Advertisement

ನರೇಗಾ ಕಾಮಗಾರಿ ಚುರುಕು

04:27 PM Jun 17, 2019 | Naveen |

ಶಿವಮೊಗ್ಗ: ಮುಂಗಾರು ವಿಳಂಬ ವಾಗಿರುವುದು ಒಂದು ಕಡೆ ರೈತರಿಗೆ ವರವಾದರೆ ಇನ್ನೊಂದು ಕಡೆ ಲಾಭವಾಗಿದೆ. ಮಳೆಗಾಲ ಶುರುವಾಗಿ ಮೂರು ವಾರವಾದರೂ ವರುಣ ದರ್ಶನವಾಗದ ಕಾರಣ ನರೇಗಾ ಕಾಮಗಾರಿಗಳು ಚುರುಕು ಪಡೆದಿವೆ.

Advertisement

ಮಲೆನಾಡು ಪ್ರದೇಶದ ಕೆರೆಕಟ್ಟೆಗಳು ಸಾಮಾನ್ಯವಾಗಿ ಏಪ್ರಿಲ್ ನಂತರ ಬರಿದಾಗುತ್ತವೆ. ಅಷ್ಟರಲ್ಲಿ ಮುಂಗಾರು ಪೂರ್ವ ಮಳೆ ಕಾರಣಕ್ಕೆ ಹೂಳೆತ್ತುವ ಕಾಮಗಾರಿಗಳನ್ನು ನಡೆಸಲು ಆಗುವುದಿಲ್ಲ. ಈ ಬಾರಿ ಹಿಂಗಾರು, ಮುಂಗಾರು ಪೂರ್ವ ಮಳೆ ಕೈಕೊಟ್ಟ ಕಾರಣ ಕೆರೆಗಳು ಖಾಲಿಯಾಗಿದ್ದವು. ಇದರ ಅನುಕೂಲ ಪಡೆದ ಜಿಲ್ಲಾ ಪಂಚಾಯತ್‌ ಹೆಚ್ಚಿನ ಕಾಮಗಾರಿಗಳಿಗೆ ಆದ್ಯತೆ ನೀಡಿದೆ.

2019-20ನೇ ಸಾಲಿನಲ್ಲಿ ಏಪ್ರಿಲ್ನಿಂದ ಜೂನ್‌ 15ರ ವರೆಗೆ 48 ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡುವ ಮೂಲಕ 12.19 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಜೂನ್‌ ಅಂತ್ಯದವರೆಗೆ 8.66 ಲಕ್ಷದ ಮಾನವ ದಿನ ಸೃಷ್ಟಿ ಗುರಿ ಹೊಂದಲಾಗಿದ್ದು, ಇನ್ನೂ 15 ದಿನಗಳು ಬಾಕಿ ಇರುವಾಗಲೇ ಶೇ.141ರಷ್ಟು ಸಾಧನೆ ಮಾಡಲಾಗಿದೆ.

ಸಾಮಾನ್ಯವಾಗಿ ಜೂನ್‌ ಮೊದಲ ವಾರದಲ್ಲಿ ನೈಋತ್ಯ ಮಾನ್ಸೂನ್‌ ಮಳೆ ಮಾರುತಗಳು ಮಲೆನಾಡಿಗೆ ಪ್ರವೇಶಿಸುತ್ತವೆ. ಆದರೆ, ಈ ಸಲ ಮೂರನೇ ವಾರದಲ್ಲೂ ನಿರೀಕ್ಷಿತ ಮಳೆ ಬಾರದಿದ್ದರಿಂದ ಕೆರೆ-ಕಟ್ಟೆಗಳು ಒಣಗಿವೆ. ಇದರ ಮಧ್ಯೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜನರು ಗುಳೆ ಹೋಗದಂತೆ ಕೈ ಹಿಡಿದಿದೆ. ಸಮೂಹ ಫಲಾನುಭವಿಗಳಿಗೂ ಇದರಿಂದ ಸಾಕಷ್ಟು ಪ್ರಯೋಜನವಾಗಿದೆ.

2019ರ ಮಾರ್ಚ್‌ ಅಂತ್ಯದವರೆಗೆ ಚುನಾವಣೆ ಮತ್ತಿತರ ಕಾರಣಗಳಿಂದಾಗಿ 33 ಲಕ್ಷ ಪೈಕಿ 28.77 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲು ಸಾಧ್ಯವಾಗಿತ್ತು. ಆದರೆ, ಏಪ್ರಿಲ್-ಜೂನ್‌ವರೆಗೆ ಉತ್ತಮ ಪ್ರಗತಿ ಕಂಡುಬಂದಿದೆ. ಭೂ ಅಭಿವೃದ್ಧಿ, ಅಡಕೆ ತೋಟಗಳ ನಿರ್ಮಾಣ, ಅರಣ್ಯ ಗಿಡಗಳ ನೆಡುವಿಕೆ, ಸ್ಮಶಾನ ಅಭಿವೃದ್ಧಿ, ಕೆರೆ-ಕಟ್ಟೆಗಳ ಹೂಳೆತ್ತುವುದು, ಕಾಲುಸಂಕ ನಿರ್ಮಾಣ ಸೇರಿದಂತೆ 13 ಬಗೆಯ ಕಾಮಗಾರಿಗಳನ್ನು ಮಾಡಲಾಗಿದೆ. 969 ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನು 23,688 ಪ್ರಗತಿಯಲ್ಲಿವೆ.

ಕಳೆದ ವರ್ಷ ಹಿಂದೆ, ಈ ವರ್ಷ ಮುಂದೆ
2018-19ನೇ ಆರ್ಥಿಕ ವರ್ಷದಲ್ಲಿ 33 ಲಕ್ಷ ಮಾನವದಿನಗಳ ಗುರಿಯನ್ನು ನೀಡಲಾಗಿತ್ತು. ನಿರಂತರ ಚುನಾವಣೆ, ಜೂನ್‌ ಮೊದಲನೇ ವಾರದಿಂದಲೇ ಮಳೆ ಆರಂಭವಾಗಿದ್ದರಿಂದ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಲು ಆಗಿರಲಿಲ್ಲ. ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿದ್ದರಿಂದ ಹೂಳೆತ್ತುವ ಕಾಮಗಾರಿಗಳಿಗೆ ಅಡಚಣೆಯಾಗಿತ್ತು. 2019-20ನೇ ಆರ್ಥಿಕ ವರ್ಷದಲ್ಲಿ ನರೇಗಾ ಕಾಮಗಾರಿಗಳಿಗೆ ಉತ್ತಮ ಅವಕಾಶ ಸಿಕ್ಕಿದೆ. ಜೂನ್‌ ಮೊದಲನೇ ವಾರದಿಂದಲೇ ಮಳೆ ಆರಂಭವಾಗಿತ್ತು. ಆದರೆ ಈವರೆಗೂ ಮಳೆ ಜಿಲ್ಲೆಯಲ್ಲಿ ಕಾಣಿಸಿಕೊಳ್ಳದ ಕಾರಣ ಹಾಗೂ ಕೆರೆಗಳು ಒಣಗಿರುವುದರಿಂದ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಜೂನ್‌ ತಿಂಗಳ ಟಾರ್ಗೆಟ್‌ನಲ್ಲಿ ಗುರಿ ಮೀರಿ ಸಾಧನೆಯಾಗಿದೆ. ಇನ್ನೂ 14 ದಿನ ಬಾಕಿ ಇದ್ದು ಮಳೆ ಬಾರದಿದ್ದರೆ ಇನ್ನೂ ಹೆಚ್ಚಿನ ಕೆಲಸಗಳಾಗಬಹುದು.
Advertisement

ಜೂ.10ರ ವರೆಗಿನ ವರದಿಯನ್ವಯ, ಶಿಕಾರಿಪುರ, ಸೊರಬ ತಾಲೂಕುಗಳಲ್ಲಿ ಕ್ರಮವಾಗಿ 11,397ಮತ್ತು 10,704 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ಉಳಿದಂತೆ, ಭದ್ರಾವತಿಯಲ್ಲಿ 6,068, ಹೊಸನಗರ 3,635, ಸಾಗರ 7,544, ಶಿವಮೊಗ್ಗ 6577, ತೀರ್ಥಹಳ್ಳಿಯಲ್ಲಿ 2,887 ಕುಟುಂಬಗಳು ಯೋಜನೆಯ ಲಾಭ ಪಡೆದಿವೆ. ಒಂದು ವರ್ಷದಲ್ಲಿ ನೂರು ದಿನಗಳ ಉದ್ಯೋಗ ನೀಡಬೇಕೆಂಬುವುದು ಯೋಜನೆಯ ಉದ್ದೇಶವಾಗಿದೆ. ಆದರೆ, ಈಗಾಗಲೇ ಜಿಲ್ಲೆಯಲ್ಲಿ 53 ಕುಟುಂಬಗಳು ನೂರು ದಿನಗಳ ಕೂಲಿ ಪ್ರಯೋಜನ ಪಡೆದಿರುವುದು ಗಮನಾರ್ಹ. ಜತೆಗೆ, 258 ವಿಶೇಷಚೇತನ ಕುಟುಂಬಗಳಿಗೂ ಕೆಲಸ ಸಿಕ್ಕಿದೆ. ವಾರ್ಷಿಕ ಆರ್ಥಿಕ ಗುರಿ 183.08 ಕೋಟಿ ಇದ್ದು, ಅದರಲ್ಲಿ 49.96 ಕೋಟಿ ಈಗಾಗಲೇ ಸಾಧಿಸಲಾಗಿದೆ.
ಸಿ.ಆರ್‌. ಪ್ರವೀಣ್‌, ಎಪಿಒ

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಇತ್ತು. ಹೀಗಾಗಿ, ಕಳೆದ ಸಲ ನರೇಗಾ ಅಡಿ ನಿರೀಕ್ಷಿತ ಸಾಧನೆ ಮಾಡಲಾಗಿರಲಿಲ್ಲ. ಈ ಬಾರಿ ಕಡಿಮೆ ಸಾಧನೆ ಮಾಡಿರುವ ಪಂಚಾಯತ್‌ಗಳ ನಿತ್ಯ ವರದಿ ತರಿಸಿಕೊಂಡು ಫಾಲೋ ಅಪ್‌ ಮಾಡಲಾಗುತ್ತಿದೆ. ಶಿವಮೊಗ್ಗ ನರೇಗಾದಲ್ಲಿ 20ಸ್ಥಾನದ ಕೆಳಗಿತ್ತು. ಈ ಸಲ ಏಪ್ರಿಲ್- ಜೂನ್‌ವರೆಗೆ ಟಾಪ್‌ 3ನಲ್ಲಿದೆ. ಜತೆಗೆ, ಹೆಚ್ಚು ಬೇಡಿಕೆ ಇರುವ ಕೆಲಸಗಳಿಗೆ ತಕ್ಷಣ ಅನುಮೋದನೆ ಮಾಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಉತ್ತಮ ಸ್ಥಾನದಲ್ಲಿದ್ದೇವೆ.
• ಕೆ.ಬಿ. ವೀರಾಪುರ,
ಯೋಜನಾ ನಿರ್ದೇಶಕರು, ಜಿಪಂ

Advertisement

Udayavani is now on Telegram. Click here to join our channel and stay updated with the latest news.

Next