Advertisement

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

10:46 PM Oct 05, 2022 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯದ ವಿಕ್ಟೋರಿಯಾದಲ್ಲಿ ನಡೆಯಲಿರುವ 2026ರ ಕಾಮನ್ವೆಲ್ತ್‌ ಗೇಮ್ಸ್‌ಗೆ ಶೂಟಿಂಗ್‌ ಸ್ಪರ್ಧೆ ಮರಳಿದೆ. ಇದು ಭಾರತ ಪಾಲಿಗೆ ಸಂತಸದ ಸುದ್ದಿ. ಇದರೊಂದಿಗೆ ನಿರಾಸೆಯ ಸುದ್ದಿಯೂ ಒಂದಿದೆ. ಭಾರತೀಯರ ಮತ್ತೆರಡು ನೆಚ್ಚಿನ ಸ್ಪರ್ಧೆಗಳಾದ ಕುಸ್ತಿ ಮತ್ತು ಬಿಲ್ಗಾರಿಕೆಯನ್ನು ಕೈಬಿಡಲಾಗಿದೆ!

Advertisement

ಕಾಮನ್ವೆಲ್ತ್‌ ಗೇಮ್ಸ್‌ ಫೆಡರೇಶನ್‌ ಮತ್ತು ಕಾಮನ್ವೆಲ್ತ್‌ ಗೇಮ್ಸ್‌ ಆಸ್ಟ್ರೇಲಿಯ ಸೇರಿಕೊಂಡು ಬುಧವಾರ ಕೂಟದ 20 ಸ್ಪರ್ಧೆಗಳ ಯಾದಿಯನ್ನು ಬಿಡುಗಡೆ ಮಾಡಿದವು. ಕಳೆದ ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ನಿಂದ ಬೇರ್ಪಟ್ಟಿದ್ದ ಶೂಟಿಂಗ್‌ ಸ್ಪರ್ಧೆಯನ್ನು ಇದು ಒಳಗೊಂಡಿತ್ತು. ಭಾರತ ಇದನ್ನು ಸ್ವಾಗತಿಸಿದೆ.

ಭಾರತದ ನೆಚ್ಚಿನ ಸ್ಪರ್ಧೆ
ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಅತ್ಯಧಿಕ ಪದಕಗಳನ್ನು ತಂದುಕೊಡುವ ಸ್ಪರ್ಧೆಯೆಂದರೆ ಶೂಟಿಂಗ್‌. ಈವರೆಗೆ 135 ಪದಕಗಳಿಗೆ ಭಾರತ ಗುರಿ ಇರಿಸಿದೆ (63 ಚಿನ್ನ, 44 ಬೆಳ್ಳಿ, 28 ಕಂಚು). ಗೋಲ್ಡ್‌ಕೋಸ್ಟ್‌ ಗೇಮ್ಸ್‌ನಲ್ಲಿ ಭಾರತ ಗೆದ್ದ ಒಟ್ಟು ಪದಕಗಳಲ್ಲಿ ಶೇ. 25ರಷ್ಟು ಪದಕ ಶೂಟಿಂಗ್‌ ಒಂದರಲ್ಲೇ ಬಂದಿತ್ತು. ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ನಿಂದ ಇದನ್ನು ಕೈಬಿಟ್ಟಾಗ ಭಾರತ ತೀವ್ರ ಪ್ರತಿರೋಧ ವ್ಯಕ್ತಪಡಿಸಿತ್ತು. ಕೂಟವನ್ನು ಬಹಿಷ್ಕರಿಸುವ ತನಕ ಪ್ರತಿಭಟನೆಯ ಕಾವು ಹೆಚ್ಚಿತ್ತು. ಇದೀಗ ಶೂಟಿಂಗ್‌ ಜತೆಗೆ ಪ್ಯಾರಾ ಶೂಟಿಂಗ್‌ಗೂ ಸ್ಥಾನ ಲಭಿಸಿದೆ.

ಕುಸ್ತಿಯಲ್ಲೂ ಭಾರತ ಹಿಂದುಳಿದಿಲ್ಲ. ಈ ತನಕ 114 ಪದಕ ಒಲಿದಿದೆ (49 ಚಿನ್ನ, 39 ಬೆಳ್ಳಿ, 26 ಕಂಚು). ಮೊನ್ನೆಯ ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ನಲ್ಲಿ 12 ಪದಕ ಜಯಿಸಿತ್ತು (6 ಚಿನ್ನ, 1 ಬೆಳ್ಳಿ, 5 ಕಂಚು). ಆದರೀಗ ವಿಕ್ಟೋರಿಯಾ ಗೇಮ್ಸ್‌ ನಲ್ಲಿ ಕುಸ್ತಿ ಕೈಬಿಟ್ಟಿರುವುದು ಭಾರತಕ್ಕೆ ನಷ್ಟವೇ ಸರಿ.

ಆರ್ಚರಿ ಸ್ಪರ್ಧೆಯನ್ನು ಈವರೆಗೆ 2 ಗೇಮ್ಸ್‌ಗಳಲ್ಲಷ್ಟೇ ಅಳವಡಿಸಲಾಗಿತ್ತು (1982 ಮತ್ತು 2010). ಪದಕ ಗಳಿಕೆಯಲ್ಲಿ ಭಾರತ ದ್ವಿತೀಯ ಸ್ಥಾನದಲ್ಲಿದೆ.

Advertisement

ಮೂರು ಹೊಸ ಕ್ರೀಡೆಗಳು
ವಿಕ್ಟೋರಿಯಾ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 3 ನೂತನ ಕ್ರೀಡೆಗಳನ್ನು ಅಳವಡಿಸಲಾಗಿದೆ. ಇವುಗಳೆಂದರೆ ಕೋಸ್ಟಲ್‌ ರೋವಿಂಗ್‌, ಗಾಲ್ಫ್ ಮತ್ತು ಬಿಎಂಎಕ್ಸ್‌ ರೇಸಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next