Advertisement

Shivamogga ಸಹಜ ಸ್ಥಿತಿಯತ್ತ ರಾಗಿಗುಡ್ಡ; 40ಕ್ಕೂ ಹೆಚ್ಚು ಕಿಡಿಗೇಡಿಗಳು ವಶಕ್ಕೆ

08:59 PM Oct 02, 2023 | Shreeram Nayak |

ಶಿವಮೊಗ್ಗ: ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ ಪ್ರಕ್ಷುಬ್ಧಗೊಂಡಿದ್ದ ಶಾಂತಿನಗರ (ರಾಗಿಗುಡ್ಡ) ಈಗ ಸಹಜ ಸ್ಥಿತಿಯತ್ತ ಮರುಳುತ್ತಿದೆ. ಭಾನುವಾರ ರಾತ್ರಿ ನಡೆದ ಘಟನೆ ನಂತರ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಶಾಂತಿನಗರಕ್ಕೆ ಸೀಮಿತವಾಗಿದ್ದ ಸೆಕ್ಷನ್‌ 144 ಅನ್ನು ಸೋಮವಾರ ಬೆಳಗ್ಗೆ ಇಡೀ ನಗರಕ್ಕೆ ವಿಸ್ತರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು.

Advertisement

ಭಾನುವಾರ ರಾತ್ರಿ ಕಿಡಿಗೇಡಿಗಳು ಮಾಡಿದ ಕಲ್ಲು ತೂರಾಟದಿಂದ ಶಾಂತಿನಗರದ 7 ಮತ್ತು 8ನೇ ಕ್ರಾಸ್‌ನಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು. ನಂತರ ಇದು ಎರಡು ಕೋಮುಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಖುದ್ದು ಎಸ್‌ಪಿ ಕಾರ್ಯಾಚರಣೆ ನಡೆಸಿ ಪುಂಡರಿಗೆ ಬಿಸಿ ಮುಟ್ಟಿಸಿದ್ದರು. ಅದಾದ ನಂತರ 40ಕ್ಕೂ ಅಧಿಕ ಕಿಡಿಗೇಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಗಲಭೆ ಪೀಡಿತ ಪ್ರದೇಶದಲ್ಲಿ ಆರ್‌ಎಎಫ್‌ ಸಿಬ್ಬಂದಿ ರೂಟ್‌ ಮಾರ್ಚ್‌ ಮಾಡಿಸಿ ಧೈರ್ಯ ತುಂಬಿದರು. ಮೂರು ಕೆಎಸ್‌ಆರ್‌ಪಿ ತುಕಡಿಗಳನ್ನು ಬಂದೋಬಸ್ತ್ ನಿಯೋಜಿಸಲಾಗಿದೆ.

ಶಾಂತಿನಗರಕ್ಕೆ ಬರುವ, ಹೋಗುವ ಪ್ರತಿಯೊಬ್ಬರ ಮೇಲೂ ನಿಗಾ ಇಡಲಾಗಿದ್ದು ಅನಾವಶ್ಯಕ ಓಡಾಡದಂತೆ ನಿರ್ಬಂಧಿಸಲಾಗಿತ್ತು. ಇಡೀ ಶಾಂತಿನಗರ ಸ್ತಬ್ಧವಾಗಿತ್ತು. ಮೆಡಿಕಲ್‌, ಆಸ್ಪತ್ರೆ, ಅಂಗಡಿ ಹೊರತುಪಡಿಸಿ ಯಾವುದೂ ಸೌಲಭ್ಯ ಲಭ್ಯವಿರಲಿಲ್ಲ.

ಸೆಕ್ಷನ್‌ 144 ವಿಸ್ತರಣೆ: ಶಾಂತಿನಗರಕ್ಕೆ ಸೀಮಿತವಾಗಿದ್ದ ಸೆಕ್ಷನ್‌ 144 ಅನ್ನು ಇಡೀ ನಗರಕ್ಕೆ ವಿಸ್ತರಣೆ ಮಾಡಲಾಗಿತ್ತು. ಸೋಮವಾರ ಬೆಳಗ್ಗೆಯಿಂದಲೇ ಗಾಂಧಿ ಬಜಾರ್‌, ನೆಹರು ರಸ್ತೆಯಲ್ಲಿ ಅಂಗಡಿ-ಮಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು. ಬೇರೆ ರಸ್ತೆಗಳಲ್ಲಿ ವ್ಯಾಪಾರ-ವಹಿವಾಟು ಸಹಜವಾಗಿತ್ತು. ಇಡೀ ನಗರದಲ್ಲಿ ಅಘೋಷಿತ ಬಂದ್‌ ವಾತಾವರಣ ಇತ್ತು. ಪೊಲೀಸರ ಈ ಕ್ರಮಕ್ಕೆ ಎಲ್ಲ ಪಕ್ಷದ ಮುಖಂಡರು, ಸಂಘಟನೆಗಳು ವಿರೋಧ ಸಹ ವ್ಯಕ್ತಪಡಿಸಿದವು. ಮುಂದಿನ ಆದೇಶದವರೆಗೂ ಸೆಕ್ಷನ್‌ 144 ಜಾರಿಯಲ್ಲಿರಲಿದೆ.

40ಕ್ಕೂ ಹೆಚ್ಚು ಜನರು ವಶಕ್ಕೆ
ಘಟನೆಯಲ್ಲಿ ಈವರೆಗೆ 40ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಭಾನುವಾರ ತಡರಾತ್ರಿವರೆಗೂ ಮನೆಗಳಿಗೆ ನುಗ್ಗಿ ಶಂಕಿತರನ್ನು ಕರೆದೊಯ್ಯಲಾಯಿತು. ಘಟನೆಯಲ್ಲಿ ಎರಡು ಕೋಮಿನ 12 ಮಂದಿಗೆ ಗಾಯಗಳಾಗಿದ್ದು ಬಿಜೆಪಿ, ಕಾಂಗ್ರೆಸ್‌ನ ಮುಖಂಡರು ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

Advertisement

ಮನೆ, ಆಟೋ, ಕಾರುಗಳು ಜಖಂ
ಘಟನೆಯಲ್ಲಿ ಮನೆ, ಆಟೋ, ಕಾರು ಸೇರಿ ಅನೇಕ ವಸ್ತುಗಳು ಜಖಂ ಆಗಿದ್ದು ಪೊಲೀಸರು ಸೂಕ್ತ ರಕ್ಷಣೆ ಒದಗಿಸಿಲ್ಲ. ಸುಮ್ಮನೆ ನಮ್ಮ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ನಷ್ಟ ಪರಿಹಾರ ಒದಗಿಸುವಂತೆ, ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿದರು. ಶಾಸಕರು, ಸಂಸದರು, ಮೇಯರ್‌, ಪೊಲೀಸರು ಸಂತ್ರಸ್ತರ ಮನೆಗಳಿಗೆ ಭೇಟಿ ಮಾಡಿ ಧೈರ್ಯ ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next