Advertisement

ಶಾರ್ಟ್‌ ಸರ್ಕ್ಯೂಟ್‌; ಸುಟ್ಟ ಕಿರಾಣಿ ಅಂಗಡಿ

02:22 PM Apr 20, 2022 | Team Udayavani |

ಚಿಂಚೋಳಿ: ಪಟ್ಟಣದ ಬಸ್‌ ನಿಲ್ದಾಣ ಸಮೀಪದ ಡಿಸಿಸಿ ಬ್ಯಾಂಕ್‌ ಎದುರಿಗೆ ಇರುವ ಕಿರಾಣಿ ಅಂಗಡಿಗೆ ಸೋಮವಾರ ರಾತ್ರಿ ಶಾರ್ಟ್‌ ಸರ್ಕ್ಯೂಟ್‌ದಿಂದ ಬೆಂಕಿ ಹತ್ತಿಕೊಂಡಿದ್ದರಿಂದ ಅಂಗಡಿಯಲ್ಲಿದ್ದ ಸರಕು-ವಸ್ತುಗಳು ಸಂಪೂರ್ಣ ಸುಟ್ಟಿವೆ.

Advertisement

ಪಟ್ಟಣದ ನಿವಾಸಿ ಅಮಜದ್‌ ತಜಮುಲ್ಲಾ ಎನ್ನುವನಿಗೆ ಈ ಅಂಗಡಿ ಸೇರಿದ್ದಾಗಿದೆ. ಕಳೆದ ಆರು ತಿಂಗಳಿಂದ ಬಸ್‌ ನಿಲ್ದಾಣ ಹತ್ತಿರ ಮುಖ್ಯರಸ್ತೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ. ಸೋಮವಾರ ರಾತ್ರಿ ಕಿರಾಣಿ ಅಂಗಡಿ ವ್ಯಾಪಾರ ಕೈಗೊಂಡು ಕೀಲಿ ಹಾಕಿ ಮನೆಗೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಕಿರಾಣಿ ಅಂಗಡಿಯಿಂದ ದಟ್ಟವಾದ ಹೊಗೆ ಮತ್ತು ಬೆಂಕಿ ನೋಡಿ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಶೆಟರ್‌ ಮುರಿದು, ಕಿರಾಣಿ ಅಂಗಡಿಯಲ್ಲಿ ಬೆಂಕಿಯಿಂದ ಸುಡುತ್ತಿದ್ದ ಬೆಲೆ ಬಾಳುವ ಆಹಾರ ಪದಾರ್ಥಗಳನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ಒಟ್ಟು 45ಲಕ್ಷ ರೂ.ಗಳಷ್ಟು ಅಂದಾಜು ಹಾನಿಯಾಗಿದೆ ಎಂದು ವ್ಯಾಪಾರಸ್ಥ ಅಮಜದ್‌ ತಜಮುಲ್ಲಾ ಇನಾಂದಾರ ಚಿಂಚೋಳಿ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಬೆಂಕಿಯಿಂದ ಹಾನಿಗೊಳಗಾದ ಸಂತ್ರಸ್ತ ವ್ಯಾಪಾರಸ್ಥನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಸಮಾಜ ಸೇವಕರಾದ ಕೆ.ಎಂ.ಬಾರಿ, ಅಬ್ದುಲ್‌ ಬಾಸೀತ್‌ ಮನವಿ ಮಾಡಿದ್ದಾರೆ.

ತಹಶೀಲ್ದಾರ್‌-ಕಂದಾಯ ಸಿಬ್ಬಂದಿ ಪರಿಶೀಲನೆ: ಪಟ್ಟಣದಲ್ಲಿ ಕಿರಾಣಿ ಅಂಗಡಿಗೆ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ಹತ್ತಿಕೊಂಡಿರುವ ಘಟನೆ ಕುರಿತು ವರದಿ ನೀಡುವಂತೆ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್‌ ಅಂಜುಮ ತಬಸುಮ ತಿಳಿಸಿದ್ದಾರೆ.

Advertisement

ಕಂದಾಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿರಾಣಿ ಅಂಗಡಿಯಲ್ಲಿದ್ದ ಅಕ್ಕಿ, ಗೋಧಿ, ಜೋಳ, ಹಿಟ್ಟು, ಎಣ್ಣೆ, ಸಾಬೂನು, ಶೇಂಗಾ, ಮಸಾಲಾ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಈ ಕುರಿತು ವರದಿ ನೀಡಲು ತಿಳಿಸಲಾಗಿದೆ ಎಂದರು.

ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. ಹಾನಿ ಕುರಿತು ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ವರದಿ ನೀಡಬೇಕಾಗಿತ್ತು. ಆದರೆ ಐನೋಳಿಯಲ್ಲಿ ಕಳೆದ ಶನಿವಾರ ವಿದ್ಯುತ್ ಸ್ಪರ್ಶದಿಂದ ಇಬ್ಬರು ಲೈನ್‌ಮನ್‌ಗಳ ಮೈ ಸುಟ್ಟ ಘಟನೆಗೆ ಸಂಬಂಧಿಸಿದಂತೆ ಎಸ್‌ಒ ಅವರನ್ನು ಅಮಾನತು ಮಾಡಲಾಗಿದೆ. ಎಇಇ ಉಮೇಶ ಗೋಳಾ ಅವರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಭಾರಿ ಜೆಸ್ಕಾಂ ಎಇಇ ಅವರಿಂದ ತನಿಖೆ ನಡೆಸಬೇಕಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next