Advertisement

ಶಿವ ಮೆಚ್ಚಿದ ಪರಸಂಗ

10:52 AM Jun 11, 2018 | |

ಸೆಂಟಿಮೆಂಟ್‌ ಸಾಂಗ್‌ ಅಂದಾಕ್ಷಣ, ವಿಶೇಷ ಧ್ವನಿಗೆ ಹುಡುಕಾಟ ನಡೆಸೋದು ಸಹಜ. ವಿಶೇಷ ಧ್ವನಿ ಅನ್ನುತ್ತಿದ್ದಂತೆ ತಕ್ಷಣ ನೆನಪಾಗೋದು ನಿರ್ದೇಶಕ ಜೋಗಿ ಪ್ರೇಮ್‌. ಸೆಂಟಿಮೆಂಟ್‌ ಸಾಂಗ್‌ ಅಂದಾಗ, ಪ್ರೇಮ್‌ ನೆನಪಾಗದೇ ಇರರು. ಅದರಲ್ಲೂ ತಾಯಿ ಸೆಂಟಿಮೆಂಟ್‌ ಹಾಡು ಅಂದಮೇಲೆ, ಜೋಗಿ ಪ್ರೇಮ್‌ ಅವರ ಧ್ವನಿ ಇದ್ದರೇನೆ ಚೆಂದ ಅನ್ನುವಷ್ಟರ ಮಟ್ಟಿಗೆ ನಿರ್ದೇಶಕರು ಪ್ರೇಮ್‌ ಧ್ವನಿ ಬಯಸುತ್ತಾರೆ.

Advertisement

ಅವರ ಧ್ವನಿ ಬಯಸಿ ಹೋದ ಚಿತ್ರತಂಡಕ್ಕೊಂದು ಹಾಡು ಹಾಡುವ ಮೂಲಕ ಅವರ ಆಸೆ ಈಡೇರಿಸಿದ್ದಲ್ಲದೆ, ಪ್ರೇಮ್‌ ಹಾಡಿದ ಹಾಡು ಕೇಳಿ ಮೆಚ್ಚಿಕೊಂಡ ಶಿವರಾಜಕುಮಾರ್‌, ಆ ಹಾಡನ್ನು ವಿಶೇಷವಾಗಿ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಂದಹಾಗೆ, ಅದು “ಪರಸಂಗ’ ಚಿತ್ರದ ಹಾಡು. ಹಾಡು ಚೆನ್ನಾಗಿದೆ ಎಂಬುದು ಒಂದಾದರೆ, ಆ ಹಾಡು ಹುಟ್ಟಿಕೊಂಡ ಹಿನ್ನಲೆಗೂ ಅಷ್ಟೇ ಅರ್ಥವಿದೆ.

ಹೌದು, ಆ ಹಾಡಿನ ಬಗ್ಗೆ ವಿವರಿಸುವ ನಿರ್ದೇಶಕ ರಘು, “ಮಾನಸ ಗಂಗೋತ್ರಿಯ ಪ್ರೊಫೆಸರ್‌ ಕೆ.ಲೋಲಾಕ್ಷಿ ಅವರು ಬರೆದ “ಮರಳಿ ಬಾರದೂರಿಗೆ ನಿನ್ನ ಪಯಣ, ಹೇಳಲಾಗದ ಮಾತಿನಲಿ, ಕೇಳಲಾಗದ ಧ್ವನಿಯಲ್ಲಿ, ನೋಡಲಾಗದ ಕಣ್ಣಿನಲಿ, ಕಾಣಲಾಗದ ಜಾಗದಲಿ ಬಚ್ಚಿಟ್ಟುಬಿಟ್ಟಿತ್ತಲ್ಲೋ ಕಂದಾ, ವಿಧಿಯಲೋ ನಿನ್ನಾ…’ ಎಂಬ ಹಾಡನ್ನು ಬಳಸಿಕೊಳ್ಳಲಾಗಿದೆ.

ಇಷ್ಟಕ್ಕೂ ಈ ಹಾಡು ಬಳಸಿಕೊಳ್ಳೋಕೆ ಕಾರಣ, “ತರಲೆ ವಿಲೇಜ್‌’ ಚಿತ್ರೀಕರಣ ಸಮಯದಲ್ಲಿ ಈ ಹಾಡು ಕೇಳಿದ್ದೆ. ಆಗ ಭಾವಗೀತೆ ರೂಪದಲ್ಲಿದ್ದ ಹಾಡು ತುಂಬಾ ಕಾಡಿತ್ತು. “ಪರಸಂಗ’ ಚಿತ್ರದಲ್ಲಿ ಒಂದು ಸಂದರ್ಭವಿದೆ. ಆ ಸಂದರ್ಭಕ್ಕೆ ಅದೇ ರೀತಿಯ ಹಾಡು ಬೇಕಿತ್ತು. ಕೊನೆಗೆ ಕವಿರಾಜ್‌ ಅವರಿಂದ “ಎಲ್ಲಿಗೆ ಪಯಣ…’ ಹಾಡು ಬರೆಸಿ, ಅದಕ್ಕೆ ರಾಗ ಸಂಯೋಜನೆಯನ್ನೂ ಮಾಡಿಸಿದ್ದಾಗಿತ್ತು.

ಆದರೂ, ಇನ್ನೇನೋ ಬೇಕೆನಿಸಿದ್ದರಿಂದ ಎರಡು ವರ್ಷ ಬಳಿಕ ಪುನಃ ಲೋಲಾಕ್ಷಿ ಅವರು ಬರೆದ ಹಾಡನ್ನು ಕೇಳಿದಾಗ, ಇದೇ ನನ್ನ ಚಿತ್ರದ ಸಂದರ್ಭಕ್ಕೆ ಸರಿಹೊಂದುತ್ತೆ ಅಂತ ಆ ಹಾಡನ್ನು ಬಳಸಿಕೊಳ್ಳಲಾಗಿದೆ. ಅದಕ್ಕೂ ಮುನ್ನ ಹಾಡು ಬರೆದ ಪ್ರೊಫೆಸರ್‌ ಲೋಲಾಕ್ಷಿ ಅವರ ಬಳಿ ಹೋಗಿ ಅವರಿಂದ ಹಕ್ಕು ಪಡೆದು, ಹಾಡು ಹುಟ್ಟಿದ ಸಮಯ ಬಗ್ಗೆ ತಿಳಿದುಕೊಂಡಾಗ ನಿಜಕ್ಕೂ ಬೇಸರವಾಯಿತು. ಪ್ರೊಫೆಸರ್‌ ಲೋಲಾಕ್ಷಿ ಅವರ ಅಕ್ಕನ ಮಗಳೊಬ್ಬಳು ಸಾವನ್ನಪ್ಪಿದಾಗ, ಹುಟ್ಟಿಕೊಂಡ ಹಾಡು ಅದು.

Advertisement

ಬಹಳಷ್ಟು ಮೆಚ್ಚಿಕೊಂಡಿದ್ದ ತನ್ನ ಅಕ್ಕನ ಮಗಳ ಸಾವಿನ ಕುರಿತು ಬರೆದ ಸಾಲುಗಳು ಭಾವಗೀತೆ ರೂಪದಲ್ಲಿ ಹೊರಬಂದಿದ್ದವು. ಅದನ್ನು ತಿಳಿದಾಗ, ನೈಜವಾಗಿ ಹುಟ್ಟಿಕೊಂಡ ಹಾಡು ನೈಜತೆಯ ಕಥೆಗೆ ಬಳಕೆ ಆಗುತ್ತಿದೆ ಅಂತ ಖುಷಿಯಾಯಿತು. ಈ ಹಾಡಿಗೆ ಮೊದಲು ಫ‌ಯಾಜ್‌ಖಾನ್‌ ಧ್ವನಿ ಇತ್ತು. ಅಷ್ಟೇ ಅಲ್ಲ, ಈ ಹಾಡಿಗೆ ಕೀಮ ಅವಾರ್ಡ್‌ ಕೂಡ ಬಂದಿದೆ.

ಈ ಹಾಡನ್ನು ಚಿತ್ರದಲ್ಲಿ ಬಳಸಬೇಕು, ಪ್ರೇಮ್‌ ಧ್ವನಿ ಇರಬೇಕು ಅಂತ ನಿರ್ಧರಿಸಿ, ಪ್ರೇಮ್‌ ಅವರ ಬಳಿ ಹೋದಾಗ, ಮೊದಲು ಅವರು ನಾನು ಹಾಡುವುದನ್ನ ನಿಲ್ಲಿಸಿದ್ದೇನೆ ಅಂದರು. ಕೊನೆಗೆ ಹಾಡು ಹುಟ್ಟಿದ ಬಗ್ಗೆ ವಿವರಿಸಿ, ಸಾಲುಗಳನ್ನು ಕೇಳಿಸಿದಾಗ, ಇಷ್ಟಪಟ್ಟು, ಸಿನಿಮಾಗಾಗಿ ಹೊಸ ರಾಗ ಸಂಯೋಜನೆ ಮಾಡಿಸಿ ಹಾಡಿದ್ದಾರೆ. ಹಾಡು ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ. ಶಿವರಾಜಕುಮಾರ್‌ ಕೂಡ ಕೇಳಿ ಪ್ರೇಮ್‌ ವಾಯ್ಸ ಮೆಚ್ಚಿದ್ದಾರೆ.

“ಪರಸಂಗ’ ಬಿಡುಗಡೆಗೆ ಸಿದ್ಧವಾಗಿದ್ದು, ಜುಲೈನಲ್ಲಿ ಬರುವ ಸಾಧ್ಯತೆ ಇದೆ. ಚಿತ್ರದಲ್ಲಿ ಮಿತ್ರ, ಮನೋಜ್‌ ಪುತ್ತೂರ್‌, ಅಕ್ಷತಾ, “ಮಜಾಭಾರತ’ ಖ್ಯಾತಿಯ ಚಂದ್ರಪ್ರಭ, ಗೋವಿಂದೇಗೌಡ ಇತರರು ನಟಿಸಿದ್ದಾರೆ. ಎಚ್‌.ಕುಮಾರ್‌, ಕೆ.ಎಂ.ಲೋಕೇಶ್‌, ಮಹದೇವೇಗೌಡ ನಿರ್ಮಾಣವಿದೆ. ಹರ್ಷವರ್ಧನ್‌ರಾಜ್‌ ಸಂಗೀತ, ಸುಜಯ್‌ಕುಮಾರ್‌ ಛಾಯಾಗ್ರಹಣ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next