Advertisement

ಪ್ರೀತಿಸಿ ಓಡಿ ಹೋದ ಜೋಡಿ; ಯುವಕನ ತಾಯಿಯನ್ನು ಅರೆಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ

11:44 AM Dec 11, 2023 | Team Udayavani |

ಬೆಳಗಾವಿ: ತಾಲೂಕಿನ ವಂಚಮೂರಿ ಗ್ರಾಮದ ಯುವಕ-ಯುವತಿ ಪ್ರೀತಿಸಿ ಓಡಿ ಹೋಗಿದ್ದಕ್ಕೆ ರೊಚ್ಚಿಗೆದ್ದ ಯುವತಿ ಕಡೆಯವರು, ಯುವಕನ ತಾಯಿಯನ್ನು ಅರೆಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಸೋಮವಾರ(ಡಿ.11 ರಂದು) ಬೆಳಗಿನ ಜಾವ ನಡೆದಿದೆ.

Advertisement

ವಂಟಮೂರಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇಡೀ ಸರ್ಕಾರವೇ ಬೆಳಗಾವಿಯಲ್ಲಿ ಇರುವ ಸಂದರ್ಭದಲ್ಲಿ ಮಹಿಳೆ ಮೇಲೆ ಈ ರೀತಿಯಾಗಿ ಅಮಾನುಷ ಹಲ್ಲೆ ಆಗಿರುವುದು ಎಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Jammu Kashmir; ಆರ್ಟಿಕಲ್ 370 ರದ್ದತಿ ಕ್ರಮ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಯುವತಿಯ ನಿಶ್ಚಿತಾರ್ಥ ಸೋಮವಾರ ಡಿ. 11ರಂದು ನಿಗದಿ ಆಗಿತ್ತು. ಈಕೆಯನ್ನು ಇದೇ ಗ್ರಾಮದ ಯುವಕ ಪ್ರೀತಿಸುತ್ತಿದ್ದನು. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸೋಮವಾರ ಬೆಳಗಿನ ಜಾವ ಯುವಕ ತನ್ನ ಪ್ರೇಯಸಿಯನ್ನು ಓಡಿಸಿಕೊಂಡು ಹೋಗಿದ್ದಾನೆ. ಇದರಿಂದ ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ಯುವಕನ ತಾಯಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ನಂತರ ಮೆರವಣಿಗೆ ನಡೆಸಿ ಅಲ್ಲಿಯೇ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ.  ಮನೆಯನ್ನೂ ಸಂಪೂರ್ಣವಾಗಿ ಧ್ವಂಸಗೊಳಿಸಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಹಾನಿ ಮಾಡಿದ್ದಾರೆ. ಮನೆ ಬಾಗಿಲು, ಕಿಟಕಿ‌ ಮುರಿದಿದ್ದಾರೆ ಎಂದಿ ತಿಳಿದು ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಲ್ಲೆ ನಡೆಸಿದ ಏಳು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next