Advertisement

Shock; ನಾಪತ್ತೆ ಆಗಿದ್ದ ಗಂಡ ಹೆಣ್ಣಾಗಿ ಪತ್ತೆ! ; ಬಿಗ್ ಬಾಸ್ ಕಾರ್ಯಕ್ರಮ ನೀಡಿದ ಸುಳಿವು!

09:28 PM Jan 31, 2024 | Team Udayavani |

ರಾಮನಗರ : ನಾಪತ್ತೆ ಆಗಿದ್ದ ವಿವಾಹಿತ ವ್ಯಕ್ತಿಯೊಬ್ಬ ಹೆಣ್ಣಾಗಿ ಪತ್ತೆಯಾದ ವಿಚಿತ್ರ ಘಟನೆ ರಾಮನಗರ ಪಟ್ಟಣದಲ್ಲಿ ನಡೆದಿದ್ದು, ತನಿಖೆ ನಡೆಸಿದ ಪೊಲೀಸರೇ ಶಾಕ್ ಗೆ ಒಳಗಾಗಿದ್ದಾರೆ. ಗಂಡನನ್ನು ಹೆಣ್ಣಾಗಿ ಕಂಡ ಪತ್ನಿ ಮೂರ್ಛೆ ಹೋದ ಪ್ರಸಂಗ ನಡೆದಿದೆ.

Advertisement

ಚಿಕನ್ ಅಂಡಗಿಯಲ್ಲಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣರಾವ್ ಎಂಬವರು 2015 ರಲ್ಲಿ ಮದುವೆಯಾಗಿ ಪತ್ನಿಯೊಂದಿಗೆ ರಾಮನಗರ ಪಟ್ಟಣದಲ್ಲಿ ವಾಸವಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳೂ ಇದ್ದಾರೆ.

ಮದುವೆ ಆದ ಎರಡೇ ವರ್ಷಕ್ಕೆ 2017 ಮಾರ್ಚ್ ತಿಂಗಳಲ್ಲಿ ಗಂಡ ಲಕ್ಷ್ಮಣ್ ಮನೆಯಿಂದ ನಾಪತ್ತೆಯಾಗಿದ್ದು,ಸಾಲ‌ ಮಾಡಿಕೊಂಡ ವಿಚಾರಕ್ಕೆ ಜಿಗುಪ್ಸೆಗೊಂಡಿದ್ದ ಎನ್ನಲಾಗಿದೆ. ಸುಳಿವೇ ಸಿಗದ ಕಾರಣ ಪತ್ನಿ ಐಜೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಇಬ್ಬರು ಗಂಡು ಮಕ್ಕಳನ್ನು ಹೊತ್ತು ಊರು ಊರು ಸುತ್ತಿ ಪತ್ನಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಮನೆಗೆ ಮರಳದ ಹಿನ್ನಲೆಯಲ್ಲಿ ಮಕ್ಕಳಿಗಾಗಿಯಾದರೂ ಇನ್ನೊಂದು ಮದುವೆ ಆಗು ಎಂದು ಪತ್ನಿಯ ತಂದೆ ಸಲಹೆ ನೀಡಿದ್ದರು. ತಂದೆ ಮಾತನ್ನು ಧಿಕ್ಕರಿಸಿ ಗಂಡ ಲಕ್ಷ್ಮಣ್ ರಾವ್ ಗಾಗಿ ಪತ್ನಿ ಕಾಯುತ್ತಲೇ ಇದ್ದರು.

ಬರೊಬ್ಬರಿ ಆರು ವರ್ಷಗಳ ಬಳಿಕ ಲಕ್ಷ್ಮಣ್ ರಾವ್ ಸುಳಿವು ಪತ್ತೆಯಾಗಿದ್ದು ಒಂದು ರೋಚಕ ಕಥೆಯಾಗಿದೆ. ಕನ್ನಡದ ಜನಪ್ರಿಯ ಬಿಗ್ ಬಾಸ್ ಕಾರ್ಯಕ್ರಮ ಸುಳಿವು ಪತ್ತೆಗೆ ನೆರವಾಗಿದೆ.ಮೈಸೂರಿನಲ್ಲಿ ಬಿಗ್ ಬಾಸ್ ಸ್ಪರ್ಧಿ ನೀತೂ ಸ್ವಾಗತಕ್ಕೆ ತೆರಳಿದ್ದ ತೃತೀಯ ಲಿಂಗಿಗಳು ಸನ್ಮಾನ ಕಾರ್ಯಕ್ರಮ ಮಾಡಿದ್ದರು. ಈ ವೇಳೆ ತೃತೀಯ ಲಿಂಗಿ ರಷ್ಮಿಕ ಮಾಡಿದ್ದ ರೀಲ್ಸ್ ನಲ್ಲಿ ಲಕ್ಷ್ಮಣ್ ಹೆಣ್ಣಾಗಿ ಕಾಣಿಸಿಕೊಂಡಿದ್ದಾರೆ. ವೈರಲ್ ಆಗಿದ್ದ ರೀಲ್ಸ್ ನಲ್ಲಿ ಲಕ್ಷ್ಮಣ್ ಮುಖದ ಸ್ಪಷ್ಟ ಹೋಲಿಕೆ ಇತ್ತು.

Advertisement

ಮೊಬೈಲ್ ನಲ್ಲಿ ಪೊಲೀಸರು ರೀಲ್ಸ್ ವೀಕ್ಷಣೆ ವೇಳೆ ಲಕ್ಷ್ಮಣ್ ಮುಖ ಹೋಲಿಕೆಯಾಗಿದೆ. ಕುಟುಂಬಸ್ಥರಿಗೂ ಲಕ್ಷ್ಮಣ್ ಇರಬಹುದು ಎಂಬ ಅನುಮಾನ ಮೂಡಿದೆ. ತೃತೀಯ ಲಿಂಗಿಗಳ ಸಾಮಾಜಿಕ ಹೋರಾಟಗಾರ್ತಿ ರಷ್ಮಿಕ ಹೆಸರಿನ ರೀಲ್ಸ್ ಪ್ರೊಫೈಲ್ ಹಿಂಬಾಲಿಸಿದ ಐಜೂರು ಪೊಲೀಸರು ಲಕ್ಷ್ಮಣ್ ರಾವ್ ವಿಚಾರ ಪ್ರಸ್ತಾಪಿಸಿದ್ದಾರೆ.

ಹಿನ್ನೆಲೆ ಗೊತ್ತಿಲ್ಲವಾದರೂ ವಿಳಾಸ ಕೊಡುವುದಾಗಿ ರಷ್ಮಿಕ ಹೇಳಿದ್ದಾರೆ. ವಿಳಾಸ ಅನುಸರಿಸಿ ತೆರಳಿದ್ದ ಪೊಲೀಸರಿಗೆ ಶಾಕ್ ಎದುರಾಗಿದ್ದು,ಪೊಲೀಸರ ಬಳಿ ಇದ್ದ ಫೋಟೋ ಗೂ ಎದುರಿಗಿದ್ದ ಹೆಣ್ಣಿಗೂ ಅಜಾಗಜ ವ್ಯತ್ಯಾಸವಿತ್ತು. ಮುಖ ಮಾತ್ರ ಪೂರ್ಣ ಹೋಲಿಕೆಯಾಗುತ್ತಿತ್ತು.

ಪೊಲೀಸರು ನೀವು ಲಕ್ಷ್ಮಣ್ ಅಲ್ಲವೇ ಎಂದು ಕೇಳಿದಾಗ, ನಾನು ಲಕ್ಷ್ಮಣ್ ರಾವ್ ಅಲ್ಲ, ನಾನು ವಿಜಯಲಕ್ಷ್ಮೀ ಎಂದು ಉತ್ತರಿಸಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ತಾನು ವಿಜಯಲಕ್ಷ್ಮೀ ಎಂದು ಲಕ್ಷ್ಮಣ್ ಪಟ್ಟು ಹಿಡಿದಿದ್ದು, ಪೊಲೀಸರೂ ಒಂದು ಹಂತದಲ್ಲಿ ಬೇರೆಯೇ ಅಭಿಪ್ರಾಯಕ್ಕೆ ಬಂದಿದ್ದಾರೆ.

ಲಕ್ಷ್ಮಣ್ ನಿಮ್ಮ ಹಾಗೆಯೇ ಕಾಣಿಸಿದ ಕಾರಣ ವಿಚಾರಿಸಲು ಬಂದೆವು. ನೀವು ವಾಪಾಸ್ ಹೋಗಿ ಎಂದು ಪೊಲೀಸರು ಜೀಪ್ ಹತ್ತಿದ್ದಾರೆ. ವಾಪಾಸ್ ಹೋಗೊ ವೇಳೆ, ಜೋರಾಗಿ ಲಕ್ಷ್ಮಣ್ ಎಂದು ಇನ್ಸ್ ಪೆಕ್ಟರ್ ಕೂಗಿದ್ದಾರೆ. ಕೂಡಲೇ ಹಾಂ… ಎಂಬ ಪ್ರತ್ಯುತ್ತರ ವಿಜಯಲಕ್ಷ್ಮೀ ಬಾಯಿಯಿಂದ ಬಂದಿದೆ!.

ಪೊಲೀಸರಿಗೆ ಎಲ್ಲವೂ ಖಾತ್ರಿಯಾಗಿ ಐಜೂರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. 2017 ರಲ್ಲಿ ರಾಮನಗರ ಬಿಟ್ಟು ಹೋಗಿದ್ದ ಲಕ್ಷ್ಮಣ್  ವಾಪಾಸ್ ಬಂದಿದ್ದು,ಲಿಂಗ ಪರಿವರ್ತನೆಯಾಗಿದೆ.

ಕುಟುಂಬಸ್ಥರನ್ನೂ ಪೊಲೀಸರು ಠಾಣೆಗೆ ಕರೆದಿದ್ದು, ಗಂಡ ಹೆಣ್ಣಾಗಿ ಪರಿವರ್ತನೆ ಆಗಿದ್ದನ್ನು ಕಂಡು ಪತ್ನಿ ಮೂರ್ಛೆ ಹೋಗಿದ್ದಾರೆ.ತಂದೆಯ ಅವತಾರ ಕಂಡ ಪುಟ್ಟ ಮಕ್ಕಳು ಏನು ನಡೆಯುತ್ತಿದೆ ಎನ್ನುವುದನ್ನು ತಿಳಿಯದಾಗಿದ್ದಾರೆ. ಅಳಿಯನ ಅವತಾರ ಕಂಡು ಮಾವ ಪೇಚಾಡಿ ಮಗಳ ಬಾಳು ಹಾಳಾಯಿತು ಎಂದು ಕಣ್ಣೀರಿಟ್ಟಿದ್ದಾರೆ.

‘ನಿನಗೆ ಹೆಂಡತಿ ಮಕ್ಕಳು ಬೇಡವೇ’ ಎಂದು ಪ್ರಶ್ನಿಸಿದಾಗ, ‘ನನಗೆ ನನ್ನ ತೃತೀಯ ಲಿಂಗಿಗಳ ಕುಟುಂಬವೇ ಇಷ್ಟ. ಹೆಂಡತಿ ಮಕ್ಕಳು ಬೇಡ,ನಿಮ್ಮ ತಂಟಗೆ ಬರುವುದಿಲ್ಲ. ನನ್ನನ್ನು ಬಿಟ್ಟು ಬಿಡಿ’ ಎಂದು ಬೇಡಿಕೊಂಡಿದ್ದಾನೆ. ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ನಾಪತ್ತೆ ಪ್ರಕರಣ ಇತ್ಯರ್ಥ ಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next