ತೆಲುಗು ನಿರ್ದೇಶಕನ ಜೊತೆ ಶಿವಣ್ಣ ಸಿನಿಮಾ ನಟ ಶಿವರಾಜ್ಕುಮಾರ್ ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.
ಅದು ತೆಲುಗು ನಿರ್ದೇಶಕನ ಜೊತೆ. ಅಂದಹಾಗೆ, ಶಿವರಾಜ್ ಕುಮಾರ್ ಹೊಸ ಸಿನಿಮಾ ಮಾಡುತ್ತಿರುವುದು ತೆಲುಗಿನ ಕಾರ್ತಿಕ್ ಅದ್ವೈತ್. ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ “ಪಾಯುಮ್ ಒಲಿ ನೀ ಎನಕ್ಕು’ ಚಿತ್ರ ನಿರ್ದೇಶಿಸಿರುವ ಕಾರ್ತಿಕ್, ಇದೀಗ ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದು ಇವರ ನಿರ್ದೇಶನದ ಎರಡನೇ ಸಿನಿಮಾ.
ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ವಿಭಿನ್ನ ಲುಕ್ ಹಾಗೂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಕಥೆ ಕೇಳಿ ಶಿವಣ್ಣ ಕೂಡಾ ಖುಷಿಯಾಗಿದ್ದಾರಂತೆ. ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು, ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾ ತಂಡ ಬಿಝಿಯಾಗಿದೆ.
ಮುಂದಿನ ವರ್ಷದಿಂದ ಚಿತ್ರೀಕರಣ ಆರಂಭವಾಗಲಿದೆ. ಬಿಗ್ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಚಿತ್ರದ ಟೈಟಲ್, ನಾಯಕಿ, ತಾರಾಬಳಗ, ತಾಂತ್ರಿಕ ವರ್ಗ ಎಲ್ಲವೂ ಇನ್ನಷ್ಟೇ ಅಂತಿಮವಾಗಬೇಕಿದೆ.
ಶಿವಣ್ಣ ಅಭಿನಯದ “ಕಿಲ್ಲಿಂಗ್ ವೀರಪ್ಪನ್’ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಹಾಗೂ ತೆಲುಗಿನಲ್ಲಿ “ಆಫೀಸರ್’, “ಗುಡ್ ಲಕ್ ಸಖಿ’ ಸಿನಿಮಾ ನಿರ್ಮಿಸಿರುವ ನಿರ್ಮಾಪಕ ಸುಧೀರ್ ಚಂದ್ರ ಪಡಿರಿ “ಸುಧೀರ್ ಚಂದ್ರ ಫಿಲಂ ಕಂಪನಿ’ ಬ್ಯಾನರ್ನಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.