Advertisement

ಸಮರ್ಪಕ ನೆರೆ ಹಾನಿ ಸಮೀಕ್ಷೆಗೆ ಸೂಚನೆ

05:29 PM Aug 23, 2019 | Naveen |

ಶಿವಮೊಗ್ಗ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆಯಿಂದ ಉಂಟಾಗಿರುವ ಹಾನಿಯ ಕುರಿತಾಗಿ ಸಮರ್ಪಕವಾಗಿ ಸಮೀಕ್ಷೆಯನ್ನು ನಡೆಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿ ಹೊಸ ಸಭಾಂಗಣದಲ್ಲಿ ಪ್ರವಾಹ ಪರಿಹಾರ ಕ್ರಮಗಳ ಕುರಿತಾಗಿ ಕರೆಯಲಾಗಿದ್ದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನೆರೆ ಪರಿಹಾರ ಕಾರ್ಯಗಳಿಗಾಗಿ ಪ್ರತಿ ತಹಶೀಲ್ದಾರ್‌ ಖಾತೆಗೆ ತಲಾ 50ಲಕ್ಷ ರೂ. ಒಂದೆರಡು ದಿನಗಳಲ್ಲಿ ಜಮಾ ಮಾಡಲಾಗುವುದು ಎಂದು ಅವರು ಹೇಳಿದರು.

ಪರಿಹಾರ ಕಾರ್ಯ ತ್ವರಿತಗೊಳಿಸಲು ಸೂಚನೆ: ಅತಿವೃಷ್ಟಿ ಮತ್ತು ನೆರೆಯಿಂದ ಹಾನಿಗೀಡಾಗಿರುವ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾಗೂ ಪೂರ್ಣ ಹಾಗೂ ಭಾಗಶಃ ಹಾನಿಗೀಡಾಗಿರುವ ಮನೆಗಳಿಗೆ ಪರಿಹಾರ ನೀಡುವ ಕಾರ್ಯವನ್ನು ಇನ್ನಷ್ಟು ತ್ವರಿತಗೊಳಿಸಬೇಕು. ಹಾನಿ ಸಮೀಕ್ಷೆಯನ್ನು ಸರಿಯಾಗಿ ಮಾಡಬೇಕು. ಯಾರಿಗೂ ಅನ್ಯಾಯವಾಗದಂತೆ ಹಾನಿಗೀಡಾದ ಪ್ರತಿಯೊಬ್ಬರಿಗೂ ಸಮರ್ಪಕ ಪರಿಹಾರ ಸಿಗುವಂತೆ ಖಾತ್ರಿಪಡಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಸೂಚನೆ ನೀಡಿದರು.

ತೀರ್ಥಹಳ್ಳಿ ತಾಲೂಕಿನಲ್ಲಿ ನೆರೆ ಹಾವಳಿಯಿಂದ ಹಾನಿಗೀಡಾಗಿರುವ ಮನೆಗಳ ಮತ್ತು ಕೃಷಿ ಮತ್ತು ತೋಟಗಾರಿಕಾ ಪ್ರದೇಶಗಳ ಬಗ್ಗೆ ಸರಿಯಾಗಿ ಸಮೀಕ್ಷೆ ನಡೆಸಲಾಗಿಲ್ಲ. ತೀರ್ಥಹಳ್ಳಿಯಲ್ಲಿ ಕೆಲವು ಮನೆಗಳು ಸಂಪೂರ್ಣ ಕುಸಿದಿದ್ದರೂ ಅದನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿದೆ ಎಂದು ಶಾಸಕ ಅರಗ ಜ್ಞಾನೇಂದ್ರ ಅವರು ಹೇಳಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು, ಸಮರ್ಪಕ ಮಾಹಿತಿಯನ್ನು ಒದಗಿಸದ ಕಂದಾಯ ಅಧಿಕಾರಿಗೆ ನೊಟೀಸ್‌ ಜಾರಿಗೊಳಿಸುವಂತೆ ಹಾಗೂ ತಕ್ಷಣ ಸಮರ್ಪಕ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದರು.

ಶಾಲೆ ಸಮೀಕ್ಷೆ ಖಾತ್ರಿಪಡಿಸಿ: ತೀರ್ಥಹಳ್ಳಿ ತಾಲೂಕಿನಲ್ಲಿ ಅತಿವೃಷ್ಟಿ ಬಳಿಕ ಶಾಲಾ ಕಟ್ಟಡಗಳ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿ ಪ್ರಮಾಣಪತ್ರ ಒದಗಿಸುವಂತೆ ಸೂಚನೆ ನೀಡಿದ್ದರೂ, ಇನ್ನೂ ಪರಿಶೀಲನೆ ನಡೆಸಿಲ್ಲ ಎಂದು ಶಾಸಕರು ತಿಳಿಸಿದರು. ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಶಾಸಕ ಹರತಾಳು ಹಾಲಪ್ಪ ಅವರು ಮಾತನಾಡಿ, ಹಲವು ರೈತರ ಗದ್ದೆಗಳಲ್ಲಿ ಮರಳು ಮತ್ತು ಮಣ್ಣು ತುಂಬಿ ಬೆಳೆ ಹಾನಿಯಾಗಿದೆ. ಅದನ್ನು ತೆರವುಗೊಳಿಸಲು ರೈತರಿಗೆ ತಕ್ಷಣ ಕನಿಷ್ಟ 10 ಸಾವಿರ ರೂ. ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು.

ಕೃಷಿ ಭೂಮಿಯಲ್ಲಿ ಕನಿಷ್ಟ 3 ಇಂಚಿನಷ್ಟು ಮರಳು ಮತ್ತು ಮಣ್ಣು ತುಂಬಿದ್ದರೆ ಹೆಕ್ಟೇರ್‌ಗೆ 12,200ರೂ. ಹಾಗೂ ಅದಕ್ಕಿಂತ ಹೆಚ್ಚಿನ ಹಾನಿ ಉಂಟಾದರೆ ಹೆಕ್ಟೇರ್‌ಗೆ 35500ರೂ. ಪರಿಹಾರ ನೀಡಲಾಗುವುದು. ಜಿಲ್ಲೆಯಲ್ಲಿ 903ಹೆಕ್ಟೇರ್‌ ಕೃಷಿ ಭೂಮಿಯಲ್ಲಿ 3 ಇಂಚಿನಷ್ಟು ಹೂಳು ತುಂಬಿದ್ದು, ಪರಿಹಾರ ಒದಗಿಸಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ್‌ ತಿಳಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೆರೆಯಿಂದ ಪೀಡಿತವಾದ 4573 ಮನೆಗಳನ್ನು ಗುರುತಿಸಲಾಗಿದ್ದು, ಪರಿಹಾರಕ್ಕೆ ಕೋರಿ ತಹಶೀಲ್ದಾರ್‌ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಕೆಲವು ಮನೆಗಳ ಸಮೀಕ್ಷೆ ಕಾರ್ಯ ನಡೆಸಬೇಕಾಗಿದೆ ಎಂದು ಆಯುಕ್ತೆ ಚಾರುಲತಾ ಸೋಮಲ್ ಅವರು ತಿಳಿಸಿದರು.

ಶಾಸಕರಾದ ಅಶೋಕ ನಾಯ್ಕ, ರುದ್ರೇಗೌಡ, ಆಯನೂರು ಮಂಜುನಾಥ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೈಶಾಲಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next