ನಟ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಈಗ ಸಿನಿಮಾ ನಿರ್ಮಾಣದತ್ತ ಮುಖ ಮಾಡಿದ್ದಾರೆ. “ಶ್ರೀಮುತ್ತು ಸಿನಿ ಸರ್ವಿಸ್’ ಎಂಬ ಬ್ಯಾನರ್‌ನಡಿ ಸಿನಿಮಾ ನಿರ್ಮಿಸಲು ಮುಂದಾಗಿದ್ದು, ತಮ್ಮ ನಿರ್ಮಾಣದ ಚೊಚ್ಚಲ ಚಿತ್ರದ ಪೋಸ್ಟರ್ ಅನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ.
ಇವರ ನಿರ್ಮಾಣದ ಚೊಚ್ಚಲ ಸಿನಿಮಾಗೆ ವಂಶಿ ನಿರ್ದೇಶಕರು. ಒಂದಷ್ಟು ಕಿರುಚಿತ್ರ ನಿರ್ದೇಶಿಸಿ, ಪಿಆರ್‌ಕೆ ನಿರ್ಮಾಣ ಸಂಸ್ಥೆಯಡಿ ಬಂದ ಮಾಯಾಬಜಾರ್ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಜೊತೆಗೆ ಇತ್ತೀಚೆಗೆ ತೆರೆಗೆ ಬಂದ ಐದು ಕಥೆಗಳ ಪೆಂಟಗನ್ ಸಿನಿಮಾದ ಕಿರಣ್ ಕುಮಾರ್ ನಿರ್ದೇಶನದ ಕಥೆಯಲ್ಲಿ ಪ್ರಮುಖ ಪಾತ್ರವಾಗಿ ನಟಿಸಿದ್ದ ವಂಶಿ, ನಿವೇದಿತಾ ಬಂಡವಾಳ ಹಾಕುತ್ತಿರುವ ಮೊದಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹಾಗೂ ಪೂರ್ಣಪ್ರಮಾಣದ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ.
ಲೈಫ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹ ಣವಿದೆ. ಚರಣ್ ರಾಜ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ.
“ಶ್ರೀಮುತ್ತು ಸಿನಿ ಸರ್ವಿಸ್ ‘ ಸಂಸ್ಥೆಯಡಿ ಈಗಾಗಲೇ ಧಾರಾವಾಹಿ ಹಾಗೂ ಮೂರು ವೆಬ್ ಸೀರೀಸ್‌ಗಳು ಹೊರಬಂದಿವೆ. ಈಗ ಸಿನಿಮಾ ನಿರ್ಮಾಣವಾಗುತ್ತಿದೆ.