ತೆಕ್ಕಟ್ಟೆ: ಕೆದೂರು ಗ್ರಾ. ಪಂ. ವ್ಯಾಪ್ತಿಯ ಪ್ರಗತಿಪರ ಕೃಷಿಕ ಶಾನಾಡಿ ರಾಮಚಂದ್ರ ಭಟ್ ಅವರ ಮನೆಯ ಸಮೀಪದ, ಕಬ್ಬಿನ ತೋಟದ ನಡುವೆ ಹಾದುಹೋದ ವಿದ್ಯುತ್ ತಂತಿಗಳ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಬ್ಬಿನ ತೋಟ ಹಾಗೂ ಸಮೀಪದ ಗಿಡಗಂಟಿಗಳಿಗೆ ಬೆಂಕಿ ಹೊತ್ತಿಕೊಂಡು ಉರಿದು ಹಾನಿಯಾದ ಘಟನೆ ಫೆ. 2ರಂದು ಸಂಭವಿಸಿದೆ.
ಶಾರ್ಟ್ ಸರ್ಕ್ಯೂಟ್‌ಆಗುತ್ತಿದ್ದಂತೆ, ಸಮೀಪದಲ್ಲಿನ ಚಿಕ್ಕಯ್ಯ ಶೆಟ್ಟಿ ಅವರ ಅಕೇಶಿಯಾ ಹಾಡಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಸರದಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನ ಹಾಗೂ ಬೀಸುತ್ತಿರುವ ಗಾಳಿಯಿಂದಾಗಿ ಬೆಂಕಿಯ ತೀವ್ರತೆ ಹೆಚ್ಚಾಗಿ ಸುಮಾರು 1.5 ಎಕ್ರೆ ವಿಸ್ತೀರ್ಣದವರೆಗೆ ಬೆಂಕಿ ಹೊತ್ತಿ ಉರಿಯತೊಡಗಿದೆ. ತತ್‌ಕ್ಷಣವೇ ಸ್ಥಳೀಯರ ನೆರವಿನಿಂದ ಕುಂದಾಪುರ ಅಗ್ನಿಶಾಮಕ ಸಿಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ತಂತಿ ತೆರವಿಗೆ ಆಗ್ರಹ:
ಶಾನಾಡಿ ಪರಿಸರದಲ್ಲಿ ತೋಟ ಹಾಗೂ ಹಾಡಿಯ ನಡುವೆ ಹಾದುಹೋಗಿರುವ ಹಳೆಯದಾದ ವಿದ್ಯುತ್ ತಂತಿಗಳು ಕೈಗೆ ತಗಲುವ ರೀತಿಯಲ್ಲಿದ್ದು ಸಂಭವನೀಯ ಅವಘಡಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಿದ್ದು, ಹಳೆಯದಾದ ಅಪಾಯಕಾರಿ ಜೋತು ಬಿದ್ದಿರುವ ವಿದ್ಯುತ್ ತಂತಿಗಳ ತೆರವಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.
Related Articles
ಮೆಸ್ಕಾಂಗೆ ಮನವಿ:
ಗಾಳಿಯ ತೀವ್ರತೆಯಿಂದ ಪರಿಸರದ ವಿದ್ಯುತ್ ಸಂಪರ್ಕ ನಿಲ್ಲಿಸುವಂತೆ ಮೆಸ್ಕಾಂ ಸಿಬಂದಿಗೆ ಮನವಿ ಮಾಡಿದ್ದೇನೆ. ಆದರೆ ಮೆಸ್ಕಾಂನವರು ಕೇವಲ ಅರ್ಧಗಂಟೆ ಸಂಪರ್ಕ ನಿಲ್ಲಿಸಿ ಮತ್ತೆ ನೀಡಿದ್ದಾರೆ. ಇದರಿಂದ ಶಾರ್ಟ್ ಸರ್ಕ್ಯೂಟ್ ಆಗಿದ್ದು ಬೆಳೆದು ನಿಂತ ಅರ್ಧ ಎಕ್ರೆ ಕಬ್ಬಿನ ತೋಟ ಹಾಗೂ ಗೇರು ಗಿಟಗಳಿಗೆ ಹಾನಿಯಾಗಿದೆ ಎಂದು ಶಾನಾಡಿ ರಾಮಚಂದ್ರ ಭಟ್ ದೂರಿದ್ದಾರೆ.