ಬೆಂಗಳೂರು: ನಗರದಲ್ಲಿ ದೀಪಾವಳಿ ಆಚರಣೆಯ ಸಿದ್ಧತೆ ಜೋರಾಗಿ ನಡೆಯ್ತುತಿದೆ. ಬೆಂಗಳೂರಿನ ಜನಪ್ರಿಯ ಶಾಪಿಂಗ್ ಏರಿಯಾಗಳೆಲ್ಲಾ ಜನರಿಂದ ತುಂಬಿ ತುಳುಕುತ್ತಿದೆ. ಕೆಲವರು ಪರಿವಾರ ಸಮೇತರಾಗಿ ಸಾಂಪ್ರದಾಯಿಕ ಉಡುಗೆಗಳನ್ನು ಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರೆ, ಇನ್ನೂ ಕೆಲವರು ನ್ಯೂ ಅರೈವಲ್ಸ್ ಮತ್ತು ಟ್ರೆಂಡಿ ಉಡುಗೆಗಳನ್ನು ಹುಡುಕುತ್ತಾ ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ.
ದೀಪಾವಳಿ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ನಗರದ ಜನಪ್ರಿಯ ಶಾಪಿಂಗ್ ಏರಿಯಾಗಳಾದ ಜಯನಗರ, ಎನ್.ಆರ್.ಕಾಲೋನಿ, ಗಾಂಧಿ ಬಜಾರ್, ವಿಜಯನಗರ, ಮಲ್ಲೇಶ್ವರ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಬ್ರಿಗೇಡ್ ರೋಡಿಗಳಲ್ಲಿ ಶಾಪಿಂಗ್ ಜೋರಾಗಿ ನಡೆಯುತ್ತಿದೆ.
ದೀಪಾವಳಿ ಹಬ್ಬ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂತೋಷ. ದೇಶದೆಲ್ಲೆಡೆ ಆಚರಿಸುವ ಹಬ್ಬವಾಗಿದ್ದು, ರಾಜ್ಯದಲ್ಲೂ ಮುಖ್ಯ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಬಟ್ಟೆ ಮತ್ತು ಆಭರಣಗಳ ಮಾರಾಟ ಎಂದಿಗಿಂತ ಹೆಚ್ಚಾಗುತ್ತದೆ. ಈ ಬಾರಿ ದೀಪಾವಳಿ ಪ್ರಯುಕ್ತ ಸಾಂಪ್ರದಾಯಿಕ ಉಡುಗೆಗಳಲ್ಲಿ ಹೊಸ ಟ್ರೆಂಡ್ಸ್ ಮಾರುಕಟ್ಟೆಗೆ ಪ್ರವೇಶಿಸಿವೆ. ಗಂಡಸರಿಗೆ ಕುರ್ತ, ವೇಸ್ಟ್
ಕೋಟ್ ಕುರ್ತ ಇತ್ತೀಚಿನ ದಿನಗಳಲ್ಲಿ ಬಾರಿ ಜನಪ್ರಿಯವಾಗಿದ್ದು, ಮಕ್ಕಳಿಗೆ ಸಾಂಪ್ರದಾಯಿಕ ಧೋತಿ, ಚೈನೀಸ್ ಕಾಲರ್ ಕುರ್ತ, ಪ್ರಿಂಟೆಡ್ ಕುರ್ತ ಮತ್ತು ಕಟ್ ಶರ್ಟ್‌ಗಳ ಮಾರಾಟ ಜೋರಾಗಿದೆ. ಹೆಣ್ಣು ಮಕ್ಕಳಿಗೆ ಗೌನ್, ರೆಡಿ ವಿಡಿಯರ್ ಸ್ಯಾರಿ, ಸ್ಯಾರಿ ಕನ್ವರ್ಟೆಡ್ ಗೌನ್, ಲೆಹೆಂಗ, ಲೆಹೆಂಗಾ ವಿತ್ ಕ್ರಾಪ್, ಫ್ರಂಟ್ ಸ್ಪ್ಲಿಟ್ ಕುರ್ತಿ, ರಫ್ ಸ್ಯಾರಿ, ಪ್ಲಾಜೋ ಕುರ್ತಿ, ಫ್ಯಾನ್ಸ್ ಜೀನ್ಸ್ , ಘಾಗ್ರಾ ಚೋಲೀಸ್, ಕಟ್ ಟಾಪ್, ಜೀನ್ಸ್ ಟಾಟ್, ಲಾಂಗ್ ಕುರ್ತಿ, ಸ್ಟ್ರೈಪ್ ಜೀನ್ಸ್ ಈಗ ಹೆಚ್ಚು ಬೇಡಿಕೆಯಲ್ಲಿವೆ.
ಆಲ್ ಇನ್ ಒನ್ ಶಿವಾಜಿನಗರ : ಮಧ್ಯಮ ಮತ್ತು ಕೆಳ ವರ್ಗದ ಬಟ್ಟೆ ಪ್ರಿಯರ ಶಾಪಿಂಗ್ ಹಾಟ್ ಸ್ಪಾಟ್ ಎಂದು ಖ್ಯಾತಿ ಗಳಿಸಿರುವ ಶಿವಾಜಿನಗರದಲ್ಲಿ ವರ್ಷವಿಡೀ ವಹಿವಾಟು ನಡೆಯುತ್ತಿರುತ್ತದೆ. ಇನ್ನು ಹಬ್ಬಗಳ ವೇಳೆ ಗ್ರಾಹಕರ ಸಂಖ್ಯೆ ಮೂರು ಪಟ್ಟು ಹೆಚ್ಚಾಗುತ್ತದೆ. ಇಲ್ಲಿ ಎಲ್ಲಾ ವರ್ಗದ ಜನರು ಬಯಸುವ ಉತ್ಪನ್ನಗಳು ಕನಿಷ್ಠ ಬೆಲೆಗೆ ಸಿಗುತ್ತದೆ. ಇಲ್ಲಿಯೇ ಇರುವ ಕಮರ್ಶಿಯಲ್ ಸ್ಟ್ರೀಟ್‌ನಲ್ಲಿ ಹಲವಾರು ಬ್ರಾಂಡೆಡ್ ಉತ್ಪನ್ನಗಳ ಮಳಿಗೆಗಳಿದ್ದು, ಇಲ್ಲಿ ಕೂಡ ವಹಿವಾಟು ಜೋರಾಗಿದೆ. ಇಲ್ಲಿನ ಸಮೀಪದ ಡಿಕನ್ಸನ್ ರಸ್ತೆಯುದ್ದಕ್ಕೂ ಆಭರಣದ ಮಳಿಗೆಗಳಿದ್ದು, ಚಿನ್ನ, ಬೆಳ್ಳಿ, ವಜ್ರ ಮತ್ತು ಪ್ಲಾಟಿನಂ ಆಭರಣಗಳನ್ನು ಕೊಳ್ಳುವ ಗ್ರಾಹಕರನ್ನು ಕಾಣಬಹುದು.
ಜಯನಗರದಲ್ಲಿ ಶಾಪಿಂಗ್ ಅಬ್ಬರ: ಜಯನಗರ 4ನೇ ಬ್ಲಾಕ್‌ನಲ್ಲಿರುವ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಇದರ ಸುತ್ತಮುತ್ತ 200ಕ್ಕೂ ಅಧಿಕ ಬಟ್ಟೆ ಅಂಗಡಿಗಳಿವೆ. ಇಲ್ಲಿ 150ರೂ. ನಿಂದ 1500ರೂ.ವರೆಗೆ ಬೆಲೆ ಬಾಳುವ ಕುರ್ತಗಳು, ಶೂ ಮತ್ತು ಚಪ್ಪಲಿಗಳು, ಲೆಗ್ಗಿನ್ಸ್, ಜೀನ್ಸ್‌ಗಳು ಸಿಗಲಿವೆ. ದೀಪಾವಳಿ ಹಿನ್ನೆಲೆಯಲ್ಲಿ ಬೆಳಗ್ಗೆ 9ರಿಂದ ರಾತ್ರಿ 10ಗಂಟೆವರೆಗೆ ತೆರೆಯುತಿದ್ದ ಅಂಗಡಿಗಳೀಗ 11ಗಂಟೆವರೆಗೆ ಗ್ರಾಹಕರಿಂದ ತುಂಬಿರುತ್ತದೆ.
ಎನ್.ಆರ್. ಕಾಲೋನಿ ಹೌಸ್ ಫುಲ್ : ಬಸವನಗುಡಿ, ಚಾಮರಾಜಪೇಟೆ, ಗಿರಿನಗರ, ಹನುಮಂತನಗರ, ವಿಲ್ಸನ್ ಗಾರ್ಡನ್ ಭಾಗದ ಜನರಿಗೆ ಅತೀ ಹೆಚ್ಚು ಜನಪ್ರಿಯ ಶಾಪಿಂಗ್ ಸ್ಥಳ ಎನ್.ಆರ್. ಕಾಲೋನಿ. ಇಲ್ಲಿನ ಡಿವಿಜಿ ರಸ್ತೆಯುದ್ದಕ್ಕೂ ಬಟ್ಟೆ, ಶೂ ಮತ್ತು ಚಪ್ಪಲಿ, ಕ್ರಾಫೆrಡ್ ಆಕ್ಸೆಸರೀಸ್ (ಓಲೆ, ಬಳೆ, ಸರ) ನೈಲ್ ಪಾಲಿಶ್, ಮೇಕ್ ಅಪ್ ಕಿಟ್ ಮತ್ತು ಆಭರಣಗಳ ಅಂಗಡಿಗಳು ಕಾಣುತ್ತವೆ. ಇದೇ ರಸ್ತೆಯಲ್ಲಿ ಹಬ್ಬದ ದೀಪಾಲಂಕಾರ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಮಳಿಗೆಗಳಿದ್ದು ತಡ ರಾತ್ರಿವರೆಗೆ ವ್ಯಾಪಾರ ಜೋರಾಗಿರುತ್ತದೆ.
-ಲೋಕೇಶ್ ರಾಮ್