Advertisement

ಸಾರಿಗೆ ನೌಕರರ ಮುಷ್ಕರ-ಪರದಾಟ

06:36 PM Apr 08, 2021 | Shreeraj Acharya |

ಶಿವಮೊಗ್ಗ: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಯಾದ್ಯಂತ ಸರ್ಕಾರಿ ಬಸ್‌ಗಳು ಸಂಚರಿಸಲಿಲ್ಲ. ಪ್ರಯಾಣಿಕರು ಖಾಸಗಿ ಬಸ್‌ಗಳಿಗೆ ಮುಗಿಬಿದ್ದ ಘಟನೆ ನಡೆಯಿತು. ಸರ್ಕಾರಿ ಬಸ್‌ ನಿಲ್ದಾಣಗಳಿಂದ ವಿವಿಧ ಭಾಗಗಳಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಖಾಸಗಿ ಬಸ್‌ಗಳಿಗೆ ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಅವಕಾಶ ನೀಡಲಾಗಿತ್ತು. ಹಾಗಾಗಿ ಅನೇಕ ಖಾಸಗಿ ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದಲೇ ಸಂಚಾರ ಬೆಳೆಸಿದವು.

Advertisement

ಆದರೂ ಕೂಡ ಮುಷ್ಕರದ ಹಿನ್ನೆಲೆ ಮೊದಲೇ ಗೊತ್ತಿದ್ದರಿಂದ ಪ್ರಯಾಣಿಕರ ಸಂಖ್ಯೆಯೇ ಕಡಿಮೆಯಾಗಿದ್ದು, ಕಂಡು ಬಂದಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ಡಿಪೋ ಅ ಧಿಕಾರಿ ಸಿದ್ದೇಶ್‌, ಬೆಳಗಿನಿಂದ ಸರ್ಕಾರಿ ಬಸ್‌ಗಳು ಸಂಚಾರ ಮಾಡುತ್ತಿಲ್ಲ. ನಮ್ಮ ವಿಭಾಗ ಅಲ್ಲದೆ ಬೇರೆ ಬೇರೆ ವಿಭಾಗಗಳಿಂದಲೂ ಕೂಡ ಬಸ್‌ಗಳು ನಿಲ್ದಾಣಕ್ಕೆ ಬರುತ್ತಿಲ್ಲ. ಯಾರೂ ಕೆಲಸಕ್ಕೆ ಹಾಜರಾಗಿಲ್ಲ. ಕರ್ತವ್ಯಕ್ಕೆ ಹಾಜರಾಗುವಂತೆ ಅನೇಕ ಡ್ರೈವರ್‌ ಮತ್ತು ಕಂಡಕ್ಟರ್‌ಗಳ ಮನವೊಲಿಸಲಾಗಿದೆ. ಅವರಿರುವ ರೂಂಗಳಿಗೆ ಹೋಗಿ ಕರೆಯಲಾಗಿದೆ. ಆದರೂ ಕೂಡ ಅವರು ಬಂದಿಲ್ಲ. ಹೀಗಾಗಿ ಸಂಪೂರ್ಣವಾಗಿ ಸರ್ಕಾರಿ ಬಸ್‌ಗಳು ಸ್ಥಗಿತಗೊಂಡಿವೆ ಎಂದರು.

ಶಿವಮೊಗ್ಗ ಸರ್ಕಾರಿ ಬಸ್‌ ನಿಲ್ದಾಣಕ್ಕೆ ಪ್ರತಿನಿತ್ಯ ಸುಮಾರು 1300 ಬಸ್‌ಗಳು ಬರುತ್ತವೆ ಮತ್ತು ಹೊರಡುತ್ತವೆ. ಆದರೆ ಬುಧವಾರ ಯಾವ ಬಸ್‌ಗಳೂ ಬಂದಿಲ್ಲ. ಅಲ್ಲದೆ ಖಾಸಗಿ ಬಸ್‌ಗಳಿಗೆ ಇಲ್ಲಿ ಅವಕಾಶ ಕೊಡಲಾಗಿದೆ. ಇದಲ್ಲದೆ ಸರ್ಕಾರ ಕೆಲವು ಖಾಸಗಿ ಟ್ಯಾಕ್ಸಿಗಳಿಗೂ ಕೂಡ ಅವಕಾಶ ಕೊಟ್ಟಿರುವುದರಿಂದ ಪ್ರಯಾಣಿಕರು ಕಡಿಮೆ ಇರುವುದರಿಂದ ಹೆಚ್ಚಿನ ತೊಂದರೆಯಾಗಿಲ್ಲ. ಆದರೆ ಮುಷ್ಕರ ಮುಂದುವರಿದರೆ ಖಂಡಿತ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ತಿಳಿಸಿದರು.

ಖಾಸಗಿ ಬಸ್‌ಗಳ ಸಂಚಾರ ಎಂದಿನಂತಿತ್ತು. ಜಿಲ್ಲೆಯ ಎಲ್ಲಾ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ ಇರುವುದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಡುವ ಪ್ರಯಾಣಿಕರಿಗೆ ಸಮಸ್ಯೆಯಾಗಲಿಲ್ಲ. ಆದರೆ ಹೊರ ಜಿಲ್ಲೆಗಳಿಗೆ ತೆರಳಲು ಸರ್ಕಾರಿ ಬಸ್‌ ನಿಲ್ದಾಣಕ್ಕೆ ಬಂದಿದ್ದ ಕೆಲವು ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಸಾರಿಗೆ ನೌಕರರ 9 ಬೇಡಿಕೆಗಳ ಪೈಕಿ ಸರ್ಕಾರ 8 ಬೇಡಿಕೆ ಈಡೇರಿಸಿದೆ. ಸಾರಿಗೆ ನೌಕರರು ಹಠ ಮಾಡಿ ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರ ಕೈ ಬಿಟ್ಟು ಸೇವೆಗೆ ಮರಳಬೇಕೆಂದು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ಮನವಿ ಮಾಡಿಕೊಂಡಿದ್ದರೂ ಸಹ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈ ಮಧ್ಯೆ ಈಸ್ಟ್‌ ವೆಸ್ಟ್‌ ಸಂಸ್ಥೆಯ ಬಸ್‌ವೊಂದು ಬೆಂಗಳೂರಿಗೆ ಹೊರಟು ನಿಂತಿತ್ತು. ಪೊಲೀಸರು ಬಸ್‌ನ್ನು ನಿಲ್ಲಿಸದಂತೆ ಸೂಚನೆ ನೀಡಿದರು.

ಆದರೆ ಮಾಲೀಕ ತಲ್ಕಿನ್‌ ಅಹಮ್ಮದ್‌ ಅವರು ಜಿಲ್ಲಾಡಳಿತವೇ ಬಸ್‌ ಸಂಚರಿಸಲು ಅನುಮತಿ ನೀಡಿದೆ. ಆದರೆ ನಿವೇಕೆ ಕಿರುಕುಳ ನೀಡುತ್ತಿದ್ದೀರಿ ಇದು ಸರಿಯಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ಬಸ್‌ ಬಿಟ್ಟಿದ್ದೇವೆ ಎಂದು ಸಮಜಾಯಿಷಿ ನೀಡಿದರು. ಪೊಲೀಸರ ಮತ್ತು ಮಾಲೀಕನ ನಡುವೆ ಮಾತುಕತೆ ಸಣ್ಣ ವಾಗ್ವಾದ ನಡೆಯಿತಾದರೂ ದೊಡ್ಡ ಪೇಟೆ ಪೊಲೀಸ್‌ ಠಾಣೆಯ ಸಿ.ಪಿ.ಐ ಹರೀಶ್‌ ಪಟೇಲ್‌ ಮಧ್ಯೆ ಪ್ರವೇಶಿಸಿ ತಿಳಿಗೊಳಿಸಿದರು. ಮುಷ್ಕರದ ಹಿನ್ನೆಲೆಯಲ್ಲಿ ನಿಲ್ದಾಣಕ್ಕೆ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next