ಶಿವಮೊಗ್ಗ: ಶರಾವರಿ ನದಿಯಿಂದ ಬೆಂಗಳೂರಿಗೆ ನೀರೊಯ್ಯುವ ಯೋಜನೆಯನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಹಾಗೂ ವಿವಿಧ ಸಂಸ್ಥೆಗಳು ಮಂಗಳವಾರ ನೆಹರೂ ಕ್ರೀಡಾಂಗಣದ ಮುಂಭಾಗ ಯೋಜನೆಗೆ ವಿರುದ್ಧವಾಗಿ ಮುಖ್ಯಮಂತ್ರಿಗಳಿಗೆ ಅಂಚೆ ಪತ್ರ ಕಳಿಸುವ ಮೂಲಕ ಪೋಸ್ಟ್ ಕಾರ್ಡ್ ಚಳವಳಿ ಹಮ್ಮಿಕೊಳ್ಳಲಾಗಿತ್ತು.
ಮಲೆನಾಡಿನ ಜನರು ನೀರಿನ ಹಾಹಾಕಾರದಿಂದ ಸರ್ವನಾಶವಾಗುವುದನ್ನು ತಡೆಯಲು ಸರ್ಕಾರದ ಗಮನ ಸೆಳೆಯಲು ಹಾಗೂ ಜು.10ರಂದು ಶಿವಮೊಗ್ಗ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಲು ಸಲುವಾಗಿ ಅಣ್ಣಾ ಹಜಾರೆ ಹೋರಾಟ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳು ಪೋಸ್ಟ್ ಕಾರ್ಡ್ ಚಳವಳಿ ನಡೆಸಿದವು.
ಲಿಂಗನಮಕ್ಕಿ ಜಲಾಶಯದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸುತ್ತಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಈಗಾಗಲೇ ವರ್ಷದ ಬಹುಭಾಗ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ಅಲ್ಲಿಯ ಕೆರೆಗಳನ್ನು ಅಭಿವೃದ್ಧಿಪಡಿಸುವುದು, ಮಳೆಯ ಕೊಯ್ಲನ್ನು ಕಡ್ಡಾಯವಾಗಿ ಜಾರಿಗೊಳಿಸುವುದು ಹಾಗೂ ಇನ್ನಿತರೆ ವೈಜ್ಞಾನಿಕ ರೀತಿಯಲ್ಲಿ ನೀರನ್ನು ಸಂಗ್ರಹಿಸುವ ಬಗ್ಗೆ ಸರ್ಕಾರಕ್ಕೆ ಕಿಂಚಿತ್ ಸಾಮಾನ್ಯ ಪ್ರಜ್ಞೆ ಇರಬೇಕಾಗಿರುತ್ತದೆ ಎಂದು ಆರೋಪಿಸಿದೆ.
ಇಡೀ ರಾಜ್ಯಕ್ಕೆ ಬೆಳಕು ನೀಡುತ್ತಿರುವ ಶರಾವತಿ ನದಿಯನ್ನು ಬತ್ತಿಸಲು ಹೊರಟರೇ ಇಡೀ ರಾಜ್ಯವು ಸಂಪೂರ್ಣವಾಗಿ ಕತ್ತಲಲ್ಲಿ ಮುಳುಗುತ್ತದೆ. ಮಾತ್ರವಲ್ಲ, ನೀರಿನ ಹಾಹಾಕಾರದಿಂದ ಮಲೆನಾಡಿನ ಸರ್ವನಾಶ ಖಂಡಿತ. ಯಾವುದೇ ಕಾರಣಕ್ಕೂ ಸಾರ್ವಜನಿಕರ ತೆರಿಗೆ ಹಣ ದುಂದು ವೆಚ್ಚ ಮಾಡದೆ ಈ ಅವೈಜ್ಞಾನಿಕ ಯೋಜನೆಯನ್ನು ತಕ್ಷಣ ನಿಲ್ಲಿಸುವುದರ ಮೂಲಕ ಶಿವಮೊಗ್ಗ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ನೀರಿನ ಬವಣೆ ನೀಗಿಸುವ ಮೂಲಕ ಜಿಲ್ಲೆಯ ಜನತೆಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಪೋÓr್ಕಾರ್ಡ್‌ನಲ್ಲಿ ಆಗ್ರಹಿಸಲಾಗಿದೆ.
ಡಾ| ಎನ್.ಎಲ್. ನಾಯಕ್, ಡಾ| ಚಿಕ್ಕಸ್ವಾಮಿ, ಟಿ.ಎಂ. ಅಶೋಕ್ ಯಾದವ್, ಅಜಯ್ಕುಮಾರ್ ಶರ್ಮಾ, ಜನಮೇಜಿ ರಾವ್, ಡಾ| ಸುಬ್ಬಣ್ಣ, ಬಾಬುರಾವ್, ರಮೇಶ್‌ಬಾಬು ಜಾದವ್, ಎಂ.ಎನ್. ಸುಂದರ್‌ರಾಜ್, ಜಿ. ವಿಜಯ್‌ಕುಮಾರ್, ಎಸ್.ಬಿ. ಅಶೋಕ್‌ಕುಮಾರ್ ಇನ್ನಿತರರು ಭಾಗವಹಿಸಿದ್ದರು.