ಶಿವಮೊಗ್ಗ: ನಗರದಲ್ಲಿ ಮುಸ್ಲಿಮರು ಶ್ರದ್ಧಾ, ಭಕ್ತಿ ಮತ್ತು ಸಂಭ್ರಮದಿಂದ ರಂಜಾನ್ (ಈದ್ -ಉಲ್-ಫಿತ್ರ) ಹಬ್ಬವನ್ನು ಆಚರಿಸಿದರು.
ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಮರು ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅಲ್ಲಾಹುನಿಗೆ ಪ್ರಾರ್ಥಿಸಿದ ಅವರು ನಂತರ ಪರಸ್ಪರ ಆಲಿಂಗನದಿಂದ ಹಬ್ಬದ ಶುಭಾಶಯ ಹಂಚಿಕೊಂಡರು.
ಪವಿತ್ರ ರಂಜಾನ್ ಹಬ್ಬದ ಈ ಆಚರಣೆಯಲ್ಲಿ ಹಿರಿಯರು, ಮಕ್ಕಳು ಸೇರಿದ್ದರು. ಹೊಸ ಬಟ್ಟೆಗಳನ್ನು ತೊಟ್ಟು ಹಬ್ಬದ ಸಡಗರದಲ್ಲಿ ಸಂಭ್ರಮಿಸಿದರು.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈದ್ಗಾ ಮೈದಾನದ ಸುತ್ತ ಸಂಚಾರ ತಡೆಹಿಡಿದು ಬದಲಿ ವ್ಯವಸ್ಥೆ ಮಾಡಿದ್ದರು. ಮುಸ್ಲಿಮರಿಗೆ ರಂಜಾನ್ ಪವಿತ್ರ ಹಬ್ಬವಾಗಿದೆ. 30 ದಿನಗಳ ಕಾಲ ಉಪವಾಸ ಮಾಡಿ, ಸತ್‌ಚಿಂತನೆಗಳನ್ನು ಬೆಳೆಸಿಕೊಳ್ಳಲಾಗುತ್ತದೆ. ಹಾಗೆಯೇ ಉಳ್ಳವರು ಇಲ್ಲದವರಿಗೆ ದಾನ ಮಾಡುವುದು ಕೂಡ ಈ ಹಬ್ಬದ ವಿಶೇಷವಾಗಿದೆ.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ರಮೇಶ್, ವೈ.ಎಚ್. ನಾಗರಾಜ್ ಸೇರಿದಂತೆ ಹಲವು ಗಣ್ಯರು ಈ ಹಬ್ಬದಲ್ಲಿ ಪಾಲ್ಗೊಂಡು ಮುಸ್ಲಿಮರಿಗೆ ಶುಭಾಶಯ ಕೋರಿದರು.