Advertisement

ಶಿವಮೊಗ್ಗ: ಈಶ್ವರಪ್ಪ ಸ್ಪರ್ಧಿಸದಿದ್ದರೆ ಬಿಜೆಪಿಯಿಂದ ಯಾರು?

01:20 AM Mar 08, 2023 | Shreeram Nayak |

ಶಿವಮೊಗ್ಗ: ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಓಟ ಆರಂಭಿಸಿದ ಮೇಲೆ ಕಾಂಗ್ರೆಸ್‌ ಪಾಲಿಗೆ ಈ ಕ್ಷೇತ್ರ ಕಬ್ಬಿಣದ ಕಡಲೆಯಾಗಿದೆ. ಈ ಬಾರಿ ಮೂರು ಪಕ್ಷದಿಂದಲೂ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಸ್ಪಷ್ಟತೆ ಇಲ್ಲ. ಬಿಜೆಪಿ, ಕಾಂಗ್ರೆಸ್‌ನಲ್ಲಿ ಡಜನ್‌ಗಟ್ಟಲೇ ಆಕಾಂಕ್ಷಿಗಳು ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಜೆಡಿಎಸ್‌ ಕಣದಲ್ಲಿ ಇಲ್ಲ.

Advertisement

ಶಿವಮೊಗ್ಗ ಬಿಜೆಪಿ ಭದ್ರ ಕೋಟೆ. ಸಂಘಟನೆ ವಿಚಾರದಲ್ಲಿ ಸದೃಢವಾಗಿದೆ. ಬಿಜೆಪಿ ಮತದಾರರ ಸೆಳೆಯಲು ಅಭಿವೃದ್ಧಿ-ಹಿಂದುತ್ವದ ವಿಚಾರಗಳನ್ನು ಬಳಸಲು ಮುಂದಾಗಿದೆ. ಕಾಂಗ್ರೆಸ್‌ ಈ ಬಾರಿ ಆಡಳಿತ ವಿರೋಧಿ ಅಲೆ,

ಕೋಮು ಗಲಭೆ, ಜನರಿಗೆ ತೊಂದರೆಯಾಗುತ್ತಿರುವ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೊರಟಿದೆ. ಆದರೆ ಎರಡೂ ಪಕ್ಷಗಳಲ್ಲಿ ಅಭ್ಯರ್ಥಿ ಯಾರೆಂಬ ಸ್ಪಷ್ಟತೆ ಇಲ್ಲ. ಬಿಜೆಪಿಯಲ್ಲಿ ಸದ್ಯ ಹಾಲಿ ಶಾಸಕ ಈಶ್ವರಪ್ಪ ಪುತ್ರ ಕಾಂತೇಶ್‌ ಹೆಸರು ಮುಂಚೂಣಿಯಲ್ಲಿದ್ದರೆ, ಎಂಎಲ್‌ಸಿ ಆಯನೂರು ಮಂಜುನಾಥ್‌ “ಕಾರು ಡ್ರೈವ್‌’ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ವೈದ್ಯ ವೃತ್ತಿಯಲ್ಲಿ ಹೆಸರು ಮಾಡಿರುವ ಡಾ|ಧನಂಜಯ ಸರ್ಜಿ ಅವರು ಟಿಕೆಟ್‌ಗೆ ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ. ಕೈಗಾರಿಕಾ ನಿಗಮದ ಉಪಾಧ್ಯಕ್ಷರಾಗಿದ್ದ ಎಸ್‌.ದತ್ತಾತ್ರಿ, ಸೂಡಾ ಅಧ್ಯಕ್ಷರಾಗಿದ್ದ ಜ್ಯೋತಿ ಪ್ರಕಾಶ್‌, ಪಾಲಿಕೆ ಸದಸ್ಯ ಚನ್ನಬಸಪ್ಪ, ಯುವ ಮೋರ್ಚಾ ಅಧ್ಯಕ್ಷ ಹರಿಕೃಷ್ಣ ಹೆಸರು ಚರ್ಚೆಯಲ್ಲಿವೆ.

ಕೈನಲ್ಲಿ 13 ಆಕಾಂಕ್ಷಿಗಳು: ಇನ್ನು ಕಾಂಗ್ರೆಸ್‌ನಿಂದ ಹದಿಮೂರು ಅಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌, ಪಾಲಿಕೆ ಸದಸ್ಯ ಎಚ್‌.ಸಿ.ಯೋಗೇಶ್‌, ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಎಸ್‌.ಪಿ. ದಿನೇಶ್‌, ಮಾಜಿ ಮೇಯರ್‌ ಎಸ್‌.ಕೆ.ಮರಿಯಪ್ಪ, ಇಮಿ¤ಯಾಜ್‌, ಶೀನ್‌ ಜೋಸೆಫ್‌, ವೈ.ಎಚ್‌.

ನಾಗರಾಜ್‌, ನರಸಿಂಹಮೂರ್ತಿ, ಎಲ್‌.ಸತ್ಯನಾರಾಯಣರಾವ್‌, ನಯಾಜ್‌ ಅಹಮ್ಮದ್‌ ಖಾನ್‌, ಡಾ|ದಿನೇಶ್‌ ಅವರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಎಚ್‌.ಎಸ್‌.ಸುಂದರೇಶ್‌, ಮಾಜಿ ಶಾಸಕ ಕೆ.ಬಿ.ಪ್ರನಸ್ನಕುಮಾರ್‌, ಪಾಲಿಕೆ ಸದಸ್ಯ ಎಚ್‌.ಸಿ.ಯೋಗೇಶ್‌ ಹೆಸರು ಅಂತಿಮ ಪಟ್ಟಿಯಲ್ಲಿದೆ ಎನ್ನಲಾಗಿದೆ. ಹೊಸ ಬೆಳವಣಿಗೆಯಲ್ಲಿ ಶಾಮನೂರು ಶಿವಶಂಕರಪ್ಪ ಸಂಬಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಪ್ತರಾಗಿರುವ ನಿವೃತ್ತ ಡಿವೈಎಸ್‌ಪಿ ಪಿ.ಒ.ಶಿವಕುಮಾರ್‌ ಹೆಸರು ಕೂಡ ರೇಸ್‌ನಲ್ಲಿದೆ.

Advertisement

ಬಂಡಾಯಗಾರರ ನಿರೀಕ್ಷೆ: 2008ರಲ್ಲಿ 19,232 ಹಾಗೂ 2013ರ ಚುನಾವಣೆಯಲ್ಲಿ 21,638 ಮತ ಪಡೆದಿದ್ದ ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌ ಅವರು ಈ ಬಾರಿ ತಟಸ್ಥರಾಗಿದ್ದಾರೆ. 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನಿರಂಜನ್‌ ಅವರು ಕೇವಲ 5796 ಮತ ಪಡೆದು ರಾಜಕೀಯದಿಂದಲೇ ದೂರ ಉಳಿದರು. ಈಗ ಮತ್ತೂಮ್ಮೆ ಎಂ.ಶ್ರೀಕಾಂತ್‌ ಅವರಿಗೆ ಟಿಕೆಟ್‌ ಕೊಡಲು ಹೈಕಮಾಂಡ್‌ ಉತ್ಸುಕವಾಗಿದ್ದರೂ ಶ್ರೀಕಾಂತ್‌ ಅವರು ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ವೈದ್ಯ ಧನಂಜಯ ಸರ್ಜಿ ಅವರನ್ನು ಜೆಡಿಎಸ್‌ಗೆ ಕರೆತರುವ ಪ್ರಯತ್ನ ಫಲಕೊಡಲಿಲ್ಲ. ಬಂಡಾಯಗಾರರ ನಿರೀಕ್ಷೆಯಲ್ಲಿ ಜೆಡಿಎಸ್‌ ಇದೆ.

ಈಚೆಗೆ ರಾಷ್ಟ್ರೀಯ ಪಕ್ಷವಾಗಿ ಗುರುತಿಸಿ ಕೊಂಡಿರುವ ಆಮ್‌ ಆದ್ಮಿ ಪಾರ್ಟಿ(ಆಪ್‌) ವತಿಯಿಂದ ಸಾಮಾಜಿಕ ಕಾರ್ಯಕರ್ತೆ ಋನೇತ್ರಾವತಿ ಗೌಡ, ಮನೋಹರ್‌ ಗೌಡ ಹೆಸರು ಮುಂಚೂಣಿಯಲ್ಲಿದೆ. ಜೆಡಿಯು, ಸಮಾಜವಾದಿ ಪಕ್ಷದಿಂದಲೂ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ಹಾಗೆಯೇ ಬಂಡಾಯ ನಿಂತು ಶಿವಮೊಗ್ಗದಲ್ಲಿ ಗೆಲ್ಲುವ ವಾತಾವರಣ ಮೊದಲಿನಿಂದಲೂ ಇಲ್ಲ.

ಕಾಂತೇಶ್‌ಗೆ ಟಿಕೆಟ್‌ ಕೊಡಿಸಲು ಯತ್ನ?
ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆ.ಎಸ್‌.ಈಶ್ವರಪ್ಪನವರು ಹಾಲಿ ಶಾಸಕರಾಗಿದ್ದು ವಯೋಮಿತಿ ಕಾರಣಕ್ಕೆ ಮುಂದಿನ ಚುನಾವಣೆಗೆ ಅವರಿಗೆ ಟಿಕೆಟ್‌ ಸಿಗುವುದಿಲ್ಲ ಎಂಬ ಚರ್ಚೆಗಳು ಪಕ್ಷದೊಳಗೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ಏರುತ್ತಿದೆ. ಮಗ ಕಾಂತೇಶ್‌ಗೆ ಟಿಕೆಟ್‌ ಕೊಡಿಸಲು ಈಶ್ವರಪ್ಪನವರು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಸಂಘಟನೆ ಭದ್ರವಾಗಿರುವುದರಿಂದ ಪಕ್ಷ ಪ್ರಯೋಗಕ್ಕೆ ಮುಂದಾಗುವುದೋ ಅಥವಾ  ಗೆಲ್ಲುವ ಕುದುರೆ’ ಈಶ್ವರಪ್ಪನವರಿಗೆ ಮತ್ತೊಂದು ಅವಕಾಶ ಕೊಡುವುದೇ ಕುತೂಹಲ ಮೂಡಿಸಿದೆ.

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next