ಬೆಳಗಾವಿ: ಗೋರಕ್ಷಕ ಶಿವು ಉಪ್ಪಾರ ಹಿರೇಬಾಗೇವಾಡಿ ಗ್ರಾಮದ ಎಪಿಎಂಸಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಶ್ರೀರಾಮಸೇನಾ ಹಿಂದೂಸ್ಥಾನ ಸಂಘಟನೆಯ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಶಿವು ಉಪ್ಪಾರ ಕೊಲೆಯಾಗಿದೆ. ಅವರ ಕುಟುಂಬ ಬಡತನದಲ್ಲಿದೆ. ಮಗನ ಸಾವಿನಿಂದ ತಂದೆ ತಾಯಿ ನೊಂದಿದ್ದಾರೆ. ಅವರ ಮೇಲೆ ಯಾರೋ ಪ್ರಭಾವಿಗಳ ಒತ್ತಡವಿದೆ ಎಂದು ಮೇಲ್ನೊಟಕ್ಕೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಶಿವು ಉಪ್ಪಾರನ ಮೊಬೈಲ್ ಕರೆಗಳ ತನಿಖೆ ಮಾಡಬೇಕು. ಫೇಸ್‌ಬುಕ್‌ನಲ್ಲಿ ಅವನು ಉಲ್ಲೇಖೀಸಿರುವ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಾವು ಸಂಭವಿಸಿ ವಾರದ ಮೇಲಾಗಿದ್ದರೂ ಇದುವರೆಗೆ ತನಿಖೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಈ ಕೊಲೆಯನ್ನು ಮುಚ್ಚಿಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಗೋ ಹತ್ಯೆಯನ್ನು ಯಾರು ಮಾಡುತ್ತಿದ್ದಾರೆ ಎಂದು ಶಿವು ಉಪ್ಪಾರ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ ಪೊಲೀಸರು ಈ ಆರೋಪಿಯನ್ನು ಯಾವ ಕಾರಣಕ್ಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡ ರಮಾಕಾಂತ ಕೊಂಡುಸ್ಕರ್, ರಾಜು ಜಾಧವ, ಭರತ ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.
Advertisement
ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕಾರ್ಯಕರ್ತರು ಶಿವು ಉಪ್ಪಾರ ಆತ್ಮಹತ್ಯೆ ಮಾಡಿಕೊಳ್ಳುವಂಥ ಹೇಡಿಯಾಗಿರಲಿಲ್ಲ. ಆದರೆ ಆತನ ಸಾವು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ತನ್ನ ಮನೆಯನ್ನು ಬಿಟ್ಟು ಎಪಿಎಂಸಿ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವಾರು ಸಂಶಯ ಹುಟ್ಟುಹಾಕಿದೆ. ಕಾರಣ ಇದರ ಬಗ್ಗೆ ತನಿಖೆ ನಡೆಸುವದು ಅಗತ್ಯ ಎಂದರು.
ಶಿವು ಉಪ್ಪಾರ ಸಾವಿನ ಪ್ರಕರಣ: ನಿಷ್ಪಕ್ಷ ತನಿಖೆಗೆ ಹಿಂದೂ ಸಂಘಟನೆ ಆಗ್ರಹ
ಬೈಲಹೊಂಗಲ: ಗೋರಕ್ಷಕ ಶಿವು ಉಪ್ಪಾರ ಸಾವಿನ ಪ್ರಕರಣ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳ ಮುಖಂಡರು ಬೈಲಹೊಂಗಲ ಉಪವಿಭಾಗಾಧಿಕಾರಿ ಮೂಲಕ ಸರಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಪಟ್ಟಣದ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ನಾವಲಗಟ್ಟಿ ಗ್ರಾಮದ ಹಿಂದೂ ಸಮಾಜದ ಮುಖಂಡರು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದೇ ವೇಳೆ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಹೂಮಾಲೆ ಹಾಕಿ ಗೌರವ ವಂದನೆ ಸಲ್ಲಿಸಲಾಯಿತು. ನಂತರ ಮಾತನಾಡಿದ ಅವರು, ಗೋರಕ್ಷಕ ಯುವಕ ಶಿವಕುಮಾರ ಉಪ್ಪಾರ ಸಾವಿನ ಪ್ರಕರಣ ಒಂದು ವೇಳೆ ಕೊಲೆ ಎಂದು ಸಾಬೀತು ಆದರೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಗಹಿಸಿದರು. ಪ್ರತಿಭಟನೆಯಲ್ಲಿ ಮಹಾಂತೇಶ ಹೊಸೂರ, ಅಶೋಕ ಸವದತ್ತಿ, ವಿವೇಕಾನಂದ ಪೂಜಾರ, ಬಸವರಾಜ ಈಟಿ, ಸಂತೋಷ ಮಾದಿಗರ, ಬಸನಾಯ್ಕ ಮರೇದ, ಮಲ್ಲಿಕಾರ್ಜುನ ಏಣಗಿಮಠ, ಕುಮಾರ ಹೂಗಾರ, ಧರ್ಮರಾಜ ಮಾದಿಗರ, ರಾಜು ನಾವಲಗಟ್ಟಿ, ರೋಸನ್ ಆರೇರ ಸೇರಿದಂತೆ ಅನೇಕ ಹಿಂದೂ ಯುವಕರು ಭಾಗವಹಿಸಿದ್ದರು.
ಶಿವು ಉಪ್ಪಾರ ಕುಟುಂಬಕ್ಕೆ ನ್ಯಾಯ ಒದಗಿಸಲು ಮನವಿ:
ಗೋರಕ್ಷಕ ಶಿವು ಉಪ್ಪಾರ ಸಾವಿನ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ನೊಂದ ಕುಟುಂಬಸ್ಥರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಶ್ರೀರಾಮಸೇನಾ ಪದಾಧಿಕಾರಿಗಳು ಪ್ರತಿಬಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಗೋರಕ್ಷಕ ಶಿವು ಉಪ್ಪಾರ ಹಿರೇಬಾಗೇವಾಡಿ ಗ್ರಾಮದ ಎಪಿಎಂಸಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದನ್ನು ಪೊಲೀಸರು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿರುವದು ಹಲವು ಅನುಮಾನಕ್ಕೆ ಏಡೆಮಾಡಿಕೊಟ್ಟಿದೆ. ಇದೊಂದು ವ್ಯವಸ್ಥಿ§ತವಾಗಿ ನಡೆಸಿದ ಕೊಲೆ ಎಂಬುವದು ಮೆಲ್ನೋಟಕ್ಕೆ ಕಾಣುತ್ತಿದೆ. ಅದನ್ನು ಮುಚ್ಚಿ ಹಾಕಲು ಪೊಲೀಸ್‌ರು ಪ್ರಯತ್ನಿಸುತ್ತಿದ್ದಾರೆ. ಶೀಘ್ರವೇ ಈ ಪ್ರಕರಣ ತನಿಖೆಯಾಗಬೇಕು. ಬಡತನದಲ್ಲಿರುವ ಉಪ್ಪಾರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಧನ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಭೀಮಶಿ ಗೋರಖನಾಥ, ಸಂತೋಷ ಸುಣಗಾರ, ಚೇತನ ಪವಾರ, ಶಿವಾಜಿ ಘಾಟಗೆ, ಬಸವರಾಜ ನಾಯಿಕ, ಸುಭಾಸ ಹಾವಣ್ಣವರ, ರಾಜು ಉಪ್ಪಾರ, ಗಜಾನನ ಕಾಗಿನಕರ ಇತರರು ಇದ್ದರು.