Advertisement

ಮರಳು ಕ್ವಾರಿ ನಿಲ್ಲಿಸಿದ್ದು ಖಂಡನೀಯ: ಬೇಳೂರು

04:56 PM May 07, 2019 | Naveen |

ಶಿವಮೊಗ್ಗ: ಬಿಜೆಪಿಯವರ ಕೈಗೊಂಬೆಯಂತೆ ಆಗಿರುವ ಜಿಲ್ಲಾಧಿಕಾರಿಗಳು ಹೊಸನಗರ ತಾಲೂಕಿನಲ್ಲಿ ಮರುಳು ಕ್ವಾರಿಯನ್ನು ನಿಲ್ಲಿಸಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳು ಕ್ವಾರಿಯಿಂದ ತಮಗೆ ಪಾಲು ಬರುತ್ತಿಲ್ಲ ಎಂದು ಬಿಜೆಪಿಯ ಇಬ್ಬರು ಶಾಸಕರು ಪ್ರತಿಭಟನೆ ಮಾಡಿದ್ದಾರೆ. ಈ ಪ್ರತಿಭಟನೆಯ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಕ್ವಾರಿಯನ್ನು ಬಂದ್‌ ಮಾಡಿ ಮರಳು ಸಮಸ್ಯೆಯನ್ನು ಮತ್ತಷ್ಟು ದ್ವಿಗುಣಗೊಳಿಸಿದ್ದಾರೆ. ಬಿಜೆಪಿಯವರ ಒತ್ತಾಯಕ್ಕೆ ಜಿಲ್ಲಾಧಿಕಾರಿ ಮಣಿದಿದ್ದಾರೆ. ಅಲ್ಲಿ ಮರಳು ಸಮಸ್ಯೆ ಜಿಲ್ಲಾಧಿಕಾರಿಗಳಿಗೆ ಬಿಜೆಪಿಯವರು ಪ್ರತಿಭಟನೆ ಮಾಡಿದ ಮೇಲೆ ಗೊತ್ತಾಗಬೇಕೇ? ಅದಕ್ಕೂ ಮೊದಲು ಅವರಿಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಕೆಲವು ಅಸಂಬದ್ಧ ದೂರು ನೀಡಿದ್ದಾರೆ. 9 ಕಿಮೀ ವ್ಯಾಪ್ತಿಯಲ್ಲಿ ಮರಳು ಕ್ವಾರಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಆದರೆ ಹಾಗೇನಿಲ್ಲ ಸಿಸಿಟಿವಿ ಇರಲಿಲ್ಲ ಎನ್ನುತ್ತಾರೆ. ಆದರೆ ಸಿಸಿಟಿವಿ ಆಳವಡಿಸುವುದು ಜಿಲ್ಲಾಧಿಕಾರಿಗಳ ಕೆಲಸವೇ ಹೊರತು ಗುತ್ತಿಗೆದಾರದನಲ್ಲ. ಒಂದೊಮ್ಮೆ ಸಮಸ್ಯೆಗಳು ಇರುವುದು ನಿಜವಾಗಿದ್ದರೆ ಪರಿಶೀಲನೆ ಮಾಡಬಹುದಿತ್ತು. ನೊಟೀಸ್‌ ಕೊಡಬಹುದಿತ್ತು. ದಂಡ ಹಾಕಬಹುದಿತ್ತು. ಆದರೆ ಇದು ಯಾವುದನ್ನೂ ಮಾಡದ ಜಿಲ್ಲಾಧಿಕಾರಿಗಳು ಕೇವಲ ಬಿಜೆಪಿ ಶಾಸಕರ ಸಲ್ಲದ ಹೇಳಿಕೆಗೆ ಗುತ್ತಿಗೆಯನ್ನು ರದ್ದುಗೊಳಿಸಿರುವುದು ತಪ್ಪು ಎಂದರು.

ಇದನ್ನೂ ಖಂಡಿಸಿ ತಾವು ಮೇ 23ರ ನಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಕೂರುತ್ತೇನೆ. ಜನರಿಗೆ ಮರಳು ಬೇಕು ಎನ್ನುವುದು ನನ್ನ ಉದ್ದೇಶ. ನಾನು ಯಾವ ಗುತ್ತಿಗೆದಾರರ ಪರವಾಗಿಯೂ ಇಲ್ಲ. ಹಾಗೆ ನೋಡಿದರೆ ಶಾಸಕ ಹರತಾಳು ಹಾಲಪ್ಪ ನೆಂಟರು, ಬೀಗರೇ ಮರಳು ಕ್ವಾರಿಯಲ್ಲಿ ಇದ್ದಾರೆ. ಮರಳು ಈಗ ಸುಲಭವಾಗಿ ಸಿಗುತ್ತಿತ್ತು. ಲೋಡಿಗೆ 5 ಸಾವಿರ ರೂ. ಕಡಿಮೆಯಾಗಿತ್ತು. ಆದರೆ ಬಿಜೆಪಿಯವರಿಗೆ ಪ್ರತಿ ಲೋಡಿಗೆ ಸಾವಿರಾರು ರೂ. ಲಂಚ ಅಥವಾ ತಿಂಗಳಿಗೆ ಒಂದಿಷ್ಟು ಲೋಡ್‌ ಮರಳು ಕೊಡಬೇಕಿತ್ತು. ತಮಗೆ ಪಾಲು ಸಿಗಲಿಲ್ಲ ಎಂಬ ಏಕೈಕ ಕಾರಣದಿಂದ ಆಯನೂರು ಮಂಜುನಾಥ್‌, ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ಮುಂತಾದವರು ಕೃತಕ ಪ್ರತಿಭಟನೆ ಮಾಡಿದ್ದಾರೆ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಚಿನ್ನಪ್ಪ ಇದ್ದರು.

ಶಿವಮೊಗ್ಗ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ 18- 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಚುನಾವಣಾ ಸಮಯದಲ್ಲಿ ಯಡಿಯೂರಪ್ಪ ಅವರಿಗೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೆಚ್ಚಿನ ಸಮಯ ಮೀಸಲಿಡಲು ಆಗಿರಲಿಲ್ಲ. ರಾಘವೇಂದ್ರ ಮತ್ತು ಬಿಜೆಪಿ ಮುಖಂಡರ ಮೇಲೆ ಜನರಿಗೆ ಅಸಮಾಧಾನವಿದೆ. ಚುನಾವಣಾ ಫಲಿತಾಂಶದ ನಂತರ ಯಡಿಯೂರಪ್ಪ ಬಿಜೆಪಿಯಲ್ಲಿ ಮೂಲೆಗುಂಪಾಗಲಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಬಿ.ಎಲ್. ಸಂತೋಷ್‌ ಅವರ ಪ್ರಭಾವ ಜಾಸ್ತಿ ಇರುವುದರಿಂದ ಯಡಿಯೂರಪ್ಪ ಮತ್ತು ಶೋಭಾ ಅವರ ಆಟ ಏನೂ ನಡೆಯುತ್ತಿಲ್ಲ. ರಾಜ್ಯ ಸಮ್ಮಿಶ್ರ ಸರ್ಕಾರ ಪತನಕ್ಕೆ ಬಿಜೆಪಿ ಮುಖಂಡರು ಎಲ್ಲಾ ಹಬ್ಬಗಳ ಗಡುವು ಕೊಟ್ಟು ಮುಗಿಸಿದ್ದಾರೆ. ಈಗ ರಂಜಾನ್‌ ಹಬ್ಬವನ್ನೂ ನೋಡೋಣ.
• ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ

Advertisement

 

Advertisement

Udayavani is now on Telegram. Click here to join our channel and stay updated with the latest news.

Next