ಬೆಳ್ತಂಗಡಿ: ತುಂಬಿ ತುಳುಕಿದ ಧರ್ಮಸ್ಥಳ. ಸಾವಿರಾರು ಮಂದಿ. ಎಲ್ಲಿ ನೋಡಿದರೂ ಜನಸಾಗರ. ಎಲ್ಲರ ಬಾಯಿಯಲ್ಲೂ ಶಿವನಾಮ ಜಪ. ಇದು ಶುಕ್ರವಾರ ರಾತ್ರಿ ಧರ್ಮಸ್ಥಳದಲ್ಲಿ ಕಂಡು ಬಂದ ದೃಶ್ಯ. ಧರ್ಮಸ್ಥಳ ದೇಗುಲದ ಎದುರು ಪ್ರವಚನ ಮಂಟಪದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು ಶಿವಪಂಚಾಕ್ಷರಿ ಜಪಕ್ಕೆ ಚಾಲನೆ ನೀಡಿದ ಬಳಿಕ ರಥೋತ್ಸವದವರೆಗೂ ಶಿವನಾಮ ಧ್ಯಾನ ಮಾಡಿದವರು ಸಾವಿರ ಸಾವಿರ ಮಂದಿ. ಇದಕ್ಕೂ ಮುನ್ನ ಧರ್ಮಸ್ಥಳದೆಡೆಗೆ ಪಾದಯಾತ್ರೆಯಲ್ಲಿ ಸಾಗಿ ಬಂದವರು ಸಾವಿರಾರು ಮಂದಿ.
ಪ್ರತಿವರ್ಷ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಸಿದ್ಧವಾಗುವ ಹೊತ್ತಿಗೆ ಕರ್ನಾಟಕದ ವಿವಿಧ ಭಾಗಗಳಿಂದ ಯಾತ್ರಾರ್ಥಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ಜಾಗರಣೆ ಆಚರಿಸಿಕೊಳ್ಳುತ್ತಾರೆ.
ಅದಕ್ಕೆಂದೇ ವ್ರತಗಳನ್ನು ಕೂಡ ಕೈಗೊಳ್ಳುತ್ತಾರೆ. ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುವ ಸಂಯಮ ರೂಢಿಸಿಕೊಳ್ಳುವ ಮನಃಸ್ಥಿತಿಯೊಂದಿಗೆ ಕೃತಾರ್ಥ ರಾಗುತ್ತಾರೆ. ನಂಬಿದವರನ್ನು ಕೈಬಿಡುವುದಿಲ್ಲ “ಈ ಹಿಂದೆ ಶ್ರೀಕ್ಷೇತ್ರಕ್ಕೆ ದರ್ಶನಕ್ಕಾಗಿ ಬಂದಿದ್ದೆವು. ಶಿವರಾತ್ರಿ ಜಾಗರಣೆಯ ಉದ್ದೇಶಕ್ಕೆ ಬರುತ್ತಿರುವುದು ಇದೇ ಮೊದಲು. ಮಂಜುನಾಥೇಶ್ವರ ದೇವರ ಮೇಲೆ ತುಂಬಾ ನಂಬಿಕೆ ಇದೆ. ದೇವರು ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ. ನಮ್ಮೆಲ್ಲಾ ಸಮಸ್ಯೆಗೆ ಪರಿಹಾರ ಒದಗಿಸುತ್ತಾನೆ. ನಾವು ಇದಕ್ಕಿಂತ ಮುಂಚೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ವಾಪಾಸಾದ ಅನಂತರ ನಮ್ಮ ಸಮಸ್ಯೆಗೆ ಪರಿಹಾರ ದೊರಕಿತ್ತು’ ಎಂದು ರಾಜಮ್ಮ ಹೇಳಿದರು.
ಹಾಸನದಿಂದ ಬಂದಿದ್ದ ಪಾದಯಾತ್ರಿ ಭಕ್ತ ಯಲ್ಲಪ್ಪ ಶ್ರೀಕ್ಷೇತ್ರ ಭೇಟಿ ಮನಸ್ಸಿಗೆ ಖುಷಿ ನೀಡುತ್ತದೆ ಎಂದರು. ಪ್ರತಿಯೊಬ್ಬರಿಗೂ ಒಳಿತಾಗಲಿ ಎಂಬ ಹರಕೆಯೊಂದಿಗೆ ಈ ಸಲದ ಪಾದಯಾತ್ರೆ ಕೈಗೊಂಡಿದ್ದೇನೆ. ಶ್ರೀ ಮಂಜುನಾಥೇಶ್ವರ ಆರಾಧನೆಯೊಂದಿಗೇ ನಮ್ಮ ಬದುಕು ಮುನ್ನಡೆದಿದೆ ಎಂದು ಅವರು ಹೇಳಿದರು. ಶಿವಪಂಚಾಕ್ಷರಿ ಜಪ ಸಂದರ್ಭ ಡಾ|ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಸುಪ್ರಿಯಾ ಹಷೇìಂದ್ರ ಕುಮಾರ್, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಹನುಮಂತಪ್ಪ ಉಪಸ್ಥಿತರಿದ್ದರು.
– ಮೇಘ ಗೌಡ, ಧರ್ಮಸ್ಥಳ