Advertisement

ಬಿಎಸ್‌ವೈ, ಈಶ್ವರಪ್ಪ, ಡಿಎಚ್‌ಎಸ್‌ ರಾಜಕೀಯ ಇತಿಶ್ರೀ?

11:15 PM Apr 14, 2022 | Team Udayavani |

ಶಿವಮೊಗ್ಗ: ಕೆ.ಎಸ್‌. ಈಶ್ವರಪ್ಪ ಅವರ ರಾಜೀನಾಮೆಯಿಂದಾಗಿ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದ  ತ್ರಿಮೂರ್ತಿಗಳ ಅಧಿಕಾರ ರಾಜಕಾರಣದ  ಶಕೆ ಮುಗಿಯಿತೇ ಎಂಬ ಪ್ರಶ್ನೆ ಮೂಡಲಾರಂಭಿಸಿದೆ.

Advertisement

75ರ ಹೊಸ್ತಿಲಲ್ಲಿರುವ ಬಿ.ಎಸ್‌. ಯಡಿಯೂರಪ್ಪ, ಕೆ.ಎಸ್‌. ಈಶ್ವರಪ್ಪ ಹಾಗೂ ಡಿ.ಎಚ್‌. ಶಂಕರಮೂರ್ತಿ ಅವರಿಗೆ ಇನ್ನು ರಾಜಕೀಯದಲ್ಲಿ ಯಾವುದೇ ಪ್ರಮುಖ ಅಧಿಕಾರ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಸ್ಥಾನಮಾನ ನೀಡಬಾರದು ಎಂಬ ನಿಯಮವಿದೆ. ಈಗಾಗಲೇ  ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಡಿ.ಎಚ್‌.ಶಂಕರಮೂರ್ತಿ ಚುನಾವಣೆ ರಾಜಕಾರಣದಿಂದ ದೂರ ಉಳಿದಿದ್ದಾರೆ.  ಸಚಿವ ಸ್ಥಾನದಿಂದ ಕೆಳಗಿಳಿಯುತ್ತಿರುವ ಈಶ್ವರಪ್ಪ ಅವರಿಗೆ ಈಗ 74 ವರ್ಷ. ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ 75 ವರ್ಷ ಪೂರೈಸುತ್ತಾರೆ. ಪಕ್ಷದ ನಿಯಮದ ಪ್ರಕಾರ ಟಿಕೆಟ್‌ ವಂಚಿತರಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ.

ಬಸವರಾಜ ಬೊಮ್ಮಾಯಿ ಸಿಎಂ ಆದಾಗ ಈಶ್ವರಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಚರ್ಚೆ ಜೋರಾಗಿತ್ತಾದರೂ  ಕೊನೆ ಕ್ಷಣದಲ್ಲಿ ಸಂಪುಟ ಸೇರಿ ಮತ್ತೆ ಅದೇ ಖಾತೆಯನ್ನು ಪಡೆದುಕೊಂಡರು. ಆದರೆ ಈಗ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ ತಳುಕು ಹಾಕಿಕೊಂಡ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಈಶ್ವರಪ್ಪ ಮತ್ತೆ ಸಂಪುಟ ಸೇರುವುದು ಅನುಮಾನ ಎಂದೇ ಪಕ್ಷದ ಮೂಲಗಳು ತಿಳಿಸುತ್ತವೆ.

ಬಿಜೆಪಿಯ ತ್ರಿಮೂರ್ತಿಗಳು ಅಧಿಕಾರ ರಾಜಕಾರಣದಿಂದ ದೂರವಾದರೂ ಅವರ ಮಕ್ಕಳು ಮುಂಚೂಣಿಗೆ ಬರಲಿದ್ದಾರೆ.  ಬಿ.ಎಸ್‌.ಯಡಿಯೂರಪ್ಪ ಪುತ್ರರಾದ ಬಿ.ವೈ.ರಾಘವೇಂದ್ರ  ಸಂಸದರಾಗಿದ್ದು, ಬಿ.ವೈ.ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರಾಗಿದ್ದಾರೆ. ಡಿ.ಎಚ್‌. ಶಂಕರಮೂರ್ತಿ ಅವರ ಪುತ್ರ ಡಿ.ಎಸ್‌.ಅರುಣ್‌ ಆರ್ಯವೈಶ್ಯ ನಿಗಮದ ಅಧ್ಯಕ್ಷರಾಗಿದ್ದರು. ಈಗ ವಿಧಾನ ಪರಿಷತ್‌ ಪ್ರವೇಶ ಮಾಡಿದ್ದಾರೆ. ಆದರೆ  ಈಶ್ವರಪ್ಪರ ಪುತ್ರ ಇನ್ನೂ ಮುನ್ನೆಲೆಗೆ ಬಂದಿಲ್ಲ. ಒಮ್ಮೆ ಜಿ.ಪಂ. ಸದಸ್ಯರಾಗಿರುವ ಕೆ.ಇ. ಕಾಂತೇಶ್‌ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈಶ್ವರಪ್ಪ ಬಳಿಕ ಈ ಕ್ಷೇತ್ರದ ಟಿಕೆಟ್‌ಗೆ ಡಜನ್‌ಗಟ್ಟಲೆ ಆಕಾಂಕ್ಷಿಗಳಿದ್ದು ಕಾಂತೇಶ್‌ ಅವರ ಹಾದಿ ಸಹ ಅಷ್ಟು ಸಲೀಸಾಗಿಲ್ಲ ಎನ್ನಲಾಗಿದೆ.

Advertisement

ಮುಳ್ಳಿನ ಹಾದಿ :

ಕಾಂಗ್ರೆಸ್‌ನಿಂದ ಬೇಲಿಗೂಟ ನಿಲ್ಲಿಸಿದರೂ ಮತ ಹಾಕುತ್ತಾರೆ ಎಂಬಂತಿದ್ದ ಕಾಲದಲ್ಲಿ ಶಿವಮೊಗ್ಗದ ತ್ರಿಮೂರ್ತಿಗಳು ಪಕ್ಷ ಸಂಘಟನೆಗೆ ಶ್ರಮಿಸಿ ಬಿಜೆಪಿ ಹೆಸರೇ ಗೊತ್ತಿಲ್ಲದಂತಹ ಸಂದರ್ಭ ಜನರ ಸಮಸ್ಯೆಗಳನ್ನು ಎತ್ತಿಕೊಂಡು ಹೋರಾಟ ರೂಪಿಸಿ ಸೈಕಲ್‌ನಲ್ಲಿ ಊರೂರು ಸುತ್ತಿ ಪಕ್ಷ ಸಂಘಟನೆ ಮಾಡಿದ್ದರು. ರಾಜಕೀಯದ ಕೊನೆಗಾಲದಲ್ಲಿ ಬಿಎಸ್‌ವೈ  ನಿರ್ಗಮನವಾಗಿತ್ತು. ಅದೇ ರೀತಿ ಕೆ.ಎಸ್‌. ಈಶ್ವರಪ್ಪ ಅವರ ನಿರ್ಗಮನವೂ ಆಗಿದೆ.

 

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next