ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಖ್ಯಾತಿಯ ನಟ ಶಿವರಾಜ್ ಕುಮಾರ್ ಅವರಿಗೆ ಬುಧವಾರ (ಜು. 12) ಹುಟ್ಟುಹಬ್ಬದ ಸಂಭ್ರಮ. ಹಿಂದಿನ ದಿನದ ರಾತ್ರಿಯಿಂದಲೇ ಮನೆಮುಂದೆ ಜಮಾಯಿಸಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳ ಅಭಿಮಾನಿಗಳ ನಡುವೆ ಶಿವರಾಜಕುಮಾರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.
ಅಭಿಮಾನಿಗಳು ತಂದಿದ್ದ ಬೃಹತ್ ಗಾತ್ರದ ಹಾರವನ್ನು ಹಾಕಿಕೊಂಡು, ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಿದ ಶಿವಣ್ಣ, ತಮ್ಮ ಜನ್ಮದಿನದ ಪ್ರಯುಕ್ತ ಇಡೀ ದಿನವನ್ನು ಅಭಿಮಾನಿಗಳ ಜೊತೆ ಭೇಟಿ ಮತ್ತು ಮಾತುಕತೆಗಾಗಿ ಮೀಸಲಿರಿಸಿದ್ದರು. ಸುಮಾರು ಮೂರು ವರ್ಷಗಳ ಕಾಲ ಕೋವಿಡ್ ಆತಂಕ ಅದಾದ ನಂತರ ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದ ದುಃಖ, ಹೀಗೆ ಸುಮಾರು ಸುಮಾರು ನಾಲ್ಕು ವರ್ಷಗಳಿಂದ ನಟ ಶಿವರಾಜಕುಮಾರ್ ಜನ್ಮದಿನದ ಸಂಭ್ರಮಾಚರಣೆಗಳಿಂದ ದೂರ ಉಳಿದಿದ್ದರು. ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಶಿವರಾಜಕುಮಾರ್ ಬಹಿರಂಗವಾಗಿ ತಮ್ಮ ಜನ್ಮದಿನ ಆಚರಣೆಗೆ ಮುಂದಾಗಿದ್ದರು.
ಡಾ. ರಾಜಕುಮಾರ್ ಸ್ಮಾರಕಕ್ಕೆ ನಮನ: ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಬುಧವಾರ ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ವರನಟ ಡಾ. ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್ ಮತ್ತು ಸೋದರ ಪುನೀತ್ ರಾಜಕುಮಾರ್ ಸಮಾಧಿಗೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ತಂದೆ-ತಾಯಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಶಿವರಾಜಕುಮಾರ್, ಬಳಿಕ ಅಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಭೇಟಿಯಾಗಿ, ಹುಟ್ಟುಹಬ್ಬದ ಶುಭಾಶಯಗಳನ್ನು ಸ್ವೀಕರಿಸಿದರು.
ಸಂತೋಷ್ ಥಿಯೇಟರ್‌ನಲ್ಲಿ ಸಂತೋಷ: ತಮ್ಮ ಜನ್ಮದಿನದ ಸಂದರ್ಭದಲ್ಲಿ ಕೆ. ಜಿ ರಸ್ತೆಯ ಸಂತೋಷ್ ಚಿತ್ರಮಂದಿರದ ಆವರಣದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ನಟ ಶಿವರಾಜಕುಮಾರ್, “ಅಭಿಮಾನಿಗಳ ಒತ್ತಾಯದಂತೆ ಈ ಬಾರಿ ಜನ್ಮದಿನವನ್ನು ಅವರ ಆಸೆಯಂತೆ ಆಚರಿಸಿಕೊಳ್ಳುತ್ತಿದ್ದೇನೆ. ಅಭಿಮಾನಿಗಳನ್ನು ಮನರಂಜಿಸುವುದು ಬಿಟ್ಟು ನನಗೇನೂ ಗೊತ್ತಿಲ್ಲ. ಅಭಿಮಾನಿಗಳು ಏನು ಬಯಸುತ್ತಾರೋ ಅದನ್ನು ಮಾಡಲು ಯಾವಾಗಲೂ ಮುಂದಿರುತ್ತೇನೆ. ಸದ್ಯ “ಘೋಸ್ಟ್’ ಸಿನಿಮಾ ಶೂಟಿಂಗ್ ಮುಗಿಸಿ ರಿಲೀಸ್‌ಗೆ ರೆಡಿಯಾಗುತ್ತಿದೆ. ಅದಾದ ನಂತರ “ಬೈರತಿ ರಣಗಲ್’ ಸಿನಿಮಾ ಮಾಡುವುದಿದೆ. ಸುಮಾರು ಹತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಆದರೆ ಯಾವ ಸಿನಿಮಾ ಯಾವಾಗ ಶುರುವಾಗುತ್ತದೆ ಎಂದು ಈಗಲೇ ಹೇಳಲಾಗುವುದಿಲ್ಲ. ಆಯಾ ನಿರ್ದೇಶಕರು, ನಿರ್ಮಾಪಕರ ತಯಾರಿ ಡೇಟ್ಸ್ ನೋಡಿಕೊಂಡು ಒಪ್ಪಿಕೊಂಡ ಸಿನಿಮಾಗಳನ್ನು ಮಾಡಬೇಕಾಗಿದೆ’ ಎಂದರು.
ಕನ್ನಡ ಚಿತ್ರರಂಗದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಶಿವರಾಜಕುಮಾರ್, “ಎಲ್ಲರೂ ಕೂತು ಸೌಹಾರ್ದಯುತವಾಗಿ ಮಾತುಕತೆ ಮಾಡುವುದರಿಂದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಇಡೀ ಇಂಡಸ್ಟ್ರಿ ಒಂದು ಕುಟುಂಬವಿದ್ದಂತೆ, ಇಲ್ಲಿ ಎಲ್ಲರೂ ಸಹಜಕಾರದಿಂದ, ಒಟ್ಟಾಗಿ ನಡೆದುಕೊಂಡು ಹೋಗಬೇಕಾಗುತ್ತದೆ. ನನಗೆ ಸಿನಿಮಾದಲ್ಲಿ ಅಭಿನಯಿಸುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಚಿತ್ರರಂಗದಲ್ಲಿ ನಾನೇ ನೇತೃತ್ವ ವಹಿಸಿಕೊಳ್ಳಬೇಕು ಎಂಬುದು ಎಲ್ಲ ಅಪೇಕ್ಷೆಯಾಗಿದ್ದರೆ, ಮುಂದೆ ಅದರ ಬಗ್ಗೆ ಯೋಚಿಸುತ್ತೇನೆ’ ಎಂದರು.
ಶುಭಾಶಯಗಳ ಮಹಾಪೂರ: 62ನೇ ವಸಂತಕ್ಕೆ ಕಾಲಿಟ್ಟ, ನಟ ಶಿವರಾಜಕುಮಾರ್ ಅವರಿಗೆ ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರಿಂದಲೂ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.
“ಘೋಸ್ಟ್’ ಸ್ಪೆಷಲ್ ಟೀಸರ್: ಶಿವರಾಜಕುಮಾರ್ ಬರ್ತ್ ಡೇ ಪ್ರಯುಕ್ತ “ಘೋಸ್ಟ್’ ಚಿತ್ರತಂಡ ಸಿನಿಮಾದ ಸ್ಪೆಷಲ್ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಕೆ. ಜಿ . ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ನಟ ಶಿವರಾಜಕುಮಾರ್ “ಘೋಸ್ಟ್’ ಚಿತ್ರತಂಡದ ಜೊತೆ ಭಾಗಿಯಾಗಿದ್ದು, ಅಭಿಮಾನಿಗಳ ಮುಂದೆ “ಘೋಸ್ಟ್’ ಸಿನಿಮಾದ “ಬಿಗ್ ಡ್ಯಾಡಿ’ ವಿಡಿಯೋ ಬಿಡುಗಡೆಯಾಗಿದೆ.