Advertisement

ಭಾವೈಕ್ಯದ ಮೊಹರಂ ಮೆರವಣಿಗೆ

03:36 PM Sep 11, 2019 | Naveen |

ಶಿವಮೊಗ್ಗ: ಹಿಂದೂ ಮತ್ತು ಮುಸ್ಲಿಂ ಬಾಂಧವರ ಭಾವೈಕ್ಯದ ಸಂದೇಶ ಸಾರುವ ಮೊಹರಂ ಹಬ್ಬದ ಆಚರಣೆಯ ಅಂಗವಾಗಿ ಮಂಗಳವಾರ ನಗರದ ಪ್ರಮುಖ ಬೀದಿಗಳಲ್ಲಿ ಮುಸ್ಲಿಮರು ಮೆರವಣಿಗೆ ನಡೆಸಿದರು.

Advertisement

ಗಾಂಧಿ ಬಜಾರ್‌ ಮಾರ್ಗವಾಗಿ ಮೆರವಣಿಗೆಯಲ್ಲಿ ಮುಸ್ಲಿಮರು ಶಾಂತಿಯುತವಾಗಿ ಸಾಗಿದರು. ಶಾಂತಿ ಮತ್ತು ಧರ್ಮದ ಉಳಿವಿಗಾಗಿ ಹೋರಾಡಿ ಮಡಿದ ಪ್ರವಾದಿ ಮಹಮ್ಮದ್‌ ಪೈಗಂಬರರ ಮೊಮ್ಮಕ್ಕಳಾದ ಹಜರತ್‌ ಹಸನ್‌ ಮತ್ತು ಹುಸೇನ್‌ರ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ. ಅಲ್ಲದೆ, ಮೊಹರಂ ಹಬ್ಬದಿಂದ ಇಸ್ಲಾಂ ಧರ್ಮೀಯರ ಹೊಸವರ್ಷ ಆರಂಭ ಎಂಬ ಪ್ರತೀತಿಯೂ ಇದೆ. ಸತ್ಯ, ಧರ್ಮ, ನ್ಯಾಯಕ್ಕಾಗಿ ಮತ್ತು ಯುದ್ಧದಲ್ಲಿ ಮಡಿದ ಇಮಾಂ ಹುಸೇನರ ಪುಣ್ಯಸ್ಮರಣೆಗಾಗಿ ಈ ಹಬ್ಬ ಆಚರಿಸಲಾಗುತ್ತದೆ. ಹಿಂದೂಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ವಿಶೇಷವಾಗಿದೆ.

ಹಬ್ಬದ ಸಂದರ್ಭದಲ್ಲಿ ಕೆಂಡ ಹಾಯುವುದು, ಆಲಾದಿ ಕುಣಿತ, ಮರಗಾಲು ಕುಣಿತ, ಹುಲಿವೇಷ ಸೇರಿದಂತೆ ಹಲವು ವೇಷಗಳನ್ನು ಕೂಡ ಹಾಕಲಾಗುತ್ತದೆ. ಅಲ್ಲದೆ ಈ ಹಬ್ಬದ ಸಂದರ್ಭದಲ್ಲಿ ಭಕ್ತರು ನಾನಾ ಹರಕೆಗಳನ್ನು ನೆರವೇರಿಸುತ್ತಾರೆ. ಬೆಂಕಿಯಲ್ಲಿ ನಡೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸದಿರಲಿ ಎಂಬುದೇ ಈ ಹಬ್ಬದ ಆಶಯವಾಗಿದೆ.

ಪರಸ್ಪರ ಪ್ರೀತಿ-ಸಂತೋಷ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯುತ್ತವೆ. ಇಂದು ಶ್ರದ್ಧಾಭಕ್ತಿಯಿಂದ ಮುಸ್ಲಿಮರು ಈ ಹಬ್ಬ ಆಚರಿಸಿದರು. ಮನೆಗಳಲ್ಲಿ ವಿಶೇಷ ಅಡುಗೆ ಮಾಡಿಕೊಂಡು ಸವಿದರು. ಹಿಂದೂ ಮುಸ್ಲಿಮರ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬವೇ ಮೊಹರಂ ಆಗಿರುವುದು ವಿಶೇಷವಾಗಿದೆ. ನಗರದಲ್ಲಿ ಮೆರವಣಿಗೆ ನಡೆಸಿದ ಮುಸ್ಲಿಮರು ವಿದ್ಯಾನಗರದ ಬಳಿ ಕೆಂಡ ಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next