Advertisement

ಧಾರಾನಗರಿಯಲ್ಲಿ ಸಂಭ್ರಮದ ಶಿವರಾತ್ರಿ

02:24 PM Feb 25, 2017 | |

ಧಾರವಾಡ: ಹರ ಹರ ಮಹಾದೇವ ಜಯಘೋಷ.. ಶಿವನ ದರ್ಶನ ಮಾಡಿ ಪುನೀತ ಭಾವದಲ್ಲಿ ಶಿವಭಕ್ತರು.. ಎಲ್ಲ ಶಿವನ ದೇವಸ್ಥಾನಗಳಲ್ಲೂ ಶಿವನ ನಾಮಸ್ಮರಣೆ..ಆರಾಧನೆ.. ಶಿವರಾತ್ರಿ ನಿಮಿತ್ತ ಶಿವಲಿಂಗ ದರ್ಶನ ಪಡೆಯಲು ಬೆಳಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತ ಸಮೂಹ..ಎಲ್ಲೆಡೆ ಶಿವನಾಮ ಸ್ಮರಣೆ ! 

Advertisement

ನಗರದಲ್ಲಿ ಶುಕ್ರವಾರ ಮಹಾ ಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದ ಬಗೆ ಇದು. ಈಶ್ವರ ದೇವಾಲಯಗಳಿಗೆ ಆಗಮಿಸಿದ್ದ ಪ್ರವಾಹೋಪಾದಿಯಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಇವರಲ್ಲಿ ಮಕ್ಕಳು, ಮಹಿಳೆಯರ ಸಂಖ್ಯೆಯೇ ಜಾಸ್ತಿ ಇತ್ತು. ಶಿವಲಿಂಗಗಳಿಗೆ ಜಲ, ಕ್ಷೀರಾಭಿಷೇಕ ನೆರವೇರಿಸಲಾಯಿತು. ಶಿವನ ದರ್ಶನ ಪಡೆಯಲು ಬೆಳಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತ ಸಮೂಹ ನಗರದಲ್ಲಿ ಈಶ್ವರ ದೇವಾಲಯಗಳಿಗೆ ತೆರಳಿ ಲಿಂಗಕ್ಕೆ ಪೂಜೆ ಸಲ್ಲಿಸಿದರು.

ಹೂವು, ಪತ್ರಿಗಳಿಂದ ಶಿವಲಿಂಗವನ್ನು ಪೂಜಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಕೆಲವು ದೇವಾಲಯಗಳಲ್ಲಿ ರುದ್ರಾಭಿಷೇಕ, ಶಿವನಾಮ ಧ್ಯಾನದ ಮೂಲಕ ಶಿವನನ್ನು ಆರಾಧಿಸಿದರೆ ಇನ್ನು ಕೆಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಗಿತ್ತು. ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ಶಿವಸ್ಮರಣೆ, ಭಜನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ]

ದಕ್ಷಿಣ ಕಾಶಿಯ ದರ್ಶನ: ದಕ್ಷಿಣ ಕಾಶಿ ಆಗಿರುವ ಕಲಘಟಗಿ ರಸ್ತೆಯ ಗುಪ್ತಗಾಮಿನಿ ಶಾಲ್ಮಲಾ ಉಗಮ ಸ್ಥಾನದ ಸೋಮೇಶ್ವರದ ಶಿವಲಿಂಗಕ್ಕೆ ಮುಖ್ಯ ಅರ್ಚಕರಾದ ಗಂಗಯ್ನಾ ಬಳ್ಳಾರಿಮಠ ನೇತೃತ್ವದಲ್ಲಿ ಬೆಳಿಗ್ಗೆ 12:05 ಗಂಟೆಯಿಂದ ವಿಶೇಷ ಮಹಾರುದ್ರಾಭಿಷೆಕ, ಪಂಚಾಮೃತ, ಕ್ಷೀರಾಭಿಷೇಕ, ಸಹಸ್ರ ನಾಮಾವಳಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ನೆರವೇರಿದವು. 

ಇದಾದ ಬಳಿಕ ಬೆಳಿಗ್ಗೆ 3:30 ಗಂಟೆಯಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಮಧ್ಯಾಹ್ನದ ಬಿರು ಬಿಸಿಲು ಲೆಕ್ಕಸಿದೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವಲಿಂಗದ ದರ್ಶನ ಪಡೆದರು. ಇದು ರಾತ್ರಿವರೆಗೂ ಮುಂದುವರಿದು ಸೋಮೇಶ್ವರನಲ್ಲಿ ಇಷ್ಟಾರ್ಥ ಸಿದ್ಧಿದಾಗಿ ಪ್ರಾರ್ಥಿಸಿದರು. ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 7 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

Advertisement

ಒಟ್ಟಿನಲ್ಲಿ ಮಹಾಶಿವರಾತ್ರಿ ನಿಮಿತ್ತ “ದಕ್ಷಿಣ ಕಾಶಿ’ ಎಂದು ಪ್ರಸಿದ್ಧಿ ಪಡೆದ ಶ್ರೀಕ್ಷೇತ್ರ ಸೋಮೇಶ್ವರ, ಜಯನಗರ ಈಶ್ವರ ದೇವಾಲಯ, ಕಾಮನಕಟ್ಟಿ ಬ್ರಹ್ಮಲಿಂಗೇಶ್ವರ ದೇವಾಲಯ, ಹೆಬ್ಬಳ್ಳಿ ಅಗಸಿ ಈಶ್ವರ ದೇವಾಲಯ, ಎಪಿಎಂಸಿ ಶಂಭುಲಿಂಗೇಶ್ವರ ದೇವಾಲಯ ಸೇರಿದಂತೆ  ನಗರ ಹಾಗೂ ಗ್ರಾಮೀಣ ಪ್ರದೇಶದ ಹಲವು ಶಿವ ದೇವಾಲಯಗಳಲ್ಲಿ ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. 

ಗ್ರಾಮೀಣದಲ್ಲೂ ಜಾಗರಣೆ: ಗ್ರಾಮೀಣ ಪ್ರದೇಶದಲ್ಲಿ ಶಿವರಾತ್ರಿ ನಿಮಿತ್ತ ಆಯಾ ಗ್ರಾಮದ ಶಿವಲಿಂಗ ದೇವಸ್ಥಾನಗಳಿಗೆ ತೆರಳಿದ ಭಕ್ತರು, ಶಿವಲಿಂಗಕ್ಕೆ ವಿಶೇಷ  ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಉಪಾಸನೆ ಕೈಗೊಂಡು ಶುಕ್ರವಾರ ರಾತ್ರಿ ಇಡೀ ಜಾಗರಣೆ ಮಾಡಿದ ಭಕ್ತರು ಶಿವನಾಮ ಸ್ಮರಿಸಿದರು.

ಅದರಲ್ಲೂ ದೇವರಹುಬ್ಬಳ್ಳಿ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಬೆಳಗಿನಿಂದಲೇ ಅಭಿಷೇಕ ಮತ್ತು ಪೂಜಾ ವಿಧಾನಗಳು ನಡೆದವು. ಉಳಿದಂತೆ ನಿಗದಿ, ಉಪ್ಪಿನಬೆಟಗೇರಿ, ಲಕಮಾಪುರ, ಪುಡಕಲಕಟ್ಟಿ, ಹೆಬ್ಬಳ್ಳಿ, ಅಮ್ಮಿನಬಾವಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶಿವರಾತ್ರಿ ಹಬ್ಬ ಮನೆ ಮಾಡಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next