ಶ್ರೀನಗರ : ಉಗ್ರರು ಅಡಗಿಕೊಂಡಿರುವ ಖಚಿತ ಮಾಹಿತಿಯನ್ನು ಅನುಸರಿಸಿ ಭದ್ರತಾ ಪಡೆಗಳು ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ 9 ಗ್ರಾಮಗಳಲ್ಲಿ ಪ್ರಬಲ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿವೆ.
ಭದ್ರತಾ ಪಡೆಗಳಿಂದ ಸುತ್ತುವರಿಯುವಿಕೆ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿರುವ ಗ್ರಾಮಗಳೆಂದರೆ ಚಕೂರಾ, ಮಂತ್ರಿಬಗ್, ಝೈಪೋರಾ, ಪ್ರತಾಬ್‌ಪೋರಾ, ಟಾಕೀಪೋರ, ರಾಂಜ್‌ಪೋರ, ರತ್ನಿಪೋರಾ, ದಂಗಾಮ್ ಮತ್ತು ವಂಗಾಮ್ ಎಂದು ತಿಳಿದುಬಂದಿದೆ.
ಈ 9 ಗ್ರಾಮಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ; ಆದರೆ ಈಗಿನ್ನೂ ಉಗ್ರರೊಂದಿಗೆ ಸಂಪರ್ಕ ಸಾಧಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಕಾಶ್ಮೀರದಲ್ಲಿ, ಶೋಪಿಯಾನ್ ಜಿಲ್ಲೆಯ ಹೊರಗೆ, ಇನ್ನೂ ಐದು ಕಡೆಗಳಲ್ಲಿ ಭದ್ರತಾ ಪಡೆಗಳಿಂದ ಉಗ್ರ ಶೋಧ ಕಾರ್ಯಾಚರಣೆ ಸಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಇದೇ ವೇಳೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ನಿನ್ನೆ ಶುಕ್ರವಾರ, 2022ರ ಒಳಗೆ ಕಾಶ್ಮೀರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿರುವುದು ಗಮನಾರ್ಹವಾಗಿದೆ.