Advertisement

ಭೂತಾನ್‌ನಿಂದ ಅಡಿಕೆ ಆಮದು ಆತಂಕ ಬೇಡ: ಸಚಿವೆ ಶೋಭಾ ಕರಂದ್ಲಾಜೆ

04:50 PM Oct 01, 2022 | Team Udayavani |

ಕಾರ್ಕಳ: ನೆರೆಯ ಭೂತಾನ್‌ ರಾಷ್ಟ್ರದಿಂದ ಅಡಿಕೆ ಆಮದು ಮಾಡುವ ನಿರ್ಧಾರದಿಂದ ದೇಶದ ಅಡಿಕೆಗೆ ಮಾರುಕಟ್ಟೆಗೆ ಯಾವುದೇ ತೊಂದರೆ ಆಗದು. ಅಡಿಕೆ ಬೆಳೆಗಾರರು ಆತಂಕ ಪಡಬೇಕಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಕಾರ್ಕಳದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಆ ದೇಶದ ಪ್ರಧಾನಿಗಳು ತಮ್ಮ ದೇಶ ಆರ್ಥಿಕ ಸಂಕಷ್ಟದಲ್ಲಿದೆ ಎಂದು ನಮ್ಮ ಪ್ರಧಾನಿಗಳ ಬಳಿ ನೆರವು ಬಯಸಿದ್ದರು. ಆ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಭಾರತವು ಅಲ್ಲಿನ ಪರಿಸ್ಥಿತಿ ಅರಿತು 17 ಸಾವಿರ ಟನ್‌ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

ನಮ್ಮ ದೇಶದ ಮಟ್ಟಿಗೆ ಅದು ಅತ್ಯಂತ ಸಣ್ಣ ಪ್ರಮಾಣವಾಗಿದ್ದು, ಏನೂ ಸಮಸ್ಯೆಯಾಗದು.ಸರಕಾರ ಅಡಿಕೆಗೆ ಹೆಚ್ಚು ತೆರಿಗೆ ಹಾಕಿದ್ದರಿಂದ ಅಡಿಕೆಗೆ ಮಾರುಕಟ್ಟೆಯಲ್ಲಿ ದರ ಹೆಚ್ಚಿದೆ.

ಕಾಂಗ್ರೆಸ್‌ ಕಾಲದಲ್ಲಿ ಆದ ಕೆಲವು ಒಪ್ಪಂದಗಳಿಂದಲೂ ಅಡಿಕೆಗೆ ಹೊಡೆತ ಬೀಳುತ್ತಲೇ ಬಂದಿತ್ತು ಎಂದ ಅವರು, ಶಸ್ತ್ರಾಸ್ತ್ರ, ರಸಗೊಬ್ಬರ ಮತ್ತು ಖಾದ್ಯ ತೈಲ ಸ್ವಾವಲಂಬನೆಯಲ್ಲಿ ಕೇಂದ್ರ ಸರಕಾರ ದಿಟ್ಟ ಹೆಜ್ಜೆಯಿಟ್ಟಿದ್ದು, ಅವುಗಳ ಉತ್ಪಾದನೆಗೆ ಒತ್ತು ನೀಡಿದೆ ಎಂದರು.

ಕಾಂಗ್ರೆಸ್ಸಿನದ್ದು ಭಾರತ್‌
ತೋಡೋ ಯಾತ್ರೆ
ಭಾರತ್‌ ಜೋಡೋ ಯಾತ್ರೆಯ ನೇತಾರ ಕೇರಳದಲ್ಲಿ ಪಾಕಿಸ್ಥಾನ್‌ ಜಿಂದಾಬಾದ್‌ ಘೋಷಣೆ ಕೂಗಿದ ವ್ಯಕ್ತಿಯ ಜತೆ ಪಾದಯಾತ್ರೆ ಮಾಡಿದ್ದಾರೆ. ಅವರದು ಜೋಡೋ ಯಾತ್ರೆಯಲ್ಲ; ತೋಡೋ ಯಾತ್ರೆ ಎಂದು ಸಚಿವೆ ಲೇವಡಿ ಮಾಡಿದರು. ರಾಹುಲ್‌ ಗಾಂಧಿ ಭಾರತದಲ್ಲಿ ಯಾತ್ರೆ ಮಾಡಬೇಕಾದ್ದಲ್ಲ. ಅವರು ಮಾಡಬೇಕಾದ್ದು ಭಾರತವನ್ನು ಇಬ್ಭಾಗ ಮಾಡಿದ ಪಾಕ್‌ ಆಕ್ರಮಿತ ಸ್ಥಳಗಳಲ್ಲಿ. ಭಾರತದ ಜಾಗವನ್ನು ಎಲ್ಲೆಲ್ಲಿ ಬಿಟ್ಟುಕೊಟ್ಟಿದ್ದೀರೊ ಅಲ್ಲಿ ಯಾತ್ರೆ ಮೂಲಕ ಜೋಡಿಸಿ ಎಂದು ಹೇಳಿದರು.

Advertisement

ಎಸ್‌ಡಿಪಿಐ ನಿಷೇಧಕ್ಕೂ
ಹಿಂದೇಟು ಹಾಕೆವು
ಎಸ್‌ಡಿಪಿಐ ನಿಷೇಧದ ಪ್ರಶ್ನೆಗೆ ಎಸ್‌ಡಿಪಿಐ ಒಂದು ಪಕ್ಷವಾಗಿದ್ದು, ಇದರ ಮೇಲೆ ಕ್ರಮ ಕೈಗೊಳ್ಳಲು ಚುನಾವಣ ಆಯೋಗ ಮುಂದಾಗಬೇಕು. ಈ ಪಕ್ಷದಲ್ಲಿ ದೇಶದ್ರೋಹಿ ಚಟುವಟಿಕೆಗಳು ನಡೆಯುತ್ತಿರುವುದು ಸಾಬೀತಾದರೆ ಅದರ ವಿರುದ್ಧವೂ ಸೂಕ್ತ ನಿರ್ಧಾರಕ್ಕೆ ಕೇಂದ್ರ ಸರಕಾರ ಬರಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಬಿಜೆಪಿ ಹಿರಿಯ ಮುಖಂಡ ಎಂ.ಕೆ. ವಿಜಯ ಕುಮಾರ್‌, ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪ್ರ. ಕಾರ್ಯದರ್ಶಿಗಳಾದ ನವೀನ್‌ ನಾಯಕ್‌, ಬೋಳ ಜಯರಾಮ ಸಾಲ್ಯಾನ್‌, ಜಿಲ್ಲಾ ಪದಾಧಿಕಾರಿಗಳಾದ ರೇಶ್ಮಾ ಶೆಟ್ಟಿ, ರವೀಂದ್ರ ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next