ಹೊಳೆಹೊನ್ನೂರು : ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಬಾರದು ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ ಬಿ ಅಶೋಕ ನಾಯ್ಕ್ ಹೇಳಿದರು.
ಅವರು ಸಮೀಪದ ಮಂಗೋಟೆ ಗ್ರಾಮದಲ್ಲಿ ಶನಿವಾರ ತ್ಯಾಜ್ಯ ವಿಲೇವಾರಿ ಘಟಕ, ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ವ್ಯಕ್ತಿಗೂ ಪ್ರಜೆಗೂ ತಲುಪಿಸುವಲ್ಲಿ ಮೋದಿರವರು ಯಶಸ್ವಿಯಾಗಿದ್ದಾರೆ. ತಿಂಗಳಲ್ಲಿ ಕೊನೆಯ ಭಾನುವಾರ ಪ್ರಧಾನಿ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಾರ್ನಳ್ಳಿ ಗ್ರಾಮದ ಕುಂಬಾರಿಕೆ ಮಾಡುವ ಕುಟುಂಬದ ಬಗ್ಗೆ ಪ್ರಸ್ತಾಪಿಸಿದ್ದು, ಆ ಕುಟುಂಬದವರಿಗೆ ಸಂತೋಷ ಹಾಗೂ ನೆಮ್ಮದಿ ನೀಡಿದ ವಿಚಾರವಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಹೆಚ್ಚಿನ ಶ್ರಮ ವಹಿಸಿದ್ದು, ಮುಂದಿನ ದಿನಗಳಲ್ಲಿ ಶಿವಮೊಗ್ಗ ನಗರವನ್ನು ರಾಜ್ಯದಲ್ಲಿ ಉತ್ತಮ ನಗರವನ್ನವಾಗಿಸುವಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಕೆಲ ದಿನಗಳಲ್ಲಿ ಗ್ರಾಮಾಂತರ ಕ್ಷೇತ್ರ ಜಿಲ್ಲೆಯಲ್ಲಿ ಮಾದರಿ ಕ್ಷೇತ್ರವಾಗಿ ಗುರುತಿಸಿಕೊಳ್ಳುತ್ತದೆ. ಹಿಂದೆಂದು ಕಾಣದಷ್ಟು ಅನುದಾನದಲ್ಲಿ ಗ್ರಾಮಾಂತರದಲ್ಲಿ ಅಭಿವೃದ್ದಿ ಕಾಮಾಗಾರಿಗಳ ಪರ್ವ ನಡೆಯುತ್ತಿದೆ. ಎಲ್ಲಾ ಗ್ರಾಮಗಳಿಗೂ ಸೂಕ್ತವಾದ ರೀತಿಯಲ್ಲಿ ಸೌಲಭ್ಯಗಳನ್ನು ನೀಡುವುದು ನಮ್ಮ ಸರ್ಕಾರದ ಮಹಾತ್ವಾಕಾಂಕ್ಷೆಯಾಗಿದೆ. ಗ್ರಾಮಗಳ ಅಭಿವೃದ್ಧಿಯಲ್ಲಿ ರಸ್ತೆ ಮತ್ತು ಚರಂಡಿಗಳಂತೆ ತ್ಯಾಜ್ಯ ನಿರ್ವಹಣೆಯು ಮಹತ್ವವಾದ ಪಾತ್ರ ವಹಿಸುತ್ತವೆ. ನೈರ್ಮಲ್ಯ ಕಾಪಾಡಲು ಪ್ರತಿಯೊಂದು ಗ್ರಾಪಂನಲ್ಲಿ ನಿರ್ಮಾಣವಾಗಿರುವ ತ್ಯಾಜ್ಯ ವಿಲೇವಾರಿ ಘಟಕಗಳು ಕೆಲಸ ನಿರ್ವಹಿಸಬೇಕು. ಆಧ್ಯತೆಗೆ ಅನುಗುಣವಾಗಿ ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕೆಲ ಗ್ರಾಮಗಳಲ್ಲಿ ಬಾಕಿ ಇರುವ ರಸ್ತೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನೂ ಸಹ ಕಾಂಕ್ರೀಟ್ ರಸ್ತೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅಂಗವಿಕಲರಿಗೆ ಕಿಟ್ ವಿತರಿಸಿದರು. 57 ಮಹಿಳಾ ಸ್ತ್ರೀ ಶಕ್ತಿ ಸಂಘಗಳಿಗೆ ಪ್ರತಿ ಸಂಘಕ್ಕೆ ರೂ. 1 ಲಕ್ಷದ ಚೆಕ್ ವಿತರಿಸಿದರು.
ವಿಧಾನ ಪರಿಷತ್ ಸದಸ್ಯರಾದ ಡಿ,ಎಸ್ ಅರುಣ್, ರುದ್ರೆಗೌಡ್ರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಣಮ್ಮ, ಭದ್ರಾ ಕಾಡ ನಿರ್ದೆಶಕ ಷಡಾಕ್ಷರಪ್ಪ ಗೌಡ, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ರಮೇಶ್, ನಟರಾಜಗೌಡ್ರು, ಮಲ್ಲೇಶ್, ಲೋಹಿತ್ ಇತರರಿದ್ದರು.