Advertisement

Shivamogga ಗಲಭೆ ಪ್ರಕರಣ: ತಲ್ವಾರ್‌ ಕತ್ತಿ ಪ್ರದರ್ಶನ ಮಾಡಿಲ್ಲ: ಪರಮೇಶ್ವರ್‌

09:09 PM Oct 02, 2023 | Team Udayavani |

ತುಮಕೂರು: ಶಿವಮೊಗ್ಗ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಕಲ್ಲುತೂರಿದ್ದ 50 ಜನರನ್ನು ಬಂಧಿಸಲಾಗಿದೆ. ಅಲ್ಲಿ ತಲ್ವಾರ್‌ ಕತ್ತಿ ಪ್ರದರ್ಶನ ಮಾಡಿಲ್ಲ, ಮರದ ತುಂಡನ್ನ ಕತ್ತಿ ತರ ಮಾಡಿ ಬಣ್ಣ ಹಾಕಿ, ಅದನ್ನ ಪ್ರದರ್ಶನ ಮಾಡಿದ್ದಾರೆಂದು ಅಲ್ಲಿಯ ಎಸ್‌ಪಿ ನನಗೆ ಮಾಹಿತಿ ಕೊಟ್ಟಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Advertisement

ನಗರದಲ್ಲಿ ಸೋಮವಾರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶಿವಮೊಗ್ಗದಲ್ಲಿ ಅಂತಹದ್ದು ಏನೂ ನಡೆದಿಲ್ಲ. ನೀವು ಏನೇನೋ ಹೇಳಬೇಡಿ. ಯಾರಿಗೋ ಚಾಕು ಹಾಕಿದ್ರು, ಯಾರಿಗೋ ಕತ್ತಿಯಲ್ಲಿ ಹೊಡೆದಿದ್ದು ಇಂತಹದ್ದನೆಲ್ಲ ಮಾತನಾಡಬಾರದು. ಅಲ್ಲಿಯ ಪರಿಸ್ಥಿತಿ ಅರಿತಿದ್ದ ನಾವು, ಮೊದಲೇ ಸಾಕಷ್ಟು ಪೊಲೀಸರನ್ನು ನಿಯೋಜನೆ ಮಾಡಿದ್ದೆವು ಎಂದರು.

ಅನಾವಶ್ಯಕವಾಗಿ ಮಾತನಾಡಬೇಡಿ: “ಶಿವಮೊಗ್ಗದಲ್ಲಿ ಕಲ್ಲು ತೂರಾಟ ನಡೆದಿದ್ದು ಕಾಂಗ್ರೆಸ್‌ ನಿಂದಲೇ’ ಎಂಬ ಈಶ್ವರಪ್ಪ ಹೇಳಿಕೆಗೆ ಟಾಂಗ್‌ ಕೊಟ್ಟ ಪರಮೇಶ್ವರ್‌, ಅದಕ್ಕೆ ಆಗಲೇ ಜನ ಉತ್ತರ ಕೊಟ್ಟಿದ್ದಾರೆ. ಗಲಭೆ ಆಗೋದಕ್ಕೆ ಮೊದಲೇ ನಾವು ಎಲ್ಲಾ ಕ್ರಮ ತೆಗೆದುಕೊಂಡಿದ್ದೆವು. ಆದರೂ, ಸಣ್ಣ ಘಟನೆ ನಡೆದು ಹೋಗಿದೆ. ಅನಾವಶ್ಯಕವಾಗಿ ಮಾತನಾಡಿ, ಪ್ರಚೋದನೆ ಮಾಡೋದು ಸರಿಯಲ್ಲ. ಈಶ್ವರಪ್ಪನವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಮೆರವಣಿಗೆಯಲ್ಲಿ ನಿಜವಾದ ತಲ್ವಾರ್‌ ಪ್ರದರ್ಶನ ಮಾಡಿದ್ದಾರೆ ಅಂತ ಹೇಳ್ತಿದ್ದಾರೆ. ನಾನು ಅದನ್ನ ಹೋಗಿ ನೋಡಿದ್ನ? ನಿಜವಾದ ತಲ್ವಾರ್‌ ಇರಬಹುದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೊರರಾಜ್ಯ, ಹೊರ ಜಿಲ್ಲೆ ಯಿಂದಲೂ ಯಾರೂ ಬಂದಿಲ್ಲ. ಅವರು ಕಲ್ಲು ಹೊಡೆದಿದ್ದಾರೆ ಅಂತ ಇವರು ಕಲ್ಲು ಹೊಡೆದಿದ್ದಾರೆ. ಸೆಲೆಕ್ಟಿವ್‌ ಆಗಿ ಅಂತ ಪೊಲೀಸರಿಗೆ ಏನೂ ಹೊಡೆದಿಲ್ಲ. ಸಾಮೂಹಿಕ ಕಲ್ಲು ತೂರಾಟದಲ್ಲಿ ಪೊಲೀಸರ ಮೇಲೆ ಕಲ್ಲು ಬಿದ್ದಿದೆ.
-ಡಾ.ಜಿ.ಪರಮೇಶ್ವರ್‌, ಗೃಹ ಸಚಿವ

ಶಿವಮೊಗ್ಗ ಗಲಾಟೆ ಸಣ್ಣ ಗಲಾಟೆಯಲ್ಲ: ಬೊಮ್ಮಾಯಿ
ಮಂಡ್ಯ: ಶಿವಮೊಗ್ಗದಲ್ಲಿ ನಡೆದ ಗಲಾಟೆ ಗಂಭೀರವಾಗಿದ್ದು, ಸಣ್ಣ ಗಲಾಟೆಯಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮೇಶ್ವರ್‌ ಅವರು ಈ ರೀತಿ ಮೊದಲನೇ ಬಾರಿಗೆ ಹೇಳಿಕೆ ನೀಡುತ್ತಿಲ್ಲ. ಗಂಭೀರವಾದ ಘಟನೆ ನಡೆದರೂ ಸಣ್ಣ ಘಟನೆ ಎಂದು ಹೇಳುವ ಪ್ರವೃತ್ತಿ ಇದೆ. ಕೋಮು ಗಲಭೆ ಸೃಷ್ಟಿ ಮಾಡುವ ಕುಮ್ಮಕ್ಕು ಕೊಡುವ ಶಕ್ತಿಗಳನ್ನು ಬಂಧಿಸಿ ಜೈಲಿಗೆ ಕಳಿಹಿಸಬೇಕು. ಆದರೆ ಈ ರೀತಿ ಹೇಳಿಕೆ ಕೊಟ್ಟರೆ ಇನ್ನೂ ಪ್ರೋತ್ಸಾಹ ಕೊಟ್ಟಂತೆ ಆಗುತ್ತೆ. ಈ ಘಟನೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ ಎಂದರು.

Advertisement

ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ: ಮಧು
ಬೆಂಗಳೂರು: ಶಿವಮೊಗ್ಗ ಹೊರವಲಯದ ರಾಗಿಗುಡ್ಡ ಪ್ರದೇಶದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಪೋಲಿಸರು ಕಾನೂನು ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಪರಿಸ್ಥಿತಿ ಈಗ ಶಾಂತವಾಗಿದೆ.ಇದು ಹಿಂದೂ-ಮುಸ್ಲಿಂ ಗಲಾಟೆ ಅಲ್ಲ. ಪ್ರಚೋದನೆಯಿಂದ ನಡೆದಿದೆ. ಶಾಂತಿಯನ್ನು ಕಾಪಾಡಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ.

ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿಗಳಿಗೆ ಕಿಡಿಗೇಡಿಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ರಾಗಿಗುಡ್ಡದಲ್ಲಿ ಮಾತ್ರ ಈ ಘಟನೆ ನಡೆದಿದೆ: ಕೆಲವರು ಮನೆಗೆ ನುಗಿದ್ದಾರೆ ಎಂಬ ಮಾಹಿತಿ ಇದೆ.ಘಟನೆಯಲ್ಲಿ 12 ಜನರಿಗೆ ಗಾಯವಾಗಿದೆ. ಜತೆಗೆ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 50 ಜನರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದೆ. ರಾಗಿಗುಡ್ಡದಲ್ಲಿ ಮಾತ್ರ ಈ ಘಟನೆ ನಡೆದಿದೆ ವೈಯಕ್ತಿಕ ಸ್ವಾರ್ಥಕ್ಕಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ ಎಂದರು.

ರಾಗಿಗುಡ್ಡದಲ್ಲಿ ಅನೇಕ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ರೀತಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಯಾರೂ ನಡೆಸಬಾರದು. ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಶಾಂತಿಯುತವಾಗಿ ನಡೆದಿದೆ. ಆದರೂ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಈ ರೀತಿ ನಡೆದಿರುವುದು ದುರಂತ. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಬೇಕು.
-ಬಿ.ವೈ.ರಾಘವೇಂದ್ರ, ಸಂಸದ

ಮೆರವಣಿಗೆ ಹೋಗುವ ಸಂದರ್ಭದಲ್ಲಿ ಕೈಯಲ್ಲಿ ತಲ್ವಾರ್‌ ಹಿಡಿದುಕೊಂಡು ಹೋಗುತ್ತಾರೆ. ಯಾರಿಗೆ ಎಚ್ಚರ ಅದು? ಹಿಂದೂ ಸಮಾಜಕ್ಕಾ? ಶಿವಮೊಗ್ಗ ನಗರದಲ್ಲಿ ದೊಡ್ಡ ದೊಡ್ಡ ತಲ್ವಾರ್‌ ನೇತು ಹಾಕಿದ್ದಾರೆ. ಕೋಲಾರದಲ್ಲೂ ಹಾಕಿದ್ದರು. ಆದರೆ ಅಲ್ಲಿನ ಸಂಸದರ ಎಚ್ಚರಿಕೆ ಬಳಿಕ ತೆಗೆದರು. ಅದು ಗೊತ್ತಿದ್ದರೂ ಇಲ್ಲಿ ದೊಡ್ಡ ಖಡ್ಗ ಹಾಕಲು ಏಕೆ ಬಿಟ್ಟರು? ಪೊಲೀಸರು ಸರ್ಕಾರಕ್ಕೆ ಹೆದರಿ ಹೋಗಿದ್ದಾರೆ. ತಲ್ವಾರ್‌ಗೆ ತಲ್ವಾರ್‌ ಹಿಡಿದು ಉತ್ತರ ಕೊಡಲು ಹಿಂದೂ ಸಮಾಜಕ್ಕೆ ಬರುತ್ತದೆ. ಇದು ಸಿಎಂ, ಗೃಹ ಮಂತ್ರಿ ಹಾಗೂ ಮುಸ್ಲಿಮರಿಗೆ ಎಚ್ಚರಿಕೆ.
-ಕೆ.ಎಸ್‌.ಈಶ್ವರಪ್ಪ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next