ಶರತ್ ಭದ್ರಾವತಿ
ಶಿವಮೊಗ್ಗ: ಮುಂಗಾರು ಮಳೆ ಶುರುವಾಗಿ ಎರಡು ತಿಂಗಳು ಕಳೆದಿದ್ದು ಜಿಲ್ಲೆಯ ಜಲಾಶಯಗಳು ನಿರೀಕ್ಷಿತ ಪ್ರಮಾಣದಲ್ಲಿ ತುಂಬಿಲ್ಲ. ಮಳೆ, ಡ್ಯಾಂ ನೀರು ನಂಬಿಕೊಂಡು ಭತ್ತ ನಾಟಿಗೆ ಮುಂದಾಗಿದ್ದ ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಭತ್ತ ನಾಟಿಗೆ ಕೇವಲ 15 ದಿನ ಮಾತ್ರ ಕಾಲಾವಕಾಶ ಇದ್ದು ಆತಂಕ ಹೆಚ್ಚಾಗಿದೆ.
ಭದ್ರಾ ಜಲಾಶಯದಿಂದ ಭದ್ರಾವತಿಯಲ್ಲಿ 5 ಸಾವಿರ ಹೆಕ್ಟೇರ್, ದಾವಣಗೆರೆ ಜಿಲ್ಲೆಯಲ್ಲಿ 65387 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದೆ. ಶಿಕಾರಿಪುರ ತಾಲೂಕಿನ ಅಂಜನಾಪುರ, ಅಂಬ್ಲಿಗೊಳ ಜಲಾಶಯ ವ್ಯಾಪ್ತಿಯಲ್ಲಿ 5 ಸಾವಿರ ಹೆಕ್ಟೇರ್ ಭತ್ತದ ಬೆಲ್r ಇದೆ. ಅಲ್ಲದೆ ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ಭಾಗದಲ್ಲಿ ಮಳೆ ನೀರಿಗೆ ಭತ್ತ ನಾಟಿ ಮಾಡಲಾಗುತ್ತದೆ. 15 ದಿನಗಳಿಂದ ತುಂತುರು ಮಳೆಯಾಗುತ್ತಿದ್ದು ಅದೇ ನೀರಿಗೆ ಈ ಭಾಗದಲ್ಲಿ ನಾಟಿ ಮಾಡಲಾಗುತ್ತಿದೆ. ಜಲಾಶಯ ನಂಬಿದವರು ಇನ್ನೂ ಯೋಚನೆ ಮಾಡಬೇಕಾಗಿದೆ. ಆಗಸ್ಟ್ ಎರಡನೇ ವಾರದವರೆಗೂ ಭತ್ತ ಬಿತ್ತನಗೆ ಪ್ರಶಸ್ತವಾಗಿದೆ. ನಂತರ ಮಾಡಿದರೆ ಇಳುವರಿ ಮೇಲೆ ಪ್ರಭಾವ ಬೀರಬಹುದು. ಕೃಷಿ ಇಲಾಖೆ ಕೂಡ ಮಳೆ ನಿರೀಕ್ಷೆಯಲ್ಲಿದ್ದು ಆ.15ರ ನಂತರ ಬೇರೆ ಬೆಳೆಯುವ ಬಗ್ಗೆ ಸಲಹೆ ನೀಡಲಿದೆ.
99 ಹೆಕ್ಟೇರ್‌ನಲ್ಲಿ ಭತ್ತ: ಭತ್ತ ನಾಟಿಗೆ ಕೇವಲ 15 ದಿನ ಬಾಕಿ ಇದ್ದು ಈ ವರೆಗೆ 33534 ಹೆಕ್ಟೇರ್ ಬಿತ್ತನೆಯಾಗಿದೆ. ಈ ಬಾರಿ 99,684 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 11 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 472 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಭದ್ರಾವತಿ ತಾಲೂಕಿನಲ್ಲಿ 7,250 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 75 ಹೆಕ್ಟೇರ್, ತೀರ್ಥಹಳ್ಳಿಯಲ್ಲಿ 13 ಸಾವಿರ ಹೆಕ್ಟೇರ್‌ನಲ್ಲಿ 1756 ಹೆಕ್ಟೇರ್, ಸಾಗರದಲ್ಲಿ 15,850 ಹೆಕ್ಟೇರ್ ಗುರಿಯಲ್ಲಿ 11,480 ಹೆಕ್ಟೇರ್, ಹೊಸನಗರ 10,774 ಹೆಕ್ಟೇರ್‌ನಲ್ಲಿ 4232, ಶಿಕಾರಿಪುರ 17 ಸಾವಿರ ಹೆಕ್ಟೇರ್ ಗುರಿಯಲ್ಲಿ ಈ ವರೆಗೆ ಒಂದು ಎಕರೆಯಲ್ಲೂ ಬಿತ್ತನೆಯಾಗಿಲ್ಲ. ಸೊರಬದಲ್ಲಿ 24, 800 ಹೆಕ್ಟೇರ್ ಗುರಿಯಲ್ಲಿ 15,519 ಹೆಕ್ಟೇರ್ ಬಿತ್ತನೆಯಾಗಿದೆ. ಈಚೆಗೆ ಸೊರಬ, ತೀರ್ಥಹಳ್ಳಿ, ಸಾಗರ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಭತ್ತ ನಾಟಿಗೆ ಅನುಕೂಲವಾಗಿದೆ. ಮೂರ್‍ನಾಲ್ಕು ದಿನಗಳಿಂದ ಮಳೆ ಮತ್ತೆ ಮಾಯವಾಗಿದ್ದು ಅನಿಶ್ಚಿತತೆ ಕಾಡಿದೆ.
ಮಳೆ ಕೊರತೆ: ಜೂ. 1ರಿಂದ ಆ. 1ರವರೆಗೂ ಜಿಲ್ಲೆಯಲ್ಲಿ 1254 ಮಿಮೀ ಮಳೆಯಾಗಬೇಕಿತ್ತು. ಈ ವರೆಗೆ 913 ಮಿಮೀ ಅಂದರೆ ಶೇ.27ರಷ್ಟು ಮಳೆ ಕೊರತೆಯಾಗಿದೆ. ಸೊರಬ ತಾಲೂಕು ಮತ್ತೂಮ್ಮೆ ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆ ಇದ್ದು ಮುಂಗಾರು ಹಂಗಾಮಿನಲ್ಲಿ ಶೇ.46ರಷ್ಟು ಮಳೆ ಕೊರತೆಯಾಗಿದೆ. 1008 ಮಿಮೀ ಮಳೆಯಲ್ಲಿ 545 ಮಿಮೀ ಮಾತ್ರ ಮಳೆಯಾಗಿದೆ. ಅತಿ ಹೆಚ್ಚು ಮಳೆಯಾಗುವ ತೀರ್ಥಹಳ್ಳಿ ತಾಲೂಕು ಈ ಬಾರಿ ತೀವ್ರ ಮಳೆ ಕೊರತೆ ಎದುರಿಸುತ್ತಿದೆ. ಜೂನ್ ಮತ್ತು ಜುಲೈನಲ್ಲಿ 2062 ಮಿಮೀ ಮಳೆಯಾಗುವ ಬದಲಿಗೆ 1143 ಮಿಮೀ ಮಾತ್ರ ಮಳೆಯಾಗಿದೆ. ಭದ್ರಾವತಿಯಲ್ಲಿ ಶೇ.35 ರಷ್ಟು ಮಳೆ ಕೊರತೆಯಾಗಿದೆ. 307 ಮಿಮೀ ಬದಲು 201 ಮಿಮೀ ಮಳೆಯಾಗಿದೆ. ಹೊಸನಗರದಲ್ಲಿ 1852 ಬದಲಿಗೆ 1435 (ಶೇ.23 ಕೊರತೆ), ಸಾಗರದಲ್ಲಿ 1642 ಮಿಮೀ ಬದಲಿಗೆ 1490 ಮಿಮೀ (ಶೇ.9ರಷ್ಟು ಕೊರತೆ), ಶಿಕಾರಿಪುರದಲ್ಲಿ 422 ಮಿಮೀ ವಾಡಿಕೆಗೆ 277 ಮಿಮೀ (ಶೇ.34ರಷ್ಟು ಕೊರತೆ), ಶಿವಮೊಗ್ಗದಲ್ಲಿ 393 ಮಿಮೀ ಬದಲಿಗೆ, 288 ಮಿಮೀ (ಶೇ.27ರಷ್ಟು ಕೊರತೆ) ಮಳೆಯಾಗಿದೆ. ಜೂನ್‌ನಲ್ಲಿ ಸಂಪೂರ್ಣ ಕೈಕೊಟ್ಟ ಮಳೆ ಜುಲೈನಲ್ಲಿ ಕೊಂಚ ಕೈ ಹಿಡಿದಿತ್ತು. ಆಗಸ್ಟ್ ಮೊದಲ ವಾರದಲ್ಲಿ ಬಿಸಿಲು, ಮಳೆ ವಾತಾವರಣ ಇದೆ.
ಮಳೆ ಬಾರದಿದ್ದರೆ ಗತಿಯೇನು?
ಹವಾಮಾನ ಇಲಾಖೆ ಮೂನ್ಸೂಚನೆ ಪ್ರಕಾರ ಉತ್ತಮ ಮಳೆಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಕೃಷಿ ಇಲಾಖೆ ಇದೆ. ಮಳೆ ನಂಬಿ ಬಿತ್ತನೆ ಮಾಡಿದವರು ಒಂದೆಡೆಯಾದರೆ ಡ್ಯಾಂ ನೆಚ್ಚಿಕೊಂಡು ನಾಟಿ ಮಾಡುವವರು ದಿಕ್ಕು ತೋಚದಂತಾಗಿದ್ದಾರೆ. ಆ.15ರವರೆಗೆ ನೋಡಿ ನಂತರ ಸಲಹೆ ನೀಡಲು ಇಲಾಖೆ ತೀರ್ಮಾನಿಸಿದೆ. ಜಲಾಶಯಗಳು ಭರ್ತಿಯಾಗಿದಿದ್ದರೆ ಇತರೆ ಬೆಳೆ ಬೆಳೆಯಬಹುದು. ಕಡಿಮೆ ನೀರಿನಲ್ಲಿ ರಾಗಿ, ಹೆಸರು, ಉದ್ದು, ಅಲಸಂದೆ ಬಿತ್ತನೆಗೆ ಅವಕಾಶವಿದ್ದು ಸೆ. 15ರವರೆಗೂ ಕಾಲಾವಕಾಶ ಇದೆ.
ಜಿಲ್ಲೆಯಲ್ಲಿ ಬಹುತೇಕ ಮಳೆಯಾಶ್ರಿತ ಭತ್ತದ ನಾಟಿ ಮಾಡುವುದರಿಂದ ಈಗ ಬರುತ್ತಿರುವ ಮಳೆ ನಾಟಿಗೆ ಸಾಕಾಗುತ್ತಿದೆ. ಮಳೆ ಇದೇ ಪ್ರಮಾಣದಲ್ಲಿ ಮುಂದವರಿದರೆ ಸಮಸ್ಯೆ ಇಲ್ಲ. ಜಲಾಶಯ ವ್ಯಾಪ್ತಿಯ ರೈತರು ಕಾದು ನೋಡಿ ಬಿತ್ತನೆ ಮಾಡಬೇಕಿದೆ. ಇಲ್ಲದೇ ಹೋದರೆ ಇತರೆ ಬೆಳೆ ಹಾಕಲು ಅವಕಾಶವಿದೆ.
•
ಕಿರಣ್ ಕುಮಾರ್,
ಜಂಟಿ ನಿರ್ದೇಶಕ, ಕೃಷಿ ಇಲಾಖೆ