Advertisement

ಅನಧಿಕೃತ ಮರಳು ಕ್ವಾರಿ ಸ್ಥಗಿತಕ್ಕೆ ಸೂಚನೆ

04:55 PM Jan 31, 2020 | Naveen |

ಶಿವಮೊಗ್ಗ: ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಮರಳು ಕ್ವಾರಿಗಳನ್ನು ಸ್ಥಗಿತಗೊಳಿಸಲು ಹಾಗೂ ಅಧಿಕೃತವಾಗಿ ಪರವಾನಗಿ ಹೊಂದಿದ್ದು, ಸ್ಥಗಿತಗೊಳಿಸಿರುವ ಕ್ವಾರಿಗಳನ್ನು ಕೂಡಲೇ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಅವರು ಜಿಲ್ಲೆಯ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ಸೂಚಿಸಿದರು.

Advertisement

ಗುರುವಾರ ತಮ್ಮ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಗಣಿಗಾರಿಕೆ ಉಸ್ತುವಾರಿ ಸಮಿತಿ ಸಭೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಒಂದೇ ಪರವಾನಗಿ ಹೊಂದಿದ್ದು, ಅನೇಕ ಲಾರಿಗಳಲ್ಲಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬರುತ್ತಿವೆ. ಈ ಸಂಬಂಧ ಸಕ್ಷಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಯಂತ್ರಗಳು, ವಿತರಿಸಲಾದ ಲಾರಿಗಳು ಮತ್ತಿತರ ದಾಖಲಾತಿಗಳನ್ನು ಪರಿಶೀಲಿಸುವಂತೆ ಹಾಗೂ ನಿಯಮ ಉಲ್ಲಂಘಿಸಿದ ಪ್ರಕರಣಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಮೊಕದ್ದಮೆ ದಾಖಲಿಸಿ, ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರವಾನಗಿ ಮೀರಿದ ನಂತರವೂ ಮರಳನ್ನು ವ್ಯಾವಹಾರಿಕ ಲಾಭಕ್ಕಾಗಿ ನಗರದ ಕೆಲವೆಡೆ ನಿಲ್ಲಿಸಿಕೊಂಡು ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವ ಬಗ್ಗೆಯೂ ದೂರುಗಳಿದ್ದು ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ದಂಡ ವಿಧಿಸಲಾಗುವುದು. ಅಕ್ರಮ ಮರಳು ಕ್ವಾರಿ ಹಾಗೂ ಮರಳು ದಂಧೆಯ ನಿಯಂತ್ರಣಕ್ಕೆ ನೇಮಿಸಲಾದ ಮೇಲುಸ್ತುವಾರಿ ತಂಡದ ಅಧಿಕಾರಿಗಳು ಕಾಲ- ಕಾಲಕ್ಕೆ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಬೇಕು ಎಂದ ಅವರು, ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಕ್ರಮವನ್ನು ಸಹಿಸಿಕೊಳ್ಳಲಾಗುವುದಿಲ್ಲ. ಅಂತಹ ಅಧಿಕಾರಿಗಳ ವಿರುದ್ಧವೂ ಕ್ರಮ ಅನಿವಾರ್ಯವಾಗಲಿದೆ. ಈ ಕಾರ್ಯದಲ್ಲಿ ಪೊಲೀಸ್‌ ಮತ್ತು ಕಂದಾಯ ಇಲಾಖಾಧಿಕಾರಿಗಳ ನಡುವೆ ಸಮನ್ವಯತೆ ಇರಬೇಕಾದುದು ಅಗತ್ಯ ಎಂದರು.

ಜಿಲ್ಲೆಯಲ್ಲಿ ಈ ಹಿಂದೆ ಕ್ರಷರ್‌ಗಳನ್ನು ಆರಂಭಿಸಲು ಅನುಮತಿ ನೀಡಿದ್ದು,
ಅವಧಿ ಮುಕ್ತಾಯವಾಗಿರುವ ಕ್ರಷರ್‌ ಗಳ ಪರವಾನಗಿದಾರರು ಪರವಾನಗಿ ನವೀಕರಿಸಿಕೊಡುವಂತೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪರವಾನಗಿಯನ್ನು ನವೀಕರಿಸುವ ಮೊದಲು ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ರಶ್ಮಿ ಅವರಿಗೆ ಸೂಚಿಸಿದರು. ಈ ಕ್ರಷರ್‌ಗಳು ಆರಂಭಿಸುವ ಸ್ಥಳಗಳು ಕನಿಷ್ಟ 25ಮನೆಗಳಿದ್ದಲ್ಲಿ ಪ್ರತಿ ಮನೆಯ ಮಾಲೀಕರಿಂದ, 50ಕ್ಕಿಂತ ಕಡಿಮೆ ಮನೆಗಳಿರುವಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. 50ಕ್ಕೂ ಹೆಚ್ಚಿನ ಮನೆಗಳಿರುವ ಜನವಸತಿ ಪ್ರದೇಶವಾಗಿದ್ದಲ್ಲಿ ಪರವಾನಗಿಯನ್ನು ನಿರಾಕರಿಸುವಂತೆ ಸೂಚಿಸಿದ ಅವರು, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪತ್ರ ಪಡೆದು ನಂತರ ಸಭೆಯಲ್ಲಿ ಮಂಡಿಸಿ ಅನುಮತಿ ನೀಡಬಹುದಾಗಿದೆ. ಪ್ರಸ್ತುತ ಸಭೆಗೆ ಮಂಡಿಸಲಾಗಿರುವ ಪರವಾನಗಿ ನವೀಕರಿಸುವ ಕಡತಗಳ ಸಂಪೂರ್ಣ ವಿವರಗಳೊಂದಿಗೆ ಫೆ. 10ರಂದು ಸಭೆಗೆ ಮಂಡಿಸುವಂತೆ ಸಂಬಂಧಿಸಿದ
ಅಧಿಕಾರಿಗಳಿಗೆ ಸೂಚಿಸಿದರು. ಸೊರಬ ತಾಲೂಕಿನ ಕೆಲವು ಸ್ಥಳಗಳಲ್ಲಿ ಹೊಲದಲ್ಲಿನ ಮಣ್ಣನ್ನು ತೆಗೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಅಂತಹ ಜಮೀನುಗಳ ಮಾಲೀಕರು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಸರ್ಕಾರಿ ಕಟ್ಟಡಗಳಿಗೆ ಕಳಪೆ ಗುಣಮಟ್ಟದ ಮರಳನ್ನು ಬಳಸುತ್ತಿದ್ದಲ್ಲಿ ಅಂತಹ ಗುತ್ತಿಗೆದಾರರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾಗರ ತಾಲೂಕಿನ ಆನಂದಪುರದಲ್ಲಿ ಜಂಬಿಟ್ಟಿಗೆ ಕ್ವಾರಿಗಳನ್ನು ನಡೆಸುತ್ತಿರುವ ಕೆಲವರು ಅನಧಿಕೃತವಾಗಿ ಕ್ವಾರಿಗಳನ್ನು ನಡೆಸುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಅನೇಕ ವ್ಯಕ್ತಿಗಳ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದೆ. ಅನಧಿಕೃತ ಕ್ವಾರಿ ನಡೆಸುವವರ ವಿರುದ್ಧ ಇನ್ನಷ್ಟು ದೂರುಗಳನ್ನು ದಾಖಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಜಿಪಂ ಮುಖ್ಯ ಕಾರ್ಯ
ನಿರ್ವಾಹಕ ಅಧಿಕಾರಿ ಎಂ.ಎಲ್‌. ವೈಶಾಲಿ, ಉಪ ವಿಭಾಗಾಧಿಕಾರಿ ಟಿ.ವಿ. ಪ್ರಕಾಶ್‌, ನಾಗರಾಜ್‌ ನಾಯ್ಕ, ರಶ್ಮಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next