Advertisement

ಶಿವಾರಾಧನೆಗೆ ಸಜ್ಜಾದ ರಾಜಧಾನಿ

05:59 AM Mar 04, 2019 | |

ಬೆಂಗಳೂರು: ಮಹಾ ಶಿವರಾತ್ರಿ ಆಚರಣೆಗೆ ರಾಜಧಾನಿ ಬೆಂಗಳೂರು ಸಜ್ಜಾಗಿದ್ದು, ಹಬ್ಬದ ಹಿನ್ನೆಲೆಯಲ್ಲಿ ನಗರದ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಭಜನೆ ಆಯೋಜಿಸಲಾಗಿದೆ. ಜತೆಗೆ ರಾತ್ರಿ ಜಾಗರಣೆ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳಿಂದ ನೃತ್ಯ, ನಾಟಕ ಪ್ರದರ್ಶನ, ಹಾಸ್ಯ, ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ನಗರದ ಪ್ರಮುಖ ದೇವಾಲಯಗಳಾದ ಗವೀಪುರದ ಗವಿಗಂಗಾಧರೇಶ್ವರ ದೇವಾಲಯ, ಕಾಡುಮಲ್ಲೇಶ್ವರದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಮಾರುಕಟ್ಟೆಯ ಶ್ರೀ ಕೋಟೆ ಜಲಕಂಠೇಶ್ವರ ದೇವಾಲಯ, ಹಳೇ ಮದ್ರಾಸ್‌ ರಸ್ತೆಯಲ್ಲಿರುವ ಶಿವ ದೇವಸ್ಥಾನ ಸೇರಿದಂತೆ ಎಲ್ಲಾ ಶಿವನ ದೇವಾಲಯದಲ್ಲಿ ಅಭಿಷೇಕ, ರುದ್ರಾಭಿಷೇಕ, ಬಿಲ್ವಪತ್ರೆ ಅರ್ಪಣೆ, ಮಹಾ ಮಂಗಳಾರತಿ, ಶಿವ ಸಹಸ್ರನಾಮ ಪಠಣ, ಸಂಕೀರ್ತನೆ, ಪುರಾ ಪಠಣ, ಉಪನ್ಯಾಸ ನಡೆಯಲಿದೆ. 

ಗವಿಗಂಗಾಧರೇಶ್ವರ ದೇವಾಲಯ: ಬಸವನಗುಡಿಯ ಗವಿಗಂಗಾಧರೇಶ್ವರ ದೇಗುಲದಲ್ಲಿ ಸೋಮ ವಾರ ಬೆಳಗ್ಗೆ 6 ಗಂಟೆಯಿಂದಲೇ ಶಿವಲಿಂಗಕ್ಕೆ ಅಭಿಷೇಕ, ವಿಶೇಷ ಪೂಜೆ ಆರಂಭವಾಗಲಿದೆ. ಭಕ್ತರಿಗೆ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗೆ 4 ಗಂಟೆವರೆಗೂ ದರ್ಶನಕ್ಕೆ ಅವಕಾಶವಿದ್ದು, ರಾತ್ರಿ
ಜಾಗರಣೆಯಲ್ಲಿ ಸಂಗೀತ ಸೇವೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾರುಕಟ್ಟೆಯ ಕೋಟೆ ಶ್ರೀ ಜಲಕಂಠೇಶ್ವರ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ 6.30ರಿಂದ ಮಂಗಳವಾರ ರಾತ್ರಿ 9 ಗಂಟೆವರೆಗೆ ಶಿವರಾತ್ರಿವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ, ಮಹಾ ಪ್ರದೋಷ, 3 ಬಾರಿ ಯಾಮ ಪೂಜೆ ನಡೆಯಲಿದೆ. ಹಳೇ ಮದ್ರಾಸ್‌ ರಸ್ತೆಯಲ್ಲಿರುವ ಶಿವೋಹಂ ಶಿವ ದೇವಸ್ಥಾನದಲ್ಲಿ ಸೋಮವಾರ ಹಾಗೂ ಮಂಗಳವಾರ ವಿಶೇಷ ಪೂಜೆ, ಮಹಾಯಜ್ಞ, ಜತೆಗೆ ಪ್ರತಿ ಎರಡು ಗಂಟೆಗೊಮ್ಮೆ ಶಿವ ಆರತಿ ನಡೆಯಲಿದೆ. ಇವುಗಳ ಜತೆಗೆ ಭಜನೆ, ಸತ್ಯಂ ಶಿವಂ ಸುಂದರಂ ಸಂಗೀತ ಕಾರ್ಯಕ್ರಮ, ಶಿವ ಅಂತಾಕ್ಷರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಚಾಮರಾಜಪೇಟೆಯ ಈದ್ಗಾ ಮೈದಾನದ ಎದುರಿನ ಬಿಬಿಎಂಪಿ ಪಿಯು ಕಾಲೇಜು ಮೈದಾನದಲ್ಲಿ “ಅತ್ಯದ್ಭುತ ಶ್ರೀಶೈಲ ಮಲ್ಲಿಕಾರ್ಜುನ ದರ್ಶನ’ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಮಾ.2ರಂದು ಆರಂಭವಾಗಿರುವ ಕಾರ್ಯಕ್ರಮ 5ರವರೆಗೆ ನಡೆಯಲಿದೆ. ಮಲ್ಲೇಶ್ವರದ 8ನೇ ಅಡ್ಡರಸ್ತೆಯಲ್ಲಿರುವ ಕನ್ಯಕಾಪರಮೇಶ್ವರಿ ದೇವಸ್ಥಾನದ ಆವರಣದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಮಾ.4ರಿಂದ 6ರವರೆಗೆ ಭಕ್ತರಿಗೆ “ಲೇಪಾಕ್ಷಿ ನಾಗಲಿಂಗೇಶ್ವರ ಸುಜ್ಞಾನ ಶಿವನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಆರ್ಟ್‌ ಆಫ್‌ ಲಿವಿಂಗ್‌: ಶಿವರಾತ್ರಿ ಪ್ರಯುಕ್ತ ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದಲ್ಲಿ ರವಿಶಂಕರ್‌ ಗುರೂಜಿ ಅವರೊಂದಿಗೆ ಭಜನೆ, ಸತ್ಸಂಗ ನಡೆಯಲಿದೆ.

Advertisement

ಜಯನಗರ ಮಹಾಶಿವರಾತ್ತಿ ಉತ್ಸವ: ಜೆ.ಪಿ.ನಗರ 2ನೇ ಹಂತದ ದುರ್ಗಾಪರಮೇಶ್ವರಿ ಆಟದ ಮೈದಾನದಲ್ಲಿ ಸಂಜೆ 6 ಗಂಟೆಯಿಂದ “ಜಯನಗರ ಮಹಾಶಿವರಾತ್ತಿ ಉತ್ಸವ’ ಹಮ್ಮಿಕೊಳ್ಳಲಾಗಿದೆ. ಜಾನಪದ ಕಲಾ ತಂಡಗಳ ಪ್ರದರ್ಶನ, ನೃತ್ಯ ಸಂಗೀತ ಕಾರ್ಯಕ್ರಮ, ಗುಂಡೂರಾವ್‌ ಅವರನಗೆಹೊನಲು, ಪುಣ್ಯಕೊಟಿ ಗೀತಗಾಯನ, ಕೃಷ್ಣಸಂಧಾನ ಹಾಸ್ಯ ನಾಟಕ ಪ್ರದರ್ಶನ ಸೇರಿ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಆರ್‌.ಟಿ.ನಗರದ ಆನಂದಗಿರಿ ಬೆಟ್ಟ, ಚೋಳನಾಯಕನಹಳ್ಳಿಯ ಆನಂದಲಿಂಗೇಶ್ವರಕ್ಷೇತ್ರದಲ್ಲಿ ಆನಂದ ಲಿಂಗೇಶ್ವರ ಕ್ಷೇತ್ರ ಟ್ರಸ್ಟ್‌ ವತಿಯಿಂದ ಸೋಮವಾರ 108 ಲೀಟರ್‌ ಕ್ಷೀರಾಭಿಷೇಕ, ರುದ್ರಾಭಿಷೇಕ, ನಂತರ ವಿವಿಧ ಅಲಂಕಾರ ನೆರವೇರಲಿವೆ.

ಶಿವೋತ್ಸವಂ; ಶಿವಭಕ್ತ ಸರ್ವಶಕ್ತ
ಮಹಾಶಿವರಾತ್ರಿ ಪ್ರಯುಕ್ತ ಹನುಮಂತ ನಗರದಲ್ಲಿ ಶ್ರೀ ಶೇಷ ಮಹಾಬಲಮುರಿ ಗಣಪತಿ ಸೇವಾ ಸಮಿತಿ ಟ್ರಸ್ಟ್‌ ವತಿಯಿಂದ ಭೂ ಕೈಲಾಸ ಮಾದರಿಯನ್ನು ನಿರ್ಮಿಸಲಾಗಿದೆ. “ಶಿವೋತ್ಸವಂ’ ಶಿವಭಕ್ತ ಸರ್ವಶಕ್ತ ಶೀರ್ಷಿಕೆಯಡಿ ವಿಶೇಷ ಪೂಜೆ ಸೇರಿದಂತೆ ನಾನಾ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ. ಸೋಮವಾರ ಬೆಳಗ್ಗೆ 6 ಗಂಟೆಗೆ ಏಕಾವಾರ ರುದ್ರಾಭಿಷೇಕ ನಡೆಯಲಿದ್ದು, 8 ಗಂಟೆಯಿಂದ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿ 7, 12 ಮತ್ತು 2 ಗಂಟೆ ಹಾಗೂ ಬೆಳಗಿನ ಜಾವ 4 ಗಂಟೆಗೆ ಯಾಮದ ಪೂಜೆಗಳು ನಡೆಯಲಿವೆ. ಇದರೊಂದಿಗೆ ನಾನಾ ಸಂಘ ಸಂಸ್ಥೆಗಳಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ

Advertisement

Udayavani is now on Telegram. Click here to join our channel and stay updated with the latest news.

Next