Advertisement

ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಮೆ ಅಪಾರ

05:50 PM Jan 24, 2021 | Shreeraj Acharya |

ಭದ್ರಾವತಿ: ಕನ್ನಡ ಸಾಹಿತ್ಯ ಪರಿಷತ್ತು 106 ವರ್ಷಗಳಾದರೂ ಬೆಳೆದು ಬರುತ್ತಿರುವುದು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಮೆಯಾಗಿದೆ ಎಂದು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿದರು.

Advertisement

ಓದಿ : ಹುಣಸೋಡು ಸ್ಫೋಟ: ತನಿಖೆ ಚುರುಕು

ಶನಿವಾರ ಸಿದ್ಧಾರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಏರ್ಪಡಿಸಿದ್ದ 9ನೇ ಕನ್ನಡ ಸಾಹಿತ್ಯ ಸಮ್ಮೆಳನವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಮ್ಮೇಳನಗಳು ಕೇವಲ ಜನರ ಸಮಾವೇಶಗಳಾಗದೆ ಸಾಂಸ್ಕೃತಿಕವಾಗಿ ಜಾಗೃತಿ ಮೂಡಿಸುವ ಜಾತ್ರೆಗಳಾಗಬೇಕು. ಇಂದು ಸಮಾಜದ ಎಲ್ಲಾ ರಂಗಗಳಲ್ಲಿಯೂ ದ್ವೇಷ, ಅಸೂಯೆ, ವಾತಾವರಣ ಕಂಡುಬರುತ್ತಿರುವುದಕ್ಕೆ ರಾಜಕಾರಣದ ಹಸ್ತಕ್ಷೇಪವೇ ಮೂಲಕಾರಣವಾಗಿದ್ದು ಇದು ನಿಜಕ್ಕೂ ಬೇಸರದ ಸಂಗತಿ ಎಂದರು.
ಹಣ ಎಲ್ಲಿ ಹೆಚ್ಚಾಗುತ್ತದೆಯೋ ಅಲ್ಲಿ ಅನಾಹುತಗಳು ಹೇರಳವಾಗಿರುತ್ತವೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತು ಇದೆಲ್ಲದಕ್ಕೂ ಅಪವಾದವೆನ್ನುವಂತೆ ಪಡೆದ ಅನುದಾನವನ್ನು ಸಮರ್ಪಕವಾಗಿ ಬಳಸುತ್ತಾ ತನ್ನ ಹಿರಿಮೆ- ಗರಿಮೆಗಳನ್ನು ಉಳಿಸಿ ಕನ್ನಡದ ಸೇವೆಯನ್ನು ಮಾಡುತ್ತಾ ಬೆಳೆದುಬರುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದರು.

ಕನ್ನಡಿಗರ ಸಹನೆ ಹೇಡಿತನವಲ್ಲ: ಸಮ್ಮೇಳನದ ಸರ್ವಾಧ್ಯಕ್ಷ ಎ.ಪಿ.ಕುಮಾರ್‌ ಮಾತನಾಡಿ, ಹಸುವಿಗೆ ಹುಲ್ಲು ಹಾಕಿದರೆ ಅದು ನಮಗೆ ಅಮೃತದಂತಹ ಹಾಲನ್ನು ನೀಡುವ ಮೂಲಕ ಮಹದುಪಕಾರ ಮಾಡುವಂತೆ ಸಮಾಜದಲ್ಲಿ ಬಾಳುವ ನಾವುಗಳು ನಾಡು, ನುಡಿ, ನೆಲ, ಜಲ, ಭಾಷೆಯ ಸೇವಕರಾಗಿ ಕಾರ್ಯನಿರ್ವಹಿಸಿ ಸಮಾಜದ ಋಣ ತೀರಿಸುವ ಪ್ರಯತ್ನ ಮಾಡಬೇಕು ಎಂದರು.
ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಬೆಳಗಾವಿ ಕುರಿತಂತೆ ಆಡಿರುವ ಮಾತನ್ನು ಕನ್ನಡಿಗರಾದ ನಾವು ಈ ಸಮ್ಮೇಳನದ ಮೂಲಕ
ಖಂಡಿಸುತ್ತೇವೆ. ಕನ್ನಡಿಗರು ಅಹಿಂಸಾವಾದಿಗಳು ನಿಜ. ಆದರೆ ಹೇಡಿಗಳಲ್ಲ. ಕರ್ನಾಟಕದ ಒಂದು ಇಂಚು ಭೂಮಿಯನ್ನೂ ನಾವು ಅನ್ಯರಾಜ್ಯದ
ಪಾಲಾಗಲು ಬಿಡುವುದಿಲ್ಲ. ಅದಕ್ಕಾಗಿ ಎಂತಹ ಹೊರಾಟಕ್ಕೂ ನಾವು ಸಿದ್ಧ ಎಂದರು.

ಓದಿ : ಕಾರು – ಬೊಲೆರೋ ನಡುವೆ ಅಪಘಾತ : ಓರ್ವ ಸಾವು, ನಾಲ್ವರು ಗಂಭೀರ

Advertisement

ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಿ.ಕೆ. ಸಂಗಮೆಶ್ವರ್‌ ಕನ್ನಡ ಹೃದಯದ ಭಾಷೆಯಾಗಬೇಕು. ಕನ್ನಡ ಭಾಷೆಗೆ ಮೋಸ ಮಾಡಿದರೆ ಅದು ಹೆತ್ತ ತಾಯಿಗೆ ದ್ರೋಹ ಬಗೆದಂತೆ. ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆ ಎಂಬಂತೆ ರಾಜ್ಯದಲ್ಲಿ ಎಲ್ಲೆಡೆ ಕನ್ನಡ ಬಳಕೆಯಾಗಬೇಕು ಎನ್ನುವ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ಭದ್ರಾವತಿಯಲ್ಲಿ ಕೇಂದ್ರ ಗೃಹ ಸಚಿವರು ಉದ್ಘಾಟನೆ ಮಾಡಿದ ಆರ್‌ಎಎಫ್‌ ಘಟಕದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿ ಫಲಕವನ್ನು ಹಾಕದೆ ಕನ್ನಡಿಗರಿಗೆ ಅವಮಾನ ಹಾಗೂ ಕನ್ನಡಕ್ಕೆ ದ್ರೋಹ ಮಾಡಿದ್ದಾರೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಸರ್‌.ಎಂ.ವಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ತಾಲೂಕು ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ವಿಜಯದೇವಿ ಅವರ ಒಲವು ಕವಿತೆಯಾದ ಅಲ್ಲಮ ಪುಸ್ತಕವನ್ನು ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ಬಿಡುಗಡೆ ಮಾಡಿದರು.

ನಿಕಟಪೂರ್ವಅಧ್ಯಕ್ಷ ಎಚ್‌.ಎನ್‌. ಮಹಾರುದ್ರ, ಜಿಪಂ ಸದಸ್ಯ ಮಣಿಶೇಖರ್‌, ಕ್ಷೇತ್ರ ಶಿಕ್ಷಣಾ ಧಿಕಾರಿ ಸೊಮಶೇಖರಯ್ಯ, ಬಸವೇಶ್ವರ ಸಭಾ ಭವನದ ಮಾಲೀಕ ಶಿವಕುಮಾರ್‌, ಸುದರ್‌ರಾಜ್‌ ಮತ್ತಿತರರು ಮಾತನಾಡಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ರಂಗಪ್ಪ ವೃತ್ತದಿಂದ ವೇದಿಕೆವರೆಗೆ ಸಮ್ಮೇಳನಾಧ್ಯಕ್ಷ ಎ.ಪಿ. ಕುಮಾರ್‌ ಹಾಗೂ ಅವರ ಧರ್ಮಪತ್ನಿ ಡಾ| ಪದ್ಮಜಾ ಅವರನ್ನು ಡೊಳ್ಳುವಾದ್ಯ ಸಹಿತವಾಗಿ ಮೆರವಣಿಗೆ ಮೂಲಕ ಕರೆತರಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ಸಭಾ ಭವನ ಮುಂಭಾಗದಲ್ಲಿ ರಾಷ್ಟ್ರಧ್ವಜವನ್ನು ಗ್ರೇಡ್‌-2 ರಂಗಮ್ಮ, ನಾಡಧ್ವಜವನ್ನು ಜಿಲ್ಲಾ ಕಸಾಪ ಉಪಾಧ್ಯಕ್ಷ ಎಚ್‌.ಎನ್‌. ಮಹಾರುದ್ರ ಹಾಗು ಪರಿಷತ್‌ ಧ್ವಜವನ್ನು ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್‌ ಅನಾವರಣ ಮಾಡಿದರು.

ಓದಿ : ರೈತರ ಹೋರಾಟ ಹತ್ತಿಕ್ಕುವ ತಂತ್ರ ಕೈಬಿಡಿ

Advertisement

Udayavani is now on Telegram. Click here to join our channel and stay updated with the latest news.

Next