Advertisement

ಹೂವಿನ ಅಂಗಡಿಯ ಶಟರ್‌ ಮುರಿದು 9 ಲಕ್ಷ ರೂ.ನಗದು, ಸಿಸಿ ಕೆಮರಾ ಡಿವಿಆರ್‌ ಕಳವು

09:44 PM Nov 17, 2022 | Team Udayavani |

ಮಂಗಳೂರು: ನಗರದ ಕೆ.ಎಸ್‌. ರಾವ್‌ ರಸ್ತೆಯ ನಲಪಾಡ್‌ ಅಪ್ಸರಾ ಚೇಂಬರ್ಸ್‌ ಕಟ್ಟಡದ ನೆಲ ಮಹಡಿಯಲ್ಲಿರುವ ಹೂವಿನ ಅಂಗಡಿಯಿಂದ ಬುಧವಾರ ರಾತ್ರಿ 9 ಲಕ್ಷ ರೂ. ಕಳವಾಗಿದೆ.

Advertisement

ಕಂಕನಾಡಿ ನಿವಾಸಿ ಉಮರಬ್ಬ ಅವರಿಗೆ ಸೇರಿದ ಅಂಗಡಿಯಾಗಿದ್ದು, ಕಳೆದ 12 ವರ್ಷಗಳಿಂದ ಹೋಲ್‌ಸೇಲ್‌ ಹೂವಿನ ವ್ಯಾಪಾರ ಮಾಡಿಕೊಂಡಿದ್ದರು. ಅವರು ಪ್ರತಿನಿತ್ಯ ವ್ಯಾಪಾರದ ಹಣ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಬುಧವಾರ ಹೂವಿನ ರೈತರಿಗೆ ಕೊಡಬೇಕಾದ ಸುಮಾರು 9 ಲಕ್ಷ ರೂ. ಹಣವನ್ನು ಅಂಗಡಿಯ ಟೇಬಲ್‌ನ ಡ್ರಾವರ್‌ನಲ್ಲಿ ಇಟ್ಟು ಲಾಕ್‌ ಮಾಡಿ ಸಂಜೆ 6 ಗಂಟೆಗೆ ಆಂಗಡಿ ಮುಚ್ಚಿ ತೆರೆಳಿದ್ದರು.

ಗುರುವಾರ ಬೆಳಗ್ಗೆ 6 ಗಂಟೆಗೆ ಅವರ ಮಗ ರಿಯಾಜ್‌ ಅಂಗಡಿ ತೆರೆಯಲು ಬಂದಾಗ ಅಂಗಡಿಯ ಮುಖ್ಯ ದ್ವಾರದ ಶಟರ್‌ನ ಸೆಂಟರ್‌ ಲಾಕ್‌ ಮುುರಿದಿರುವುದು ಕಂಡುಬಂದಿತ್ತು. ತತ್‌ಕ್ಷಣ ಅವರು ಉಮರಬ್ಬ ಅವರಿಗೆ ಕರೆ ಮಾಡಿ ತಿಳಿಸಿದ್ದು, ಅವರು ಬಂದು ಅಂಗಡಿಯ ಶಟರ್‌ ಬಾಗಿಲನ್ನು ಮೇಲಕ್ಕೆತ್ತಿ ಒಳಗಡೆ ನೋಡಿದಾಗ ಟೇಬಲ್‌ನ ಡ್ರಾವರ್‌ ಲಾಕ್‌ ಮುರಿದು ಅದರಲ್ಲಿದ್ದ 9 ಲಕ್ಷ ರೂ. ಕಳವು ಮಾಡಿರುವುದು ಕಂಡುಬಂದಿದೆ.

ಮಾತ್ರವಲ್ಲದೆ ಅಂಗಡಿಯೊಳಗಡೆ ಅಳವಡಿಸಿದ್ದ ಸಿಸಿ ಕೆಮರಾ ಡಿವಿಆರ್‌ ಮತ್ತು ಮಾನಿಟರ್‌ ಇರಿಸಿದ ಬಾಕ್ಸ್‌ ಅನ್ನು ತೆರೆದು ಸುಮಾರು 10 ಸಾವಿರ ರೂ. ಮೌಲ್ಯದ ಡಿವಿಆರ್‌ ಅನ್ನೂ ತೆಗೆದುಕೊಂಡು ಹೋಗಿರುವುದು ಗಮನಕ್ಕೆ ಬಂದಿದೆ.

ಚಿತ್ರದುರ್ಗ, ತುಮಕೂರು ಕಡೆಗಳಿಂದ ಹೂವಿನ ರೈತರು ಬರುವವರಿದ್ದುದರಿಂದ ಸುಮಾರು 1 ತಿಂಗಳಿನಿಂದ ಅವರಿಗಾಗಿ ನಗದನ್ನು ಇಟ್ಟುಕೊಂಡು ಕಾಯುತ್ತಿದ್ದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next