ಕೊಪ್ಪಳ: 52ರ ಹರೆಯದ ಭೋವಿ ಸಮುದಾಯದ ಪ್ರಭಾವಿ ನಾಯಕ ಶಿವರಾಜ ತಂಗಡಗಿ ಅವರು ಇಲಕಲ್‌ನಿಂದ ರಾಜಕೀಯ ಭವಿಷ್ಯ ಕಂಡುಕೊಂಡು ನಂತರ ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರಕ್ಕೆ ವಲಸೆ ಬಂದು ಮೂರು ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಹಿಡಿತ ಇಟ್ಟುಕೊಂಡಿದ್ದಾರೆ.
ಎಸ್‌ಸಿ ಮೀಸಲು ಕ್ಷೇತ್ರ ಕನಕಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ತಂಗಡಗಿ ಅವರು 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಆಗ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರಕ್ಕೆ ಇವರು ಆಧಾರ ಸ್ತಂಭವಾಗಿ ಮೊದಲ ಬಾರಿಗೆ ಸಚಿವರಾಗಿ ಸಕ್ಕರೆ ಖಾತೆ ನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದರು. ಆದರೆ ನಂತರದಲ್ಲಿನ ರಾಜಕೀಯ ವಿದ್ಯಮಾನಗಳಿಂದ ಶಾಸಕತ್ವದಿಂದ ಅನರ್ಹತೆಯಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನಂತರ 2013ರಲ್ಲಿ ಕಾಂಗ್ರೆಸ್ ಪಾಳೆಯ ಸೇರಿದ ಇವರು ಮತ್ತೆ ಗೆದ್ದು ಅಂದು ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಭೋವಿ ಸಮುದಾಯದ ಕೋಟಾದಡಿ ಮತ್ತೆ ಸಣ್ಣ ನೀರಾವರಿ ಇಲಾಖೆ ಸಚಿವರಾಗಿ ಕಾರ್ಯಭಾರ ಮಾಡಿ ಎಲ್ಲರ ಗಮನ ಸೆಳೆದಿದ್ದರು.
2018 ರಲ್ಲಿ ಸೋತ ತಂಗಡಗಿ ಅವರು ಕ್ಷೇತ್ರದಲ್ಲಿ ಐದು ವರ್ಷಗಳ ಕಾಲ ಪಕ್ಷದ ಸಂಘಟನೆ ಮಾಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಹೊಣೆ ಹೊತ್ತು ಸಂಘಟನಾತ್ಮಕ ಕೆಲಸ ಮಾಡಿದ್ದಾರೆ.
2023ರಲ್ಲಿ 42 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಇವರು ಮತ್ತೆ ಈಗ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಮಾಜಿಕ ನ್ಯಾಯದ ಭೋವಿ ಕೋಟಾದಡಿ ಸಚಿವರಾಗಿದ್ದಾರೆ. ಗೆದ್ದ ಮೂರೂ ಬಾರಿಯೂ ಮಂತ್ರಿಯಾಗುವ ಯೋಗ ಪಡೆದಿದ್ದಾರೆ. ಕನಕಗಿರಿ ಕ್ಷೇತ್ರದ ನೆಲದ ಗುಣಧರ್ಮದಂತೆ ಕ್ಷೇತ್ರದಿಂದ ಹೆಚ್ಚು ಬಾರಿ ಸಚಿವರಾದ ಕೀರ್ತಿ ಇವರಿಗೆ ಸಲ್ಲುತ್ತದೆ. ಬಿಎಸ್‌ಸಿ ಪದವೀಧರರಾದ ಇವರು ಅನ್ಯ ಜಿಲ್ಲೆಯಿಂದ ವಲಸೆ ಬಂದರೂ ಕನಕಗಿರಿಯಲ್ಲೇ ನೆಲೆ ರಾಜಕೀಯ ಕಂಡುಕೊಂಡು ಭೋವಿ ಸಮಾಜದಲ್ಲಿಯೇ ರಾಜ್ಯ ನಾಯಕರಾಗಿ ಹೊರ ಹೊಮ್ಮಿದ್ದಾರೆ.