ಶಿವರಾಜಕುಮಾರ್ ಇತ್ತೀಚೆಗೆ ಆಸ್ಟ್ರೇಲಿಯಾಗೆ ತೆರಳಿದ್ದು ಎಲ್ಲರಿಗೂ ಗೊತ್ತು. ಆದರೆ, ಅಲ್ಲಿನ ಮೆಲ್ಬರ್ನ್ ಕನ್ನಡ ಸಂಘ ಅವರಿಗೊಂದು ಪ್ರಶಸ್ತಿ ನೀಡಿ ಗೌರವಿಸಿದ್ದು ಮಾತ್ರ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಹೌದು, ಆಸ್ಟ್ರೇಲಿಯಾದ “ಮೆಲ್ಬರ್ನ್ ಕನ್ನಡ ಸಂಘ’ ಇತ್ತೀಚೆಗೆ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆ. ಆ ಕಾರ್ಯಕ್ರಮಕ್ಕೆ ನಟ ಶಿವರಾಜಕುಮಾರ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು.
ಮೆಲ್ಬರ್ನ್ ಕನ್ನಡ ಸಂಘದ ಆಹ್ವಾನದಿಂದಾಗಿ, ಭಾಗವಹಿಸಿದ್ದ ಶಿವರಾಜಕುಮಾರ್ ಅವರಿಗೆ ಅಲ್ಲಿನ ಕನ್ನಡ ಸಂಘ “ಮುಂಬಾ ಸ್ಟಾರ್’ ಪ್ರಶಸ್ತಿ ನೀಡಿ ಆತ್ಮೀಯವಾಗಿ ಗೌರವಿಸಿದೆ. 1955 ರಿಂದಲೂ “ಮುಂಬಾ ಫೆಸ್ಟಿವಲ್’ ಎಂಬ ಹೆಸರಿನಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ, ನಾಲ್ಕು ದಿನಗಳ ಕಾಲ ನಡೆಯುವ ಈ ಕನ್ನಡ ಉತ್ಸವದಲ್ಲಿ ಪ್ರತಿವರ್ಷ ಕರ್ನಾಟಕದಲ್ಲಿ ವಿವಿಧ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಾಧಕರನ್ನು ಆಹ್ವಾನಿಸಿ, ಅವರಿಗೆ ಪ್ರೀತಿಯಿಂದ ಸನ್ಮಾನಿಸಿ, ಗೌರವಿಸಲಾಗುತ್ತದೆ.
ಈ ಬಾರಿ ಶಿವರಾಜಕುಮಾರ್ ಅವರನ್ನು ಆಹ್ವಾನಿಸಿದ್ದ ಮೆಲ್ಬರ್ನ್ ಕನ್ನಡ ಸಂಘ, ಕನ್ನಡ ಚಿತ್ರರಂಗದಲ್ಲಿ ಗಣನೀಯ ಸಾಧನೆ ಮಾಡಿರುವ ಶಿವರಾಜಕುಮಾರ್ ಅವರಿಗೆ ‘ಮುಂಬಾ ಸ್ಟಾರ್’ ಪ್ರಶಸ್ತಿ ನೀಡಿ ಗೌರವಿಸಿದೆ. ಇದೇ ವೇಳೆ ಮೆಲ್ಬರ್ನ್ ಕನ್ನಡ ಸಂಘ ‘ಕನ್ನಡ ಭವನ’ ನಿರ್ಮಾಣ ಮಾಡಲು ಮುಂದಾಗಿದ್ದು, ಈ ಕನ್ನಡ ಭವನ ನಿರ್ಮಾಣ ಕಾರ್ಯಕ್ಕೆ ಶಿವರಾಜಕುಮಾರ್ ಅವರು ಚಾಲನೆ ನೀಡುವ ಮೂಲಕ ಶುಭ ಹಾರೈಸಿದ್ದಾರೆ.
ಇನ್ನು ಮೆಲ್ಬರ್ನ್ನಲ್ಲಿ ಕನ್ನಡ ಶಾಲೆಯನ್ನು ತೆರೆದಿರುವ ಅಲ್ಲಿನ ಕನ್ನಡ ಸಂಘ, ಅಲ್ಲಿನ ಆಸಕ್ತ ಮಕ್ಕಳಿಗೆ ಉಚಿತವಾಗಿ ಕನ್ನಡ ಭಾಷೆಯನ್ನು ಕಲಿಸುತ್ತಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳ ಗ್ರಂಥಾಲಯ ಕೂಡ ಇದೆ. 32 ವರ್ಷಗಳ ಅವಧಿಯಲ್ಲಿ ಕನ್ನಡದ ಅನೇಕ ಕಲಾವಿದರು, ಸಾಹಿತಿಗಳು, ನಾಟಕಕಾರರು ಮೆಲ್ಬರ್ನ್ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ¨ªಾರೆ. ಮೆಲ್ಬರ್ನ್ ಕನ್ನಡ ಸಂಘದ ಚಟುವಟಿಕೆಗಳ ಮಾಹಿತಿ ಪಡೆದ ಶಿವರಾಜಕುಮಾರ್, ಸಂಘದ ಕಾರ್ಯವನ್ನು ಶ್ಲಾಘಿಸಿದ್ದಾರೆ.