ಮಾಡದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ನಾಗಮಂಗಲ ಹೊರತುಪಡಿಸಿದರೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್‌ ಪಡೆದು, ಅಚ್ಚರಿ ಮೂಡಿಸಿದ್ದಾರೆ. ಅಂಬರೀಶ್‌ ಅವರು ಮಂಡ್ಯದಿಂದ ಮೂರು ಬಾರಿ ಸಂಸದರಾಗಿ, ಒಮ್ಮೆ ಶಾಸಕರಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರೂ ಆಗಿದ್ದರು.

ಪ್ರಜ್ವಲ್‌ ರೇವಣ್ಣ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮೊಮ್ಮಗ, ಪ್ರಜ್ವಲ್‌ ರೇವಣ್ಣ ಹಾಸನ ಲೋಕಸಭೆ ಕ್ಷೇತ್ರದಿಂದ ಜೆಡಿಎಸ್‌ನಿಂದ ಆಯ್ಕೆಯಾಗಿದ್ದು, ಕಿರಿಯ ಸಂಸದರಲ್ಲಿ ಒಬ್ಬರಾಗಿದ್ದಾರೆ. ತಂದೆ ಎಚ್‌.ಡಿ.ರೇವಣ್ಣ ಸಚಿವರಾಗಿದ್ದು, ತಾಯಿ ಭವಾನಿ ರೇವಣ್ಣ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಎರಡು ವರ್ಷಗಳ ಹಿಂದೆಯೇ ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟು ಕೊಡುವುದಾಗಿ ಹೇಳಿದ್ದರು. ಪ್ರಜ್ವಲ್‌, ಹಾಸನಕ್ಕೆ ನನ್ನ ವಾರಸುದಾರ ಎಂದಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಜ್ವಲ್‌ ಅವರು ಹುಣಸೂರು, ಬೇಲೂರು, ರಾಜರಾಜೇಶ್ವರಿನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಮಾತುಗಳೂ ಕೇಳಿ ಬಂದಿದ್ದವು.

ತೇಜಸ್ವಿ ಸೂರ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸಂಸದರ ಪೈಕಿ ಅತಿ ಕಿರಿಯ ವಯಸ್ಸಿನರಾದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬಾಲ್ಯಾವಸ್ಥೆಯಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ ತೊಡಗಿಸಿಕೊಂಡವರು. ಬಳಿಕ, ಕಾಲೇಜು ಹಂತದಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿಯಾಗಿದ್ದರು. ಸದ್ಯ, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಕಾನೂನು ಪದವೀಧರರಾದ ತೇಜಸ್ವಿ ಸೂರ್ಯ, ರಾಜ್ಯ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಸವನಗುಡಿ ಶಾಸಕ ಎಲ್‌.ಎ.ರವಿ ಸುಬ್ರಹ್ಮಣ್ಯ ಅವರ ಅಣ್ಣನ ಮಗನಾಗಿರುವ ತೇಜಸ್ವಿ ಸೂರ್ಯ, ನೇರವಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಸಂಸದರಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದಾರೆ.

Advertisement

ಎಸ್‌. ಮುನಿಸ್ವಾಮಿ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರಾಗಿರುವ ಎಸ್‌.ಮುನಿಸ್ವಾಮಿಯವರು ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ಮುನಿಸ್ವಾಮಿ, ಮೂಲತ: ಕಾಂಗ್ರೆಸ್ಸಿಗರು. 2014ರಲ್ಲಿ ಶಾಸಕ ಅರವಿಂದ ಲಿಂಬಾವಳಿಯವರ ಮೂಲಕ ಬಿಜೆಪಿಗೆ ಸೇರ್ಪಡೆಯಾದರು. 2015ರಲ್ಲಿ ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ಮುನಿಸ್ವಾಮಿಯವರು, ಅನಿರೀಕ್ಷಿತವೆಂಬಂತೆ ಟಿಕೆಟ್‌ ಪಡೆದು ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಪರಾಭವಗೊಳಿಸಿ ಲೋಕಸಭೆ ಪ್ರವೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next