ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಜಯಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‍ಗೆ ಲಗ್ಗೆ ಇಟ್ಟ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾಕ್‍ನ ಮಾಜಿ ವೇಗದ ಬೌಲರ್ ಶೋಹೆಬ್ ಅಖ್ತರ್ ಹೊಗಳಿಕೆ ಸುರಿಮಳೆ ಸುರಿಸಿದ್ದಾರೆ. ಇದೇ ವೇಳೆ ಆಂಗ್ಲರ್ ತಂಡಕ್ಕೆ ತಮ್ಮ ಮೊನಚಾದ ಮಾತುಗಳಿಂದ ಚುಚ್ಚಿದ್ದಾರೆ.
ಅಹ್ಮದಾಬಾದ್ ನ ಮೊಟೆರಾದ ನರೇಂದ್ರ ಮೋದಿ ನಾಮಾಂಕಿತ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಪಡೆ ಗೆಲುವಿನ ಪಾರಮ್ಯ ಮೆರೆದಿತ್ತು. ನಾಲ್ಕು ಪಂದ್ಯಗಳ ಪೈಕಿ 3-1 ಜಯ ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಂಡು ಬೀಗಿತ್ತು.
ಮೊಟೆರಾದಲ್ಲಿ ನಡೆದ ಪಂದ್ಯಗಳಲ್ಲಿ ಭಾರತದ ಜಯದ ಯಾತ್ರೆ ಹಲವರ ಪರಾಮರ್ಶೆಗಳಿಗೆ ಎಡೆ ಮಾಡಿಕೊಟ್ಟಿತು. ಇಲ್ಲಿಯ ಪಿಚ್ ಬಗ್ಗೆ ಪರ-ವಿರೋಧದ ಚರ್ಚೆಗಳು ಕಾವು ಪಡೆದುಕೊಂಡವು. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್, ಮಿಮ್ಸ್ ಗಳು ಹರಿದಾಡಿದವು. ಕೆಲ ಅಂತಾರಾಷ್ಟ್ರೀಯ ಕ್ರಿಕೆಟಿಗರು ಕೂಡ ಮೋದಿ ಮೈದಾನದ ಪಿಚ್ ಬಗ್ಗೆ ತೆಗಳಿಕೆಯ ಮಾತುಗಳನ್ನಾಡಿದ್ದಾರೆ. ಇದೀಗ ಭಾರತದ ಪರ ಬ್ಯಾಟ್ ಮಾಡಿರುವ ಶೋಯೆಬ್ ಅಖ್ತರ್, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್ ಅವರಿಂದ ಸಾಧ್ಯವಾಗಿದ್ದು, ಇಂಗ್ಲೆಂಡ್ ಆಟಗಾರರಿಂದ ಯಾಕೆ ಆಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ತಮ್ಮ ಯುಟ್ಯೂಬ್ ಚಾನೆಲ್‍ನಲ್ಲಿ ಮಾತಾಡಿರುವ ಶೋಯೆಬ್ , ಇದು ಇಂಗ್ಲೆಂಡ್ ತಂಡಕ್ಕೆ ಅವಮಾನಕರ ಸೋಲು. ಇನ್ಮುಂದೆ ಅವರು ಪಿಚ್ ಬಗ್ಗೆ ಯೋಚಿಸದೆ ಚನ್ನಾಗಿ ಆಟವಾಡುವ ಬಗೆಯ ಬಗ್ಗೆ ಪರಾಮರ್ಶಿಸಿಕೊಳ್ಳುವ ಅಗತ್ಯ ಇದೆ ಎಂದಿದ್ದಾರೆ.
ಎಲ್ಲರೂ ಪಿಚ್ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ, ಅದೇ ಪಿಚ್ ನಲ್ಲಿ ಭಾರತ ತಂಡ 365 ರನ್ ಗಳಿಸಿತು. ಆದರೆ, ಇದು ಇಂಗ್ಲೆಂಡ್ ತಂಡದಿಂದ ಯಾಕೆ ಆಗಲಿಲ್ಲ ? ಭಾರತೀಯ ಬ್ಯಾಟ್ಸಮನ್‍ಗಳಾದ ರಿಷಭ್ ಪಂತ್ ಹಾಗೂ ವಾಷಿಂಗಷ್ಟನ್ ಸುಂದರ ಅದ್ಭುತ ಪ್ರದರ್ಶನ ತೋರಿದರು. ಇವರಿಂದ ಸಾಧ್ಯವಾಗಿದ್ದು, ಆಂಗ್ಲರ ಆಟಗಾರರಿಗೆ ಅಸಾಧ್ಯವಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಇಂಗ್ಲೆಂಡ್ ತಂಡ ಮುಜುಗರದ ಸೋಲನ್ನು ಹೇಗೆ ತೆಗೆದುಕೊಳ್ಳುತ್ತದೆಯೇ ಗೊತ್ತಿಲ್ಲ. ಆದರೆ, ಅವರು ಈ ಸೋಲಿನಿಂದ ಹೊರಬಂದು, ಸ್ವಸ್ಫೂರ್ತಿಯಿಂದ ಆಟವಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ ಅಖ್ತರ್.
ಇನ್ನು ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅಜೇಯ 96 ರನ್ ಗಳಿಸಿದ್ದರು. ಮತ್ತೋರ್ವ ಯುವ ಆಟಗಾರ ರಿಷಭ್ ಪಂತ್ ಭರ್ಜರಿ ಶತಕ ಬಾರಿಸುವ ಮೂಲಕ ಭಾರತ ತಂಡದ ಗೆಲುವಿನ ರೂವಾರಿಗಳಾಗಿದ್ದಾರೆ.