ಶಿವಮೊಗ್ಗ: ಸರ್ಕಾರದ ನಿರೀಕ್ಷೆ ಹಾಗೂ ವೇಗಕ್ಕೆ ತಕ್ಕಂತೆ ಎಲ್ಲಾ ಇಲಾಖಾ ಅಧಿಕಾರಿಗಳು ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ಗರಿಷ್ಟ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಶಿಸ್ತುಕ್ರಮದ ಎಚ್ಚರಿಕೆ: ಮುಖ್ಯಮಂತ್ರಿ ಅವರ ಜಿಲ್ಲೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳ ಜವಾಬ್ದಾರಿಯೂ ಹೆಚ್ಚಾಗಿದೆ. ಅಭಿವೃದ್ಧಿ ಕಾರ್ಯದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ನಂಬರ್ ಒನ್ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಜನರ ಅಹವಾಲುಗಳಿಗೆ ಸರಿಯಾಗಿ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕಳೆದ ಎರಡು ದಿನಗಳಲ್ಲಿ ಜಿಲ್ಲೆಯ ಹಲವು ತಾಲೂಕುಗಳಿಗೆ ಭೇಟಿ ನೀಡಿದ್ದು, ಇಲ್ಲಿನ ಸಮಸ್ಯೆಗಳ ಅರಿವಾಗಿದೆ. ಅರಣ್ಯ ಇಲಾಖೆ ಕಾಯ್ದೆಯ ವ್ಯಾಪ್ತಿಯಲ್ಲಿ ಜನರಿಗೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕು. ಜನರ ಅರ್ಜಿಗಳನ್ನು ತಿಂಗಳುಗಟ್ಟಲೆ ವಿಲೇವಾರಿ ಮಾಡದೆ ಬಾಕಿಯಿರಿಸುವ ಪರಿಪಾಠ ಸಲ್ಲದು. ವಿದ್ಯುತ್ ಸಮಸ್ಯೆ ಹಾಗೂ ರಸ್ತೆ ಸಂಪರ್ಕ ಕಲ್ಪಿಸುವ ಕುರಿತಾದ ಅಹವಾಲುಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕಾಗಿದೆ ಎಂದು ಅವರು ಹೇಳಿದರು.
ವಾಟ್ಸ್ ಆ್ಯಪ್ ಗ್ರೂಪ್ ರಚನೆ: ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ವಾಟ್ಸ್ ಆ್ಯಪ್ ಗ್ರೂಪ್ ಈಗಾಗಲೇ ರಚಿಸಲಾಗಿದ್ದು, ಇನ್ನು ಮುಂದೆ ಇಲಾಖಾ ಸಮಸ್ಯೆಗಳು, ಆಗಬೇಕಾದ ಕೆಲಸ ಕಾರ್ಯಗಳ ಕುರಿತು ಮಾತ್ರವಲ್ಲದೆ ಸಾರ್ವಜನಿಕ ಅಹವಾಲುಗಳನ್ನು ಅದರಲ್ಲಿ ಹಾಕಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಅದಕ್ಕೆ ಸ್ಪಂದಿಸಿ ಅಲ್ಲಿಯೇ ಸಂದೇಶ ಹಾಕಬೇಕು. ಶೀಘ್ರ ಸಂವಹನಕ್ಕೆ ವಾಟ್ಸಾಪ್ ಅತ್ಯಂತ ಉತ್ತಮ ಮಾರ್ಗವಾಗಿದ್ದು, ಅದನ್ನು ಗರಿಷ್ಟ ಬಳಕೆ ಮಾಡಬೇಕು. ಯಾವುದೇ ಅಧಿಕಾರಿಗಳು ವಾಟ್ಸ್ ಆ್ಯಪ್ ಸಂದೇಶಗಳನ್ನು ನಿರ್ಲಕ್ಷಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಪೊಲೀಸ್ ವರಿಷ್ಠಾಧಿಕಾರಿ ಡಾ| ಅಶ್ವಿನಿ, ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಅಪರ ಜಿಲ್ಲಾಧಿಕಾರಿ ಅನುರಾಧಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.