ಶಿವಮೊಗ್ಗ: ಮುಂಜಾನೆ ಸಮಯದಲ್ಲಿ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿ ಉದ್ಯಮಿಯೊಬ್ಬರು ಸಾವಿಗೀಡಾದ ಘಟನೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿ ಸಮೀಪ ನಡೆದಿದೆ.
ಖ್ಯಾತ ಉದ್ಯಮಿ, ಶಿವಮೊಗ್ಗ ಛೇಂಬರ್ ಆಫ್ ಕಾಮರ್ಸ್ ನಿರ್ದೇಶಕರಾಗಿದ್ದ ಭೂಪಾಳಂ ಎಸ್. ಶರತ್ (39) ಘಟನೆಯಲ್ಲಿ ಮೃತಪಟ್ಟಿದ್ದಾರೆ. ಶರತ್ ಅವರ ಪುತ್ರ ಸಂಚಿತ್ (12) ಗಂಭೀರ ಗಾಯಗೊಂಡಿದ್ದಾರೆ. ಸಂಚಿತ್ ಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಮೊಗ್ಗ ಕುವೆಂಪು ರಸ್ತೆಯ ಜಿಲ್ಲಾ ಪಂಚಾಯತ್ ಕಚೇರಿ ಎದುರು ಇರುವ ಭೂಪಾಳಂ ಕುಟುಂಬದವರ ಮನೆಯಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಹೊಗೆ ಆವರಿಸಿದ ಕೂಡಲೇ ಭೂಪಾಳಂ ಕುಟುಂಬಸ್ಥರು ಮನೆಯಿಂದ ಹೊರಬಂದಿದ್ದಾರೆ. ಈ ವೇಳೆ ಮತ್ತೆ ಮನೆಯೊಳಗೆ ತೆರಳಿದ ಶರತ್, ಹೊಗೆಯ ಮಧ್ಯೆ ಸಿಲುಕಿ ಪ್ರಜ್ಞೆತಪ್ಪಿ ಬಿದ್ದಿದ್ದರು.
ಇದನ್ನೂ ಓದಿ:ಪ. ಘಟ್ಟದಲ್ಲಿ ಕಾಳ್ಗಿಚ್ಚಿನ ಸವಾಲು: ಡಿಸೆಂಬರ್‌ಗೆ ಆರಂಭವಾಗಿದೆ ಕಿಚ್ಚಿಡುವ ಚಾಳಿ!
ಘಟನೆಯಲ್ಲಿ ಭೂಪಾಳಂ ಶಶಿಧರ್ ಸೇರಿದಂತೆ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಯ ಬೆಂಕಿ ನಂದಿಸುವ ಜೊತೆಗೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ತೀವ್ರ ಅಸ್ವಸ್ಥರಾಗಿ ಬಿದ್ದಿದ್ದ ಶರತ್ ರಕ್ಷಣೆ ಮಾಡಿ, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉದ್ಯಮಿ ಶರತ್ ಮೃತಪಟ್ಟಿದ್ದಾರೆ.
ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.