ಶಿವಮೊಗ್ಗ: ಕಾಂಗ್ರೆಸ್, ಬಿಜೆಪಿ ಪ್ರಭಾವಿ ನಾಯಕರು ರಾಜಕೀಯ ನಿವೃತ್ತಿ ಘೋಷಿಸುವ ಮೂಲಕ ರಾಜ್ಯ ರಾಜಕೀಯದ ಶಕ್ತಿ ಕೇಂದ್ರವಾಗಿದ್ದ ಶಿವಮೊಗ್ಗ ಜಿಲ್ಲೆ ಇದೀಗ ಅಕ್ಷರಶಃ ಅನಾಥವಾಗಿದೆ.
ನಾಲ್ವರು ಸಿಎಂಗಳನ್ನು ಕೊಟ್ಟ ಈ ಜಿಲ್ಲೆಯಲ್ಲಿ ಮಾಸ್ ಲೀಡರ್‌ಗಳ ಕೊರತೆ ಎದ್ದು ಕಾಣುತ್ತಿದೆ. ಕಡಿದಾಳ್ ಮಂಜಪ್ಪ, ಜೆ.ಎಚ್.ಪಟೇಲ್, ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ ಇದೇ ಜಿಲ್ಲೆಯಿಂದಲೇ ಸಿಎಂ ಆಗಿದ್ದರು. ಶಾಂತವೇರಿ ಗೋಪಾಲಗೌಡ, ಕಾಗೋಡು ತಿಮ್ಮಪ್ಪ ಅವರಂಥ ಅನೇಕರು ತಮ್ಮ ಹೋರಾಟಗಳ ಮೂಲಕವೇ ಶಿವಮೊಗ್ಗ ಜಿಲ್ಲೆಗೆ ಹೆಸರು ತಂದುಕೊಟ್ಟಿದ್ದರು. ರಾಜ್ಯದ ಮಾಸ್ ಲೀಡರ್‌ಗಳೆಂದೇ ಖ್ಯಾತಿ ಪಡೆದಿದ್ದ ಶಿವಮೊಗ್ಗ ಜಿಲ್ಲೆಯ ಸಾರೆಕೊಪ್ಪ ಬಂಗಾರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ನಂತರ ಜಿಲ್ಲೆಯಲ್ಲಿ ಅಂತ ಒಬ್ಬ ನಾಯಕನ ಉದಯವಾಗಿಲ್ಲ. ಈಗ ಕಾಂಗ್ರೆಸ್, ಬಿಜೆಪಿಯಲ್ಲಿ ಪ್ರಭಾವಿ ಹಿರಿಯ ನಾಯಕರೇ ರಾಜಕೀಯ ನಿವೃತ್ತಿ ಘೋಷಿಸಿದ ನಂತರ ಜಿಲ್ಲೆ ಬಡವಾಗಿದೆ.
ಸೊರಬದಲ್ಲಿ ಸೋಲಿಲ್ಲದ ಸರದಾರನಾಗಿದ್ದ ಸಾರೆಕೊಪ್ಪ ಬಂಗಾರಪ್ಪ ಇಡೀ ರಾಜ್ಯ ರಾಜಕೀಯವನ್ನು ನಿಯಂತ್ರಿಸುವ ಶಕ್ತಿ ಹೊಂದಿದ್ದರು. ಹಿಂದುಳಿದ ವರ್ಗಗಳ ಪ್ರಶ್ನಾತೀತ ನಾಯಕರಾಗಿದ್ದ ಅವರು ಹಲವು ಪಕ್ಷಗಳನ್ನು ಬದಲಾಯಿಸಿದರೂ ಸೊರಬ ಜನ ಕೈಬಿಟ್ಟಿರಲಿಲ್ಲ. ನಾಮಪತ್ರ ಸಲ್ಲಿಸಿ ರಾಜ್ಯ ಪ್ರವಾಸ ಹೊರಟರೆಂದರೆ ಜನರೇ ಗೆಲ್ಲಿಸಿಕೊಂಡು ಬರುತ್ತಿದ್ದರು. ಜನ ಬೆಂಬಲದೊಂದಿಗೆ ಮುಂದೆ ರಾಜ್ಯದ ಮುಖ್ಯಮಂತ್ರಿಯಾಗಿಯೂ ತಾವೊಬ್ಬ ಮಾಸ್ ಲೀಡರ್ ಎಂದು ಸಾಬೀತುಪಡಿಸಿದ್ದರು. ಬಂಗಾರಪ್ಪ ಅವರ ಯೋಜನೆಗಳು ಇನ್ನೂ ಜನಮಾನಸದಲ್ಲಿ ಉಳಿದಿವೆ.
ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಬಿ.ಎಸ್. ಯಡಿಯೂರಪ್ಪ ಅವರು ಹೋರಾಟ, ಧರಣಿಗಳಿಂದಲೇ ರಾಜಕೀಯ ಉತ್ತುಂಗಕ್ಕೆ ಏರಿದರು. ನಂತರದ ಬೆಳವಣಿಗೆ ಯಲ್ಲಿ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕನಾಗಿ ಬೆಳೆದ ಅವರು ನಾಲ್ಕು ಬಾರಿ ಸಿಎಂ ಆಗಿ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿಗೆ ಬಾಗಿಲು ತೆರೆಸಿದರು. ರಾಜಕೀಯ ಚರ್ಚೆಗಳಲ್ಲಿ ಬಂಗಾರಪ್ಪ, ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ, ಡಿ.ಎಚ್.ಶಂಕರಮೂರ್ತಿ, ಕೆ.ಎಸ್. ಈಶ್ವರಪ್ಪ, ಶಾಂತವೇರಿ ಗೋಪಾಲಗೌಡರ ಹೆಸರುಗಳು ಬಾರದೆ ಮುಕ್ತಾಯವಾಗದು. ಅಷ್ಟರ ಮಟ್ಟಿಗೆ ಶಿವಮೊಗ್ಗ ರಾಜಕೀಯ, ನಾಯಕರು ಜನಮಾನಸದಲ್ಲಿ ಹತ್ತಿರವಾಗಿದ್ದರು.
ಈ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ, ಕೆ.ಎಸ್.ಈಶ್ವರಪ್ಪ ಕಣದಿಂದ ಹಿಂದೆ ಸರಿದಿದ್ದಾರೆ. ವಿಧಾನಸೌಧದಲ್ಲಿ ಇರಬೇಕಾದ ಘಟಾನುಘಟಿ ನಾಯಕರೆಲ್ಲ ನಿವೃತ್ತಿಯಾಗಿರುವುದು ಶಿವಮೊಗ್ಗ ರಾಜಕೀಯಕ್ಕೆ ಮಂಕು ಕವಿದಿದೆ. ಕಿಮ್ಮನೆ ರತ್ನಾಕರ್ ಸೋತು ನಿರ್ಗಮಿಸಿದ್ದಾರೆ. ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಮಧು ಬಂಗಾರಪ್ಪ. ಕುಮಾರ್ ಬಂಗಾರಪ್ಪ, ಬಿ.ವೈ.ವಿಜಯೇಂದ್ರ, ಶಾರದಾ ಪೂರ್ಯಾನಾಯ್ಕ, ಬಿ.ಕೆ.ಸಂಗಮೇಶ್ ಹೆಸರುಗಳು ರಾಜ್ಯದ ಜನರಿಗೆ ಪರಿಚಿತವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಈ ನಾಯಕರು ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕೀಯವಾಗಿ ಎಷ್ಟು ಶಕ್ತಿಯುತವಾಗಿ ಮಾಡುತ್ತಾರೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ
.
-ಶರತ್ ಭದ್ರಾವತಿ